ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು | ಭಾಷಾ ಜ್ಞಾನ ಹೆಚ್ಚಿಸಿದ ಇಂಗ್ಲಿಷ್ ಫೆಸ್ಟ್

ಕೆಪಿಎಸ್ ಸರ್ಕಾರಿ ಶಾಲೆಯಲ್ಲಿ ಹೊಸ ಪ್ರಯತ್ನ: ಮಕ್ಕಳು, ಪೋಷಕರ ಮೆಚ್ಚುಗೆ
ಎಚ್.ಎಸ್.ಅನಿಲ್ ಕುಮಾರ್
Published 25 ಜನವರಿ 2024, 5:38 IST
Last Updated 25 ಜನವರಿ 2024, 5:38 IST
ಅಕ್ಷರ ಗಾತ್ರ

ಹಳೇಬೀಡು: ‘ಇಂಗ್ಲಿಷ್ ಭಾಷಾ ಜ್ಞಾನದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಕಡಿಮೆ ಅಲ್ಲ ಎಂಬುದನ್ನು ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಮಕ್ಕಳು ಈಚೆಗೆ ನಡೆದ ಇಂಗ್ಲಿಷ್ ಫೆಸ್ಟ್‌ನಲ್ಲಿ ಸಾಧಿಸಿ ತೋರಿಸಿದರು. 

ಶಿಕ್ಷಕರ ಸಹಕಾರದಿಂದ ವಿದ್ಯಾರ್ಥಿಗಳಿಂದಲೇ ಅಚ್ಚುಕಟ್ಟಾದ  ಕಾರ್ಯಕ್ರಮ ನಡೆಯಿತು. ನಿರೂಪಕರು ಸಂದರ್ಭಕ್ಕೆ ಅನುಗುಣವಾಗಿ ಚಿಂತಕರ ಮಾತುಗಳನ್ನು ತಪ್ಪಿಲ್ಲದಂತೆ ಇಂಗ್ಲಿಷ್ ಭಾಷೆಯಲ್ಲಿ ಉಚ್ಚರಿಸುತ್ತಾ, ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳನ್ನು ಇಂಗ್ಲಿಷ್ ಭಾಷೆಯಲ್ಲಿಯೇ ಸ್ವಾಗತಿಸಲಾಯಿತು. ಇಂಗ್ಲಿಷ್ ಹಾಡು ಹಾಗೂ ಪದ್ಯಗಳಿಗೆ ಹೆಜ್ಜೆ ಹಾಕಿ ವಿದ್ಯಾರ್ಥಿಗಳು ನೃತ್ಯ ಮಾಡಿ, ಸಹಪಾಠಿಗಳನ್ನು ರಂಜಿಸಿದರು. ಮಕ್ಕಳು ಪ್ರಸ್ತುತಪಡಿಸಿದ ಹಾಡು ಹಾಗೂ ಪದ್ಯಗಳು ಸುಶ್ರಾವ್ಯವಾಗಿ ಕೇಳಿ ಬಂದವು.

ನಾಟಕಗಳಲ್ಲಿ ಕೇಳಿ ಬಂದ ಸಂಭಾಷಣೆ ವ್ಯಾಕರಣ ಬದ್ಧವಾಗಿದ್ದವು. ಮಕ್ಕಳು ಉಚ್ಚರಿಸುವ ಭಾಷೆ ಸ್ವಚ್ಛವಾಗಿದೆ ಎಂಬ ಮಾತು ಪೋಷಕರಿಂದ ಕೇಳಿ ಬಂತು.   ಪೋಷಕರ ಭಾಷಾ ವ್ಯಾಮೋಹ ಅರಿತು ಶಿಕ್ಷಕರು ಇಂಗ್ಲಿಷ್ ಫೆಸ್ಟ್ ಆಯೋಜಿಸಿದ್ದರು.  

ಮಕ್ಕಳಲ್ಲಿ ಇಂಗ್ಲಿಷ್ ಜ್ಞಾನ ಬೆಳೆಯಬೇಕು. ಸರ್ಕಾರಿ ಶಾಲೆಯಲ್ಲಿಯೂ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯಬೇಕು. ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಬೇಕು. ಶಾಲೆಯಲ್ಲಿ ದಾಖಲಾತಿ ಪ್ರಮಾಣ ಸಹ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಆಯೋಜಿಸಿದ್ದ ಇಂಗ್ಲಿಷ್ ಫೆಸ್ಟ್ ಯಶಸ್ವಿಯಾಯಿತು ಎಂಬ ಮಾತು ಶಿಕ್ಷಕ ವೃಂದದಿಂದ ಕೇಳಿ ಬಂತು.

ಇಂಗ್ಲಿಷ್ ಶಿಕ್ಷಕಿಯರಾದ ನಳಿನಿ ಹಾಗೂ ಮಮತಾ ಅವರ ತಿಂಗಳ ಪರಿಶ್ರಮದಿಂದ ಇಂಗ್ಲಿಷ್ ಫೆಸ್ಟ್ ನಡೆಯಿತು. ವೀಕ್ಷಿಸಿದ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಉಪ ಪ್ರಾಂಶುಪಾಲ ಮುಳ್ಳಯ್ಯ ತಿಳಿಸಿದರು.

ಬೋರ್ಡ್‌ನಲ್ಲಿ ಇಂಗ್ಲಿಷ್ ಸ್ವರಾಕ್ಷರ ಬರೆಯುವ ಮೂಲಕ ಶಾಲಾ ಮುಖ್ಯಸ್ಥ ಮುಳ್ಳಯ್ಯ ಉದ್ಘಾಟನೆ ನೆರವೇರಿಸಿದರು. 50 ಮಕ್ಕಳು ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ ಫೆಸ್ಟ್ ಯಶಸ್ಸಿಗೆ ಸಹಕರಿಸಿದರು.

ಶಾಲೆಯ ಹೊರಾಂಗಣದಲ್ಲಿ  ಶಿಕ್ಷಕರ ಸಹಕಾರದಿಂದ ವಿದ್ಯಾರ್ಥಿಗಳು ವೇದಿಕೆ ನಿರ್ಮಾಣ ಮಾಡಿ ವಿಶೇಷ ಅಲಂಕಾರ ಮಾಡಿದ್ದರು. ಇಂಗ್ಲಿಷ್ ಮಾತ್ರವಲ್ಲದೆ ವಿವಿಧ ವಿಷಯದ ಶಿಕ್ಷಕರು ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದರು.

ಇಂಗ್ಲಿಷ್ ಹಾಡು, ಪದ್ಯಕ್ಕೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಕ್ಕೆ ತಕ್ಕಂತೆ ನಡೆದ ಕಾರ್ಯಕ್ರಮ 

ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳು ಖಾಸಗಿ ಶಾಲೆ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬುದು ಫೆಸ್ಟ್‌ನಲ್ಲಿ ಮಕ್ಕಳು ನಡೆಸಿದ ಚಟುವಟಿಕೆಯಿಂದ ಸಾಬೀತಾಗಿದೆ.
ಮುಳ್ಳಯ್ಯ ಉಪ ಪ್ರಾಂಶುಪಾಲ
ಮಾತೃಭಾಷೆ ಜೊತೆಗೆ ಮಕ್ಕಳು ಇಂಗ್ಲಿಷ್ ಓದುವ ಹಾಗೂ ಬರೆಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇಂಗ್ಲಿಷ್‌ನಲ್ಲಿ ವ್ಯವಹರಿಸುವ ಜಾಣ್ಮೆ ಬೆಳೆಯಲಿ ಎಂದು ಫೆಸ್ಟ್ ನಡೆಸಲಾಯಿತು.
ಮಮತಾ ಎಂ.ಪಿ. ನಳಿನಿ ಇಂಗ್ಲಿಷ್ ಭಾಷಾ ಶಿಕ್ಷಕಿಯರು.
ಇಂಗ್ಲಿಷ್ ಭಾಷೆ ಸರಳ ಸುಲಲಿತ. ಕಲಿಯುವುದು ಕಷ್ಟವೇನಲ್ಲ. ಮಾತನಾಡುವುದು ಹಾಗೂ ಬರೆಯವುದನ್ನು ಸುಲಭವಾಗಿ ಕರಗತ ಮಾಡಿಕೊಳ್ಳಬಹುದು ಎಂಬುದು ಫೆಸ್ಟ್‌ನಿಂದ ತಿಳಿಯಿತು.
ಅಕ್ಷತಾ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT