ಶನಿವಾರ, ನವೆಂಬರ್ 16, 2019
24 °C
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭಿಮತ

ಫ್ರೀ ಭಾಗ್ಯ ಕೊಟ್ಟು, ಈಗ ಸರ್ಕಾರಕ್ಕೇ ದೌರ್ಭಾಗ್ಯ ಬಂದಿದೆ: ಸೋಮಶೇಖರ ಶಿವಾಚಾರ್ಯ

Published:
Updated:
Prajavani

ಸಕಲೇಶಪುರ: ಎಲ್ಲಾ ಫ್ರೀ ಭಾಗ್ಯ ಕೊಟ್ಟು, ಈಗ ಸರ್ಕಾರಕ್ಕೇ ದೌರ್ಭಾಗ್ಯ ಬಂದೊದಗಿದೆ’ ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮಿ ಹೇಳಿದರು.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಇಲ್ಲಿಯ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ, ಸಮುದಾಯದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಜಾರಿಗೆ ತಂದಿರುವಂತಹ ಕೆಲವು ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿವೆ. ಪ್ರತಿಭೆ ಇರುವವರಿಗೆ ದುಡಿಯುವುದಕ್ಕೆ ಅವಕಾಶಗಳನ್ನು ಕಲ್ಪಿಸುವ ವ್ಯವಸ್ಥೆ ಆಗಬೇಕು ಎಂದರು.

ಶಾಸಕ ಕೆ.ಎಸ್‌. ಲಿಂಗೇಶ್‌ ಮಾತನಾಡಿ, 80ರ ದಶಕಕ್ಕೂ ಮೊದಲು 25ಕ್ಕಿಂತ ಹೆಚ್ಚು ವೀರಶೈವ ಲಿಂಗಾಯಿತ ಶಾಸಕರು ಆಯ್ಕೆಯಾಗಿ ವಿಧಾನಸಭೆಗೆ ಬರುತ್ತಿದ್ದರು. ಹಾಲಿ ವಿಧಾನ ಸಭೆಯಲ್ಲಿ ಕೇವಲ 4 ಮಂದಿ ವೀರಶೈವರು ಇದ್ದಾರೆ. ಇದಕ್ಕೆ ಒಗ್ಗಟ್ಟಿನ ಕೊರತೆ, ನಮ್ಮೊಳಗಿರುವ ಒಳಪಂಗಡಗಳೇ ಹೊರತು ಬೇರೆ ಯಾರೂ ಸಹ ಕಾರಣರಲ್ಲ ಎಂದರು.

ತೆಂಕಲಗೋಡು ಮಠದ ಚನ್ನಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಮಕ್ಕಳಿಗೆ ವಿದ್ಯೆಯ ಜೊತೆ ಸಂಸ್ಕಾರ ಕಲಿಸಿ. ಕೇವಲ ವಿದ್ಯೆ ಅವರ ಸ್ವಾರ್ಥ ಬದುಕಿಗೆ ಮೀಸಲಾಗುತ್ತದೆ. ಸಂಸ್ಕಾರದಿಂದ ನಿಮ್ಮ ಮಕ್ಕಳು ನಾಳೆ ಸಮಾಜದ ಆಸ್ತಿಯಾಗುತ್ತಾರೆ ಎಂದರು.

ಮಾಜಿ ಶಾಸಕ ಬಿ.ಆರ್‌. ಗುರುದೇವ್‌, ಜವೇನಳ್ಳಿ ಮಠದ ಸಂಗಮೇಶ್ವರ ಸ್ವಾಮಿ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿದ್ದೇಶ್ ನಾಗೇಂದ್ರ, ರಾಜ್ಯ ಅಧ್ಯಕ್ಷ ಬಿ. ನಿರಂಜನ್, ತಾಲ್ಲೂಕು ಅಧ್ಯಕ್ಷ ಲಿಂಗದೇವರು, ಡಾ. ವಿಜಯ್ ಅಂಗಡಿ, ಉದಯ್‌ಕುಮಾರ್‌, ಎಸಿಎಫ್‌ ಲಿಂಗರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಯಡೇಹಳ್ಳಿ ಆರ್. ಮಂಜುನಾಥ್, ಟಿಎಪಿಎಂಎಸ್‌ ಅಧ್ಯಕ್ಷ ಕೌಡಹಳ್ಳಿ ಲೋಹಿತ್‌, ಸೆಸ್ಕ್ ಇಇ ಜಿ. ಜಗದೀಶ್‌, ತಾಲ್ಲೂಕು ವೀರಶೈವ ಸಮಾಜ ಅಧ್ಯಕ್ಷ ಎಚ್‌.ಎನ್‌. ದೇವರಾಜ್‌, ಅಕ್ಕಮಹಾದೇವಿ ಮಹಿಳಾ ಸಮಾಜ ಅಧ್ಯಕ್ಷ ರೇಖಾ ಸುರೇಶ್‌, ಬಿ.ಜಿ. ಯತೀಶ್‌ ಹಾಗೂ ಇತರರು ಇದ್ದರು.

ಪ್ರತಿಕ್ರಿಯಿಸಿ (+)