ಶನಿವಾರ, ಸೆಪ್ಟೆಂಬರ್ 18, 2021
30 °C
ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ

‘ಹಿರೇಕಲ್ಲುಗುಡ್ಡ: ವನ್ಯಜೀವಿ ಸಂರಕ್ಷಣಾ ತಾಣವಾಗಿಸಲು ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಸೀಕೆರೆ: ‘ನೈಸರ್ಗಿಕ ಸಂಪತ್ತು ರಕ್ಷಣೆಗೆ ಹೆಚ್ಚು ಗುಂಡು ತೋಪು ನಿರ್ಮಿಸಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ಸಂರಕ್ಷಣೆಯ ಪಾರಂಪರಿಕ ತಾಣ ಅಭಿವೃದ್ಧಿಪಡಿಸಲು ಅಧಿಕಾರಿಗಳು ಸಹಕರಿಸಬೇಕು’ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಮತ್ತು ಜೀವ ವೈವಿಧ್ಯ ಜಾಗೃತಿ ಅಭಿಯಾನ ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಜೀವವೈವಿಧ್ಯ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ತಾಲ್ಲೂಕಿನ ಹಿರೇಕಲ್ಲು ಗುಡ್ಡವನ್ನು ವನ್ಯಜೀವಿ ಸಂರಕ್ಷಣಾ ತಾಣವನ್ನಾಗಿಸುವ  ಪ್ರಕ್ರಿಯೆ ಚಾಲನೆಯಲ್ಲಿದೆ. ಬೆಟ್ಟ ಗುಡ್ಡಗಳ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು. ಅರಣ್ಯ ಪ್ರದೇಶ, ಕೆರೆಗಳ ಒತ್ತುವರಿ ತೆರವು ಕಾರ್ಯ ಚುರುಕುಗೊಳಿಸಬೇಕು. ಜೀವವೈವಿಧ್ಯ ಸ್ಥಳಗಳನ್ನು ನಾಡಿನ ಪಾರಂಪರಿಕ ತಾಣ ಎಂದು ಪರಿಗಣಿಸಲಾಗುವುದು.  ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳು ಉದ್ಯೋಗ ಖಾತ್ರಿ ಯೋಜನೆಯಡಿ ಜೀವ ವೈವಿಧ್ಯ ಸಂರಕ್ಷಣೆಗೆ ಒತ್ತು ನೀಡಬೇಕು. ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳು, ಸಾಮಾನ್ಯ ಅರಣ್ಯ ಇಲಾಖೆಗಳು ಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಜವಾಬ್ದಾರಿ ಹೊರಬೇಕಿದೆ’ ಎಂದು ತಿಳಿಸಿದರು.

‘ಜಾನುವಾರು ತಳಿಗಳ ಸಂರಕ್ಷಣೆ ದೃಷ್ಟಿಯಿಂದ ತಾಲ್ಲೂಕಿನ ಹಬ್ಬನಘಟ್ಟ ಮತ್ತು ಬಿದರೆ ಕಾವಲುಗಳನ್ನು ಜೈವಿಕ ಕೇಂದ್ರ ವೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯಿತಿ ಸಹಕಾರ ಅತ್ಯಗತ್ಯ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ಅಭಿಯಾನ ಆರಂಭಿಸುವಂತೆ’  ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ಸೂಚಿಸಿದರು.

ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಸುಮಾರು 160 ಕೆರೆಗಳಿವೆ. ಇದರಲ್ಲಿ 34 ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತವೆ. 311 ಕಟ್ಟೆಗಳು ಮತ್ತು ಗೋಕಟ್ಟೆಗಳಿವೆ. ಈಗಾಗಲೇ 90 ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ ಮತ್ತು 49 ಕೆರೆಗಳ ಒತ್ತುವರಿ ತೆರವು ಕಾರ್ಯ ಪೂರ್ಣಗೊಂಡಿದೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಟರಾಜ್ ಮಾತನಾಡಿ, ‘ತಾಲ್ಲೂಕಿನಲ್ಲಿ 122 ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಮುಗಿದಿದೆ. 50 ಕೆರೆಗಳನ್ನು ಸಮಗ್ರ ಅಭಿವೃದ್ಧಿ ಕೆರೆಗಳನ್ನಾಗಿ ಪರಿಗಣಿಸ ಲಾಗಿದೆ, 90 ನೀರಿನ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಅಶೋಕ್, ತಾಲ್ಲೂಕಿನಲ್ಲಿ ಸುಮಾರು 700 ರಿಂದ 800 ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರೆ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್, ದಾಳಿಂಬೆ, ಗೋಡಂಬಿ ಬೆಳೆಯಲು ಪ್ರೋತ್ಸಾಹಿಸ ಲಾಗುತ್ತಿದೆ. ತೆಂಗಿನ ಬೆಳೆಯಲ್ಲಿ ನುಸಿರೋಗ ಕ್ಷೀಣಿಸಿದೆ’ ಎಂದು ಮಾಹಿತಿ ನೀಡಿದರು.

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ,  ಅರಣ್ಯಾಧಿಕಾರಿಗಳಾದ ಬಸವರಾಜ್, ರವೀಂದ್ರ, ಸತೀಶ್, ಪ್ರಸನ್ನ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.