ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬೆ ಪವಾಡ ಬಹಿರಂಗ ಪಡಿಸಿ

ಜಿಲ್ಲಾಡಳಿತ ಒಪ್ಪದಿದ್ದರೆ ನ್ಯಾಯಾಲಯದ ಮೆಟ್ಟಿಲೇರಲು ಬಿಜಿವಿಎಎಸ್ ನಿರ್ಧಾರ
Last Updated 10 ಅಕ್ಟೋಬರ್ 2018, 16:17 IST
ಅಕ್ಷರ ಗಾತ್ರ

ಹಾಸನ : ಹಾಸನಾಂಬ ದೇವಾಲಯದಲ್ಲಿ ವರ್ಷಪೂರ್ತಿ ಆರದ ದೀಪ, ಹಳಸದ ಅನ್ನ ಹಾಗೂ ಬಾಡದ ಹೂವನ್ನು ಸಾರ್ವಜನಿಕರಿಗೆ ಬಹಿರಂಗವಾಗಿ ತೋರಿಸಲು ಜಿಲ್ಲಾಡಳಿತಕ್ಕೆ ಒಪ್ಪದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವ ನಿರ್ಧಾರ ಕೈಗೊಳ್ಳಲಾಯಿತು.

ನಗರದ ಸಂಸ್ಕೃತ ಭವನ ಸಮೀಪದ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಎಸ್‌) ಕಚೇರಿಯಲ್ಲಿ ಕರೆದಿದ್ದ ದುಂಡು ಮೇಜಿನ ಸಭೆಯಲ್ಲಿ ಪ್ರಗತಿಪರ ಚಿಂತಕರು, ಶಿಕ್ಷಕರು, ಹೋರಾಟಗಾರರು ತಮ್ಮ ಅಭಿಪ್ರಾಯ ಮಂಡಿಸಿ, ಸಲಹೆ ನೀಡಿದರು. ಅಂತಿಮವಾಗಿ ಜಿಲ್ಲಾಡಳಿತ ಪವಾಡ ತೋರಿಸಲು ಅವಕಾಶ ನೀಡದಿದ್ದರೆ ಕೋರ್ಟ್‌ ಮೊರೆ ಹೋಗಲು
ಬಿಜಿವಿಎಎಸ್‌ ಪದಾಧಿಕಾರಿಗಳು ಹಾಗೂ ಚಿಂತಕರು ತೀರ್ಮಾನಿಸಿದರು.

‘ಭಾರತೀಯ ಧಾರ್ಮಿಕ ಪರಂಪರೆಗೆ ತನ್ನದೇ ಆದ ಮಹತ್ವವಿದೆ. ದೇವರು ಹಾಗೂ ಅದರ ಶಕ್ತಿಯನ್ನು ಯಾರೂ ಅನುಮಾನ ದೃಷ್ಟಿಯಿಂದ ನೋಡಬಾರದು. ಆದರೆ, ದೇವರ ಹೆಸರಲ್ಲಿ ನಡೆಯುತ್ತಿರುವ ಪವಾಡವನ್ನು ಬಯಲಿಗೆ ಎಳೆಯಲೆಬೇಕು. ಪವಾಡವೆಂದರೆ ನಿಸರ್ಗದ ವಿರುದ್ಧ ನಡೆಯುವ ಪ್ರಕ್ರಿಯೆ. ಪರಿಸರಕ್ಕೆ ವಿರೋಧವಾಗಿ ಯಾವುದೇ ಪ್ರಕ್ರಿಯೆ ನಡೆಯುತ್ತಿದೆ ಎಂದರೆ ಅದು ವಿಸ್ಮಯವೇ ಸರಿ. ಆದ್ದರಿಂದ ನುರಿತ ವಿಜ್ಞಾನಿ ಹಾಗೂ ಸಂಶೋಧಕರ ಸಮ್ಮುಖದಲ್ಲಿ ಹಾಸನಾಂಬೆ ದೇವಿಯ ನಿಜರೂಪ ತಿಳಿಯಲು ಅವಕಾಶ ಮಾಡಿಕೊಡಬೇಕು’ ಎಂದು ಒಮ್ಮತದಿಂದ ಒತ್ತಾಯಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ‘ಹಾಸನಾಂಬ ದೇವಿಯ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡುತ್ತಿಲ್ಲ. ದೇವಾಲಯ ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಇತರೆ ದೇವಾಲಯಗಳ ರೀತಿ ಇಲ್ಲಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಸಲಹೆ ನೀಡಿದರು.

ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜ್ ಮಾತನಾಡಿ, ‘ಯಾವುದೇ ಒಂದು ಸ್ಥಳದಲ್ಲಿ ದೀಪ ಉರಿಯಬೇಕೆಂದರೆ ಗಾಳಿ, ಶಾಖ ಹಾಗೂ ಇಂಧನ ಬೇಕು. ಆದರೆ, ಹಾಸನಾಂಬೆ ದೇವಾಲಯದಲ್ಲಿ ವರ್ಷಪೂರ್ತಿ ಇವುಗಳ ಸಹಾಯವಿಲ್ಲದೆ ದೀಪ ಉರಿಯುತ್ತಿದೆ ಎಂಬುದನ್ನು ನಂಬುವುದು ಹೇಗೆ? ಭಾರತ ಜ್ಞಾನ ವಿಜ್ಞಾನ ಸಮಿತಿ 25 ವರ್ಷಗಳಿಂದ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋವೃತ್ತಿ ಬೆಳೆಸುವ ಕೆಲಸ ಮಾಡುತ್ತಿದೆ. ದೇವಿ ಪವಾಡ ಸತ್ಯಾಸತ್ಯತೆ ಅರಿಯುವ ಉದ್ದೇಶ ವೈಜ್ಞಾನಿಕ ಮನೋಭಾವದಿಂದಲೇ ಹೊರತು ಒಂದು ಧರ್ಮ ಅಥವಾ ಜನಾಂಗವನ್ನು ಟೀಕಿಸುವ ಕೆಲಸ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಿರುವ ಸರ್ಕಾರ ಮತ್ತೊಂದೆಡೆ ಮೌಢ್ಯವನ್ನು ಪ್ರತಿಪಾದಿಸುತ್ತಿದೆ. ಕಳೆದ ವರ್ಷ ಜಾತ್ರೆ ಸಂದರ್ಭದಲ್ಲಿ ಜಿಲ್ಲಾಡಳಿತವೇ ಹಾಸನಾಂಬೆಯ ಪವಾಡದ ಕುರಿತು ಕರಪತ್ರ ಹಂಚಿದೆ. ಆದ್ದರಿಂದ ಜಿಲ್ಲಾಡಳಿತದ ಹೇಳಿಕೆ ಪ್ರಶ್ನಿಸುತ್ತಿದ್ದೇವೆ. ಇದನ್ನು ಇತರ ಸಂಘಟನೆಗಳು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ’ ಎಂದು ಮನವಿ ಮಾಡಿದರು.

ಲೇಖಕ ಜ.ಹೊ.ನಾರಾಯಣಸ್ವಾಮಿ, ಆರ್‌ಪಿಐ ಸತೀಶ್, ಎಚ್.ಕೆ.ಸಂದೇಶ್, ನಾರಾಯಣ್‌ದಾಸ್‌, ಸಿ..ಚ.ಯತೀಶ್ವರ್, ಮಮತ ಅರಸೀಕೆರೆ, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಕಾರ್ಯಾಧ್ಯಕ್ಷ ಹೆತ್ತೂರು ನಾಗರಾಜ್, ಮರಿಜೋಸೆಫ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್, ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT