ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆಗೆ ಸಕಲ ಸಿದ್ಧತೆ, ಸಂಜೆಗೆ ಸ್ಪಷ್ಟ ಚಿತ್ರಣ

ರಾಜಕೀಯ ಪಕ್ಷಗಳ ನಾಯಕರ ಮನೆ, ಕಚೇರಿಗಳಿಗೂ ಭದ್ರತೆ: ಎಸ್‌ಪಿ
Last Updated 21 ಮೇ 2019, 13:59 IST
ಅಕ್ಷರ ಗಾತ್ರ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಬೆಳಗ್ಗೆ 8ರಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.

ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂಟರ್‌ನೆಟ್‌, ಟೆಲಿಪೋನ್ ಸಂಪರ್ಕ, ವಿದ್ಯುತ್‌ ಪೂರೈಕೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ. ಮಾಧ್ಯಮ ಕೇಂದ್ರ, ಊಟದ ವ್ಯವಸ್ಥೆ ಸೇರಿದಂತೆ ವೀಕ್ಷಕರ ಕೊಠಡಿಗಳು ಸಿದ್ಧಗೊಂಡಿವೆ ಎಂದು ತಿಳಿಸಿದರು.

ಮತ ಎಣಿಕೆ ಪ್ರಕ್ರಿಯೆಗೆ 408 ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ಎಣಿಕಾ ಕಾರ್ಯಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ನಂತೆ 8 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 112 ಇವಿಎಂ ಮತ ಎಣಿಕಾ ಟೇಬಲ್‍ ಹಾಕಲಾಗಿದೆ .ಅಂಚೆ ಮತ ಪತ್ರ ಹಾಗೂ ಇ.ಟಿ.ಪಿ.ಬಿ.ಎಸ್. ಮತಪತ್ರಗಳ ಎಣಿಕೆ ಕಾರ್ಯವನ್ನು ಚುನಾವಣಾಧಿಕಾರಿಗಳ ಕೊಠಡಿ ಸಂಖ್ಯೆ 238 ರಲ್ಲಿ ನಡೆಸಲಾಗುವುದು, ಇದಕ್ಕಾಗಿ 10 ಟೇಬಲ್‍ ಹಾಕಲಾಗಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಇವಿಎಂ –ವಿವಿ ಪ್ಯಾಟ್‌ ಮತಗಳನ್ನು ತಾಳೆ ಹಾಕವುದು ಕಡ್ಡಾಯವಾಗಿರುವುದರಿಂದ ಫಲಿತಾಂಶದ ಸ್ವಷ್ಟ ಚಿತ್ರಣ ಸಿಗುವುದು ಸಂಜೆ ಆಗಬಹುದು. ಪ್ರತಿ ವಿಧಾನಸಭಾ ಕ್ಷೇತ್ರದ ಐದು ವಿವಿ ಪ್ಯಾಟ್‌ ಚೀಟಿಗಳನ್ನು ಎಣಿಕೆ ಮಾಡಬೇಕು ಎಂದು ವಿವರಿಸಿದರು.

ಒಟ್ಟಾರೆ 8 ಕೊಠಡಿಗಳಿದ್ದು, ಪ್ರತಿ ಕೊಠಡಿಗಳಲ್ಲಿ 14 ಟೇಬಲ್, 1 ಎಆರ್ ಓ ಟೇಬಲ್, 1 ವೀಕ್ಷಕರ ಟೇಬಲ್ ಸೇರಿ 16 ಟೇಬಲ್ ಇರುತ್ತವೆ. ಪ್ರತಿ ಟೇಬಲ್‌ಗೆ ಮೂವರು ಸಿಬ್ಬಂದಿ ನೇಮಿಸಿದ್ದು, ವೀಕ್ಷಕರ ಟೇಬಲ್ ಹತ್ತಿರ ಇಬ್ಬರು ಹೆಚ್ಚುವರಿ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋರ್ ಮಾತನಾಡಿ, ಮತ ಎಣಿಕೆ ಹಿನ್ನೆಲೆಯಲ್ಲಿ ಸ್ಟ್ರಾಂಗ್ ರೂಂ, ಇವಿಎಂ ಸಾಗಾಟ ಮತ್ತು ಎಣಿಕೆ ಕೊಠಡಿಗಳಿಗೆ ಪ್ಯಾರಾ ಮಿಲಿಟರಿ ನಿಯೋಜಿಸಲಾಗಿದೆ. ಜಿಲ್ಲಾದ್ಯಂತ 1200 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಹೇಳಿದರು.

ಯಾವುದೇ ಗಲಭೆ, ಅಶಾಂತಿ ಉಂಟಾಗಬಾರದು ಎಂಬ ಕಾರಣಕ್ಕೆ ಮೇ 23ರ ಬೆಳಗ್ಗೆ 6 ರಿಂದ 24ರ ವರೆಗೆ ಸೆಕ್ಷೆನ್ 144ರ ಅಡಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಯಾವುದೇ ರೀತಿಯ ಸಂಭ್ರಮಾಚರಣೆ ನಡೆಸಬಾರದು ಎಂದರು.

ಭದ್ರತೆಗಾಗಿ 7 ಕೆಎಸ್‍ಆರ್‌ಪಿ, 21 ಡಿಎಆರ್, ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಜಿಲ್ಲಾದ್ಯಂತ 129 ಸೂಕ್ಷ್ಮ ಪ್ರದೇಶಗಳ ಗುರುತಿಸಿ, ಅಧಿಕ ಭದ್ರತೆ ಒದಗಿಸಲಾಗುವುದು. ಅಲ್ಲದೇ ರಾಜಕೀಯ ನಾಯಕರ ನಿವಾಸ, ಕಚೇರಿಗೂ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಮತ ಎಣಿಕಾ ಕೇಂದ್ರಗಳಿಗೆ ಬರುವ ಪ್ರತಿ ಅಭ್ಯರ್ಥಿ, ಏಜೆಂಟ್ ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಮೂರು ಹಂತದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಖಾಸಗಿ ವಾಹನಗಳ ನಿಲುಗಡೆಗೆ ಕಾಲೇಜು ಸುತ್ತಲಿನ ಪ್ರದೇಶದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದರು.

ಸಹಾಯಕ ಚುನಾವಣಾಧಿಕಾರಿ ಎಂ.ಎಲ್.ವೈಶಾಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ತಹಶೀಲ್ದಾರಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT