ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ

ಬರ ನಿರ್ವಹಣೆಗೆ ಪರಿಣಾಮಕಾರಿ ಕ್ರಮ ಅನುಸರಿಸಲು ನವೀನ್‌ ರಾಜ್‌ ಸೂಚನೆ
Last Updated 25 ಜೂನ್ 2019, 15:26 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ತುರ್ತು ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಸೂಚನೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಮಿತಿ ಸಭೆ ನಡೆಸಿದ ಅವರು, ಈ ಬಾರಿಯೂ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಮಳೆಯ ಕೊರತೆ ಕಾಣುತ್ತಿದ್ದು, ಒಂದು ವೇಳೆ ತೀವ್ರ ಸ್ವರೂಪದ ಬರ ಉಂಟಾದಲ್ಲಿ ಅದನ್ನು ಎದುರಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮುಂಗಾರು ಕುಂಠಿತ ಹಾಗೂ ವಿಳಂಬವಾಗಿರುವುದರಿಂದ ರೈತರಿಗೆ ಪ್ರಸಕ್ತ ಪರಿಸ್ಥಿತಿಗೆ ತಕ್ಕಂತೆ ಬೇಸಾಯ ಕ್ರಮ ಅನುಸರಿಸುವ ಕುರಿತು ಸೂಕ್ತ ಅರಿವು ನೀಡಿ, ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಬೇಕು ಎಂದು ಸಿಂಗ್ ಹೇಳಿದರು.

ಜಿಲ್ಲೆಯಲ್ಲಿ ಅನಿವಾರ್ಯವಿರುವ ಕಡೆಗಳಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸಬೇಕು. ಯಾವುದೇ ದನಕರುಗಳಿಗೆ ಆಹಾರದ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಸ್ಥಳೀಯ ಪಶು ಆಹಾರ ಉತ್ಪಾದನೆ ಹೆಚ್ಚಿಸಿ, ಹಾಸನ ಹಾಲು ಒಕ್ಕೂಟದ ಸಹಕಾರದೊಂದಿಗೆ ಗರಿಷ್ಠ ಪ್ರಮಾಣದ ಮೇವಿನ ಬೀಜ ಮಿನಿಕಿಟ್ ಗಳನ್ನು ವಿತರಿಸಿ ಎಂದು ಅವರು ತಿಳಿಸಿದರು.

ಸೋಮನಹಳ್ಳಿ ಕಾವಲ್‌ ಮತ್ತು ಉದಯಪುರ ಬಳಿಯ ತೋಟಗಾರಿಕಾ ಇಲಾಖೆ ಜಾಗದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಕೊಳವೆ ಬಾವಿ ಕೊರೆಸಿ ಮೇವಿನ ಕನಿಷ್ಠ 25 ರಿಂದ 35 ಎಕರೆ ಪ್ರದೇಶದಲ್ಲಿ ಮೇವು ಬೆಳೆಯಬೇಕು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ ಮತ್ತು ಪಶುಪಾಲನಾ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಳೆದ ಮುಂಗಾರಿನಲ್ಲಿ ಅತಿವೃಷ್ಠಿಯಿಂದ ಉಂಟಾಗಿದ್ದ, ಹಾನಿಯ ಪರಿಹಾರ ಕಾಮಗಾರಿಗಳ ಅತ್ಯಂತ ತ್ವರಿತವಾಗಿ ಮುಗಿಯಬೇಕು. ಈ ಬಾರಿ ಯಾವುದೇ ಅಪಾಯಗಳು ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದರು.‌

ಗ್ರಾಮೀಣ ಕುಡಿಯು ನೀರು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ವತಿಯಿಂದ ಕೈಗೊಂಡಿರುವ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿರ್ಧರಿಸಲಾಗಿತ್ತು. ಆದರೂ ಇನ್ನೂ ಹಲವು ಕೆಲಸಗಳನ್ನು ಮುಗಿಸಿಲ್ಲ. ಮುಂದಿನ 15 ದಿನಗಳ ಒಳಗೆ ಎಲ್ಲವೂ ಗುರಿ ಸಾಧನೆಯಾಗಬೇಕು ಎಂದು ನವೀನ್ ರಾಜ್ ಸಿಂಗ್ ಅವರು ಗಡುವು ನೀಡಿದರು.

ಸೋಮನಹಳ್ಳಿ ಕಾವಲಿನಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆಗೆ ಈ ವರೆಗೆ ಕೈ ಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಸಿಂಗ್‌, ಈ ವರ್ಷವೇ ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾಗುವುದರಿಂದ ಮೂಲಭೂತ ಸೌಕರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಡಲು ಪ್ರಸ್ತಾವ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರಗತಿ ತೃಪ್ತಿಕರವಾಗಿದೆ. ಆದರೆ ಅದನ್ನು ಇನ್ನಷ್ಟು ಉತ್ತಮ ಗೊಳಿಸಲು ಪ್ರಯತ್ನಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಸಮುದಾಯ ಆಸ್ತಿ ಸೃಷ್ಟಿಸಿ, ಜಲ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಅವರು ಹೇಳಿದರು.

ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಮುಗಿಸಿ, ಅರಸೀಕೆರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮೊದಲ ಆದ್ಯತೆಯೊಂದಿಗೆ ಮುಗಿಸಿ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿ ಎಂದರು.

ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಉಪ ವಿಭಾಗಾಧಿಕಾರಿಗಳಾದ ಎಚ್.ಎಲ್ ನಾಗರಾಜ್, ಕವಿತಾ ರಾಜಾರಾಂ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT