ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂಗೆಡ್ಡೆ ಮಂಡಳಿ ಸ್ಥಾಪಿಸಲು ಆಗ್ರಹ

ಪೊಟ್ಯಾಟೋ ಕ್ಲಬ್ ಚಟುವಟಿಕೆ ಆರಂಭ: ಯೋಗಾ ರಮೇಶ್
Last Updated 13 ಫೆಬ್ರುವರಿ 2021, 14:48 IST
ಅಕ್ಷರ ಗಾತ್ರ

ಹಾಸನ: ಬಿಜೆಪಿಯಲ್ಲಿ ಉಂಟಾದ ರಾಜಕೀಯ ಬದಲಾವಣೆಯಿಂದ ಮನನೊಂದು ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದೆ. ಆದರೆ, ಅವರು ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳದ ಪರಿಣಾಮ ಕಾಂಗ್ರೆಸ್‌ ತೊರೆದು ಈಗ ಸ್ವತಂತ್ರವಾಗಿದ್ದೇನೆ ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾ ರಮೇಶ್ ಹೇಳಿದರು.

‘ಶಾಸಕನಾಗಬೇಕೆಂಬ ಹಂಬಲದಿಂದ ರಾಜಕೀಯಕ್ಕೆ ಬಂದೆ. ಅಧಿಕಾರದ ಆಸೆ ಇಲ್ಲ. ಹಾಗಾಗಿ ಇದ್ದ ನೌಕರಿ ಸಹ ಬಿಟ್ಟು ಬಂದಿದ್ದೇನೆ. ಮೊದಲಿನಿಂದಲೂ ಜನರು ಪೊಟ್ಯಾಟೋ ಕ್ಲಬ್‌ ಮೂಲಕ ಗುರುತಿಸಿದರು. ಹಿಂದೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ ವೇಳೆ ಕ್ಲಬ್‌ ಅನ್ನು ಸಕ್ರಿಯವಾಗಿ ಇಟ್ಟುಕೊಳ್ಳಲು ಕಷ್ಟವಾಗಿತ್ತು. ಈಗ ಯಾವ ಪಕ್ಷದಲ್ಲಿಯೂ ಇಲ್ಲದ ಕಾರಣ ಮತ್ತೆ ಚಟುವಟಿಕೆ ಆರಂಭಿಸಿದ್ದೇನೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲೇ ಶೇಕಡಾ 50 ರಷ್ಟು ಆಲೂಗೆಡ್ಡೆ ಬೆಳೆಯುವ ಹಾಸನ ಜಿಲ್ಲೆಯಲ್ಲಿ ಆಲೂಗೆಡ್ಡೆ ಮಂಡಳಿ ಸ್ಥಾಪಿಸಿ, ಅದಕ್ಕೆ ಈ ಬಾರಿಯ ಬಜೆಟ್‍ನಲ್ಲಿ ₹100 ಕೋಟಿ ಅನುದಾನ ಮೀಸಲಿಡಬೇಕು. ಈ ಮೂಲಕ ಬೆಳೆಗಾರರಿಗೆ ರಾಜ್ಯ ಸರ್ಕಾರ ನೆರವಾಗಬೇಕು’ ಒತ್ತಾಯಿಸಿದರು.

ಈಗಾಗಲೇ ಕಾಫಿ, ತಂಬಾಕು ಮತ್ತು ತೆಂಗು ಮಂಡಳಿ ತೆರೆಯಲಾಗಿದೆ. ಅದರಂತೆ ಆಲೂಗೆಡ್ಡೆ ಅಭಿವೃದ್ಧಿಗೂ ಮಂಡಳಿ ರಚನೆ ಮಾಡಬೇಕು. ಮಂಡಳಿ ಸ್ಥಾಪನೆಯಿಂದ ಸ್ಥಳೀಯ ಆಲೂಗೆಡ್ಡೆಯನ್ನೇ ಬಿತ್ತನೆ ಬೀಜ ಎಂದು ಮಾರಾಟ ಮಾಡುವ ಅಕ್ರಮಕ್ಕೆ ಬ್ರೇಕ್ ಬೀಳಲಿದೆ ಎಂದು ತಿಳಿಸಿದರು.

ಜಿಲ್ಲೆ ಸೇರಿದಂತೆ ಆಲೂಗೆಡ್ಡೆ ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ,
ಚಿಕ್ಕಮಗಳೂರು, ಬೆಳಗಾವಿ, ಧಾರವಾಡ ಮೊದಲಾದ ಜಿಲ್ಲೆಗಳಲಿ ಆಲೂಗೆಡ್ಡೆ ಬೆಳೆಗೆ ಉತ್ತೇಜನ ನೀಡುವ
ನಿಟ್ಟಿನಲ್ಲಿ ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ದೃಢೀಕೃತ ಬಿತ್ತನೆ ಬೀಜ ನೀಡುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆಗೆ ಕಡಿವಾಣ ಹಾಕುವ ಕೆಲಸ ತುರ್ತಾಗಿ ಆಗಬೇಕಿದೆ. ಈ ವಿಷಯದಲ್ಲಿ ಪಕ್ಷ
ರಾಜಕೀಯ ಬೇಡ. ಹಲವು ದಶಕಗಳಿಂದ ಬೆಳೆನಷ್ಟ ಮತ್ತು ಅಮಾಯಕರ ಜೀವಹಾನಿಗೆ ಕಾರಣವಾಗಿರುವ ಕಾಡಾನೆ ಸಮಸ್ಯೆ ಕಡಿವಾಣ ಹಾಕುವ ಸಂಬಂಧ ಆನೆ ಕಾರಿಡಾರ್ ನಿರ್ಮಾಣಕ್ಕೆ ಬಜೆಟ್‍ನಲ್ಲಿ ನಿಗದಿತ ಹಣ ಮೀಸಲಿಡಬೇಕು. ಅಲ್ಲದೆ ತಜ್ಞರ ಸಮಿತಿ ರಚನೆ ಮಾಡಬೇಕುಎಂದರು.

ಸಂಕಷ್ಟದಲ್ಲಿರುವ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೂ ಶೇಕಡಾ 100 ರಷ್ಟು ಸಹಾಯಧನ ಹೆಚ್ಚಿಸಬೇಕು. ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಮೊದಲಾದ ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ಬೆಳೆಗಾರರಿಗೂ ಪ್ರೋತ್ಸಾಹಧನ ನೀಡಬೇಕು ಎಂದು ರಾಜ್ಯಸರ್ಕಾರಕ್ಕೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಯರಾಂ, ಲೋಕೇಶ್, ರಾಜಣ್ಣ, ಗೋಪಾಲೇಗೌಡ, ಚಂದ್ರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT