ಪುರದಮ್ಮ ದೇವಾಲಯ ಹುಂಡಿಯ ₹ 47 ಸಾವಿರ ಕಳವು

7
ಸ್ಥಳೀಯರಿಗೆ ಸಿಕ್ಕಿಬಿದ್ದ ಕಂದಾಯ ನಿರೀಕ್ಷಕ ವೆಂಕಟೇಶ್‌, ತಪ್ಪೊಪ್ಪಿಗೆ

ಪುರದಮ್ಮ ದೇವಾಲಯ ಹುಂಡಿಯ ₹ 47 ಸಾವಿರ ಕಳವು

Published:
Updated:
Prajavani

ಹಾಸನ: ತಾಲ್ಲೂಕಿನ ಬೀಕನಹಳ್ಳಿ ಚೌಡೇಶ್ವರಿ (ಪುರದಮ್ಮ) ದೇವಾಲಯದ ಹುಂಡಿಯಿಂದ ಕಂದಾಯ ನಿರೀಕ್ಷಕ ಹಣ ಕಳವು ಮಾಡಿರುವುದನ್ನು ಸ್ಥಳೀಯರೇ ಪತ್ತೆಹಚ್ಚಿದ ಘಟನೆ ಸಿನಿಮೀಯ ಮಾದರಿಯಲ್ಲಿ ನಡೆದಿದೆ.

ಸಾಲಗಾಮೆ ವೃತ್ತದ ಕಂದಾಯ ನಿರೀಕ್ಷಕ ವೆಂಕಟೇಶ್ ಹುಂಡಿ ಹಣ ಎಣಿಕೆ ವೇಳೆ ₹ 47 ಸಾವಿರ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಘಟನೆ ವಿವರ: ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ಬಳಿಕ ಕಂದಾಯ ನಿರೀಕ್ಷಕರು ಆಗ್ಗಾಗ್ಗೆ ಬಂದು ಹುಂಡಿಯನ್ನು ವಶಕ್ಕೆ ಪಡೆದು ಹಣ ಎಣಿಕೆ ಮಾಡಿ ಖಾತೆಗೆ ಜಮಾ ಮಾಡುತ್ತಿದ್ದರು. ಮುಜರಾಯಿ ಇಲಾಖೆಗೆ ಸೇರಿದ ಬಳಿಕ ಹುಂಡಿ ಹಣದಲ್ಲಿ ಇಳಿಮುಖುವಾಗಿರುವ ಕುರಿತು, ಅಧಿಕಾರಿಗಳು ವಂಚನೆ ಮಾಡುತ್ತಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಆದರೂ ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರು.

ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸುಪರ್ದಿಗೆ ಸೇರಿಸಲು ಹೋರಾಟ ನಡೆಸಿದ್ದ ಸ್ಥಳೀಯ ಕೃಷಿಕ ಪ್ರಕಾಶ್, ಕಂದಾಯ ನಿರೀಕ್ಷಕನನ್ನು ಬಲೆಗೆ ಕೆಡವಲೆಂದು ₹ 2 ಸಾವಿರ ಮುಖಬೆಲೆಯ ಮೂರು ನೋಟುಗಳ ಮೇಲೆ ಅವರ ಹೆಸರು ಬರೆದು ವಿಡಿಯೊ ಚಿತ್ರೀಕರಣ ಮಾಡಿಕೊಂಡು ಹುಂಡಿಗೆ ಹಾಕಿದ್ದರು.

ಕಂದಾಯ ನಿರೀಕ್ಷಕ ವೆಂಕಟೇಶ್ ಗುರುವಾರ ದೇವಾಲಯಕ್ಕೆ ಬಂದು ಹುಂಡಿ ಬೀಗ ತೆರೆದು ಕಾಣಿಕೆ ಹಣ ಎಣಿಕೆ ಮಾಡುವ ಮುನ್ನವೇ ದುಡ್ಡಿನ ಕಂತೆಗಳನ್ನು ಬ್ಯಾಗ್ ಒಂದಕ್ಕೆ ಹಾಕಿ ತಮ್ಮ ಕಾರಿಗೆ ಇರಿಸಿದ್ದರು. ಇದನ್ನೂ ಅವರ ಗಮನಕ್ಕೆ ಬಾರದಂತೆ ಪ್ರಕಾಶ್ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು.

ಹಣ ಎಣಿಕೆ ಆರಂಭವಾದಾಗ ಅಲ್ಲಿಗೆ ತೆರಳಿದ ಪ್ರಕಾಶ್, ತಾವು ಹುಂಡಿಗೆ ಹಾಕಿದ್ದ ನೋಟು ಎಣಿಕೆಗೆ ಬರಲಿ ಎಂದು ಕಾದು ಕುಳಿತರು. ಆದರೆ ಎಣಿಕೆ ಕಾರ್ಯ ಮುಗಿದರೂ ಅವರು ಹಾಕಿದ್ದ ನೋಟುಗಳು ದೊರೆಯಲಿಲ್ಲ. ತಾವು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಹಾಕಿದ್ದ ನೋಟುಗಳು ನಾಪತ್ತೆಯಾಗಿದ್ದು ಹೇಗೆ? ಎಂದು ಪ್ರಶ್ನಿಸಿದ ಅವರು ಕಂದಾಯ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳಕ್ಕೆ ತೆರಳಿದ ಸುದ್ದಿಗಾರರ ಎದುರು ಸ್ಥಳೀಯರು ವೇಂಕಟೇಶ್‌ ಅವರನ್ನು ತೀವ್ರವಾಗಿ ಪ್ರಶ್ನಿಸಿದರು. ಆಗ ವೆಂಕಟೇಶ್ ತಾವು ಮೊದಲೇ ಹಣ ಕದ್ದು ಕಾರಿನಲ್ಲಿ ಇರಿಸಿರುವುದಾಗಿ ಒಪ್ಪಿದರು. ಆ ಹಣವನ್ನು ಹೊರ ತೆಗೆದು ಎಣಿಕೆ ಮಾಡಿದಾಗ ₹ 47,700 ವೆಂಕಟೇಶ್ ಕದ್ದಿರುವುದು ಖಚಿತವಾಯಿತು.

ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಪಿಎಸ್‌ಐ ರೇಖಾ ಬಾಯಿ, ಸ್ಥಳ ಪರಿಶೀಲನೆ ನಡೆಸಿ ದೂರು ಸ್ವೀಕರಿಸಿದ್ದಾರೆ.

ಮೊದಲೇ ದೂರು ನೀಡಿದ್ದರು
ವೆಂಕಟೇಶ್ ಹುಂಡಿ ಹಣ ಕಳವು ಮಾಡುತ್ತಿದ್ದು, ಅದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಪ್ರಕಾಶ್, ಡಿಸೆಂಬರ್‌ನಲ್ಲಿಯೇ ಮುಜರಾಯಿ ಸಚಿವರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು. ಆದರೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಅವರು ಸ್ನೇಹಿತರೊಂದಿಗೆ ಸೇರಿ ಕಳವು ಪತ್ತೆಹಚ್ಚುವಲ್ಲಿ ಸಫಲರಾಗಿದ್ದಾರೆ.

*
ಕಠಿಣ ಕ್ರಮ ಜರುಗಿಸಿ
‘ಹಲವು ವರ್ಷಗಳಿಂದ ಕಂದಾಯ ನಿರೀಕ್ಷಕ ವೆಂಕಟೇಶ್, ಚೌಡೇಶ್ವರಿ ದೇವಾಲಯದ ಕಾಣಿಕೆ ಹಣವನ್ನು ಕಳವು ಮಾಡಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಭಕ್ತರು ಹಾಕಿದ ಚಿನ್ನದ ಲೆಕ್ಕವನ್ನೇ ಇಲಾಖೆಗೆ ಕೊಟ್ಟಿಲ್ಲ. ಹುಂಡಿ ತುಂಬಿದ ಮಾಹಿತಿ ಸಿಕ್ಕಿದ ತಕ್ಷಣ ಮುಜರಾಯಿ ಇಲಾಖೆ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಸಹಾಯಕರೊಂದಿಗೆ ಬಂದು ಹುಂಡಿ ಒಡೆಯುತ್ತಿದ್ದರು. ತಮಗಿಷ್ಟ ಬಂದಷ್ಟು ಲೆಕ್ಕ ಬರೆಯುತ್ತಿದ್ದರು. ಅವರ ವಿರುದ್ಧ ದೂರು ನೀಡಿದ್ದು, ಹಿರಿಯ ಅಧಿಕಾರಿಗಳು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’
–ಪ್ರಕಾಶ್, ಸ್ಥಳೀಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !