ಶುಕ್ರವಾರ, ನವೆಂಬರ್ 15, 2019
22 °C
ಹಿರಿಯ ನಾಗರಿಕರಿಗೆ ಉಚಿತ ಪ್ರವೇಶ, ದೇಗುಲಕ್ಕೆ ಬಸ್‌ ವ್ಯವಸ್ಥೆ

ಹಾಸನಾಂಬ ಜಾತ್ರೆ ಸಿದ್ಧತೆ ಪೂರ್ಣ

Published:
Updated:
Prajavani

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ಜಾತ್ರಾ ಮಹೋತ್ಸವದ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

ಈ ಬಾರಿ 5 ರಿಂದ 6 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ದರ್ಶನೋತ್ಸವ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಭಕ್ತರು ಮಳೆಯಲ್ಲಿ ನೆನೆಯದಂತೆ ಸರದಿ ಸಾಲುಗಳಿಗೆ ವಾಟರ್‌ ಪ್ರೂಫ್‌ ಛಾವಣಿಯನ್ನು ಹಾಕಲಾಗುವುದು. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ದರ್ಶನಕ್ಕೆ ದೇವಸ್ಥಾನದ ಹಿಂಭಾಗದಲ್ಲಿ ಪ್ರತ್ಯೇಕ ಸರದಿ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ವರ್ಷವೂ 24*7 ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಳೆಯಿಂದಾಗಿ ರಸ್ತೆ ದುರಸ್ತಿ ಕಾರ್ಯ ಸಂಪೂರ್ಣ ಮುಗಿದಿಲ್ಲ. ಗುಂಡಿಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗಿದೆ. 17ರಂದು ಮಧ್ಯಾಹ್ನ 12.30ಕ್ಕೆ ದೇಗುಲದ ಬಾಗಿಲು ತೆರೆಯಲಾಗುತ್ತದೆ. ರಾತ್ರಿ 11 ರಿಂದ ಬೆಳಗ್ಗೆ 6ರ ವರೆಗೆ ನೈವೇದ್ಯ ಇರುವುದರಿಂದ ಸಾರ್ವಜನಿಕರಿಗೆ ದರ್ಶನ ಇಲ್ಲ. 18ರಂದು ಬೆಳಿಗ್ಗೆ 6 ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನೈವೇದ್ಯ ಅವಧಿಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದು ವಿವರಿಸಿದರು.

₹ 300 ಟಿಕೆಟ್‌ ಗೆ ದೇಗುಲದ ಹಿಂಭಾಗ ಹಾಗೂ ₹ 1000 ಟಿಕೆಟ್‌ಗೆ ದೇಗುಲದ ಮುಂಭಾಗ ನೇರ ಪ್ರವೇಶ ಇದೆ. ದೇವಸ್ಥಾನದ ಮುಂಭಾಗದಿಂದ 20 ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಸಪ್ತ ಮಾತೃಕೆಯರ ಸ್ತಬ್ಧಚಿತ್ರಗಳ ಮೆರವಣಿಗೆಯೂ ಇರಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಾಗಿದ್ದು, ಬರುವ ಬಗ್ಗೆ ಇನ್ನೂ ಖಾತ್ರಿ ಪಡಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಭಕ್ತರು ಆಯಾಸವಾದಾಗ ಕೂರಲು ಅಲ್ಲಲ್ಲಿ ಬೆಂಚ್‌ಗಳನ್ನು ಇರಿಸಲಾಗುವುದು ಎಂದರು.

ಹೊಸ್‌ ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣದಿಂದ ದೇವಸ್ಥಾನಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ಅಗತ್ಯ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದ್ದು, ಆಯ ಕಟ್ಟಿನ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ದೇಗುಲದ ಹುಂಡಿ ಹಣವನ್ನು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. 29ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ನುಡಿದರು.

ಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ರಾಮ ನಿವಾಸ್‌ ಸೆಪಟ್‌, ಉಪವಿಭಾಗಾಧಿಕಾರಿಗಳಾದ ಎಚ್‌.ಎಲ್‌.ನಾಗರಾಜ್‌, ಕವಿತಾ ರಾಜರಾಂ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನಂದಿನಿ ಇದ್ದರು.

ಪ್ರತಿಕ್ರಿಯಿಸಿ (+)