ಹಾಸನ: ಹೊಸ ಸರ್ಕಾರ ಅಧಿಕಾರಕ್ಕೆ ಬಂದು 45 ದಿನ ಕಳೆದಿದ್ದು, 5 ಗ್ಯಾರಂಟಿ ಜಾರಿ ಮಾಡುವುದಾಗಿ ಹೇಳಿದ್ದಾರೆ ಅದನ್ನು ಜಾರಿ ಮಾಡಲಿ ಎಂದು ಶಾಸಕ ಎಚ್.ಡಿ. ರೇವಣ್ಣ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ದಿನ ಬೆಳಗಾದರೆ ಪಡಿತರ ಅಕ್ಕಿ ವಿಚಾರದಲ್ಲಿ ಆರೋಪ, ಪ್ರತ್ಯಾರೋಪ ಮಾಡುವುದರಲ್ಲಿ ನಿರತವಾಗಿವೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ಪಂಚರತ್ನ ಯೋಜನೆ ಜಾರಿ ಮಾಡುತ್ತಿದ್ದೆವು. ರೈತರಿಗೆ ಎಕರೆಗೆ ₹ 10 ಸಾವಿರ ಸಹಾಯಧನ ನೀಡುತ್ತಿದ್ದೆವು. ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಕೊಡಲು ವ್ಯವಸ್ಥೆ ಕಲ್ಪಿಸುತ್ತಿದ್ದೆವು ಎಂದ ಅವರು, 2018 ರಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ₹ 25ಸಾವಿರ ಕೋಟಿ ಸಾಲ ಮನ್ನಾ ಮಾಡಿತು. ಇದೀಗ ಕಾಂಗ್ರೆಸ್ ಸರ್ಕಾರ ಬಂದಿದೆ. ಗ್ಯಾರಂಟಿ ಜಾರಿ ಮಾಡಲಿ ನೋಡೋಣ. ಮತ್ತಷ್ಟು ಕಾಲಾವಕಾಶ ಕೊಡೋಣ ಎಂದರು.
ಸರ್ಕಾರದ ಕಾರ್ಯವೈಖರಿ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ. 200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದರು. ಇದೀಗ ಷರತ್ತು ವಿಧಿಸುತ್ತಿದ್ದಾರೆ. . ಬಡವರಿಗೆ ಕೊಡಲಿ. ನಾವೇನು ಬೇಡ ಎನ್ನುವುದಿಲ್ಲ. ಮಧ್ಯಮ ವರ್ಗ ಹಾಗೂ ಬಡಜನರ ಮೇಲೆ ಸರ್ಕಾರ ಮೂರು ಪಟ್ಟು ವಿದ್ಯುತ್ ಬಿಲ್ ಹೊರೆ ಹಾಕುತ್ತಿದ್ದಾರೆ ಎಂದು ದೂರಿದರು.
ಕಲ್ಯಾಣ ಮಂಟಪಗಳಿಗೆ ಈ ಹಿಂದೆ ₹ 75ಸಾವಿರ ಬಿಲ್ ಬರುತ್ತಿತ್ತು. ಇದೀಗ ₹ 2.75 ಲಕ್ಷ ಬಿಲ್ ಬರುತ್ತಿದೆ. ಹಾಸನ ಸಂಸದರ ನಿವಾಸಕ್ಕೆ ₹ 8ಸಾವಿರ ಬಿಲ್ ಬರುತ್ತಿತ್ತು. ಇದೀಗ ₹ 20ಸಾವಿರಕ್ಕೂ ಹೆಚ್ಚು ಬಿಲ್ ಬರುತ್ತಿದೆ. ಹೊಳೆನರಸೀಪುರದ ನಮ್ಮ ಮನೆಯ ವಿದ್ಯುತ್ ಬಿಲ್ ₹ 14 ಸಾವಿರ ಬರುತ್ತಿತ್ತು. ಇದೀಗ ₹ 30ಸಾವಿರಕ್ಕೂ ಹೆಚ್ಚು ಬರುತ್ತಿದೆ ಎಂದು ಆರೋಪಿಸಿದರು.
ರಾಜ್ಯ ವಿದ್ಯುಚ್ಛಶಕ್ತಿ ಮಂಡಳಿ ₹ 48 ಸಾವಿರ ಕೋಟಿ ನಷ್ಟದಲ್ಲಿದ್ದು, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಾಕುವ ಕೆಲಸವನ್ನು ಸರ್ಕಾರ ಮಾಡಬಾರದು. ನಾನು ಇಂಧನ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಒಂದು ಬಿಡಿ ಕಾಸು ವಿದ್ಯುತ್ ದರ ಏರಿಕೆ ಮಾಡಲಿಲ್ಲ. ಆದರೆ, ಇಂದಿನ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಒಳ್ಳೆಯ ಕೆಲಸ ಮಾಡಲಿ. ನಮ್ಮ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದರೆ ಯಾವ ರೀತಿ ರಾಜಕೀಯ ಮಾಡಬೇಕು ಎಂಬುದು ನಮಗೂ ತಿಳಿದಿದೆ. ಸರ್ಕಾರದ ಬೆಳವಣಿಗೆ ಬಗ್ಗೆ ಕಾದು ನೋಡುವೆವು ಎಂದರು.
ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆಯನ್ನು ನಾಲ್ಕು ಶಾಸಕರು ಕುಳಿತು ತೀರ್ಮಾನ ಕೈಗೊಳ್ಳುತ್ತೇವೆ. ಪಕ್ಷ ಸಂಘಟನೆ ಮಾಡುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಯತ್ನ ಮುಂದುವರಿಯಲಿದೆ ಎಂದು ರೇವಣ್ಣ ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಹೇಳಿಕೆಗಳು ತಪ್ಪಿಲ್ಲ. ಅಕ್ಕಿ ಕೊಡುತ್ತೇವೆ ಎಂದು ಹೇಳಿ ಇದೀಗ ಅಕ್ಕಿ ಕೊಡದೇ ಹಣ ನೀಡಲು ಹೊರಟಿದ್ದಾರೆ ಎಂದು ದೂರಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಯಾವುದೇ ಮಾತುಕತೆ ನಡೆದಿಲ್ಲ. ಒಂದು ಕಡೆ ಬಿಜೆಪಿಯವರು, ಮತ್ತೊಂದು ಕಡೆ ಕಾಂಗ್ರೆಸ್‌ನವರು ಜೆಡಿಎಸ್ ಮುಗಿಸಲು ಹೊರಟಿದ್ದು, ಬೇಕಾದಾಗ ಎರಡು ರಾಷ್ಟ್ರೀಯ ಪಕ್ಷಗಳು ತಬ್ಬಿಕೊಳ್ಳುತ್ತವೆ. ದೇಶದ 17 ಪಕ್ಷಗಳು ಸೇರಿ ಮಾಡುತ್ತಿರುವುದು ಅವಕಾಶಸಿಂಧು ರಾಜಕೀಯ ಎಂದು ಟೀಕಿಸಿದರು.
ಶಾಸಕ ಎಚ್.ಪಿ. ಸ್ವರೂಪ್ ಹಾಜರಿದ್ದರು
‘ರಾಜಕೀಯದಿಂದ ಹಿಂದೆ ಸರಿಯಲ್ಲ’ ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಕಡಿಮೆ ಮತ ಬಂದಿದೆ ಎಂದು ರಾಜಕೀಯ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು. ರಾಜಕೀಯ ಜೀವನದಲ್ಲಿ ಹಲವು ಚುನಾವಣೆಗಳನ್ನು ಎದುರಿಸಿದ್ದೇನೆ. ಚುನಾವಣೆಗಳಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು; ಯಾವುದಕ್ಕೂ ಧೃತಿಗೆಡದೇ ಜಿಲ್ಲೆಯ ಜನರ ಸೇವೆ ಮಾಡಲು ಬದ್ಧನಾಗಿದ್ದೇನೆ. ಕ್ಷುಲ್ಲಕ ಕಾರಣಕ್ಕೆ ಜಿಲ್ಲಾ ರಾಜಕೀಯ ಕಣದಿಂದ ವಿಮುಖನಾಗುವೆ ಎನ್ನುವುದು ಕೇವಲ ಭ್ರಮೆ ಎಂದು ಸ್ಪಷ್ಟಪಡಿಸಿದರು. ಹಲವು ವರ್ಷಗಳಿಂದ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಅನ್ನು ಮುಗಿಸಲು ಮುಂದಾಗಿದೆ. ಆದರೆ ಜಿಲ್ಲೆಯ ಜನರ ಆಶೀರ್ವಾದ ಜೆಡಿಎಸ್ ಪಕ್ಷದ ಮೇಲಿದ್ದು ದೇವೇಗೌಡರು ಎಚ್ ಡಿ ಕುಮಾರಸ್ವಾಮಿ ಅವರ ಕೆಲಸಕ್ಕೆ ಮನ್ನಣೆ ನೀಡಿದ್ದಾರೆ. ಮುಂದೆಯೂ ಅವರ ಸೇವೆಗೆ ಸದಾ ಸಿದ್ದನಿದ್ದೇನೆ ಎಂದರು. ಜಿಲ್ಲೆಯಲ್ಲಿ ನಾಲ್ಕು ಶಾಸಕರು ಗೆದ್ದಿದ್ದಾರೆ. ನಮ್ಮಿಂದಲೇ ಎರಡು ಕ್ಷೇತ್ರಗಳಲ್ಲಿ ಸೋಲಾಗಿದೆ. 2028ರ ಚುನಾವಣೆಯೇ ನಮ್ಮ ಮುಂದಿನ ಗುರಿ. ಈಗಿನಿಂದಲೇ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ತಿಳಿಸಿದರು.
‘ಜಯಂತಿಗೆ ಕರೆದಿರಲಿಲ್ಲ‘ ಹೊಳೆನರಸೀಪುರದಲ್ಲಿ ಸಾಂಕೇತಿಕವಾಗಿ ಕೆಂಪೇಗೌಡ ಜಯಂತಿ ಮಾಡಿದ್ದೇನೆ. ಈ ಹಿಂದೆ ಜಿಲ್ಲೆಯಲ್ಲಿ ನಡೆದ ಯಾವುದಾದರೂ ಜಯಂತಿಗೆ ನಾನು ಬಂದಿದ್ದೀನಾ ಎಂದು ಎಚ್.ಡಿ. ರೇವಣ್ಣ ಪ್ರಶ್ನಿಸಿದರು. ರಾಜ್ಯಮಟ್ಟದ ಕೆಂಪೇಗೌಡ ಜಯಂತಿಗೆ ಗೈರಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ಒಂದೇ ಸಮಯದಲ್ಲಿ ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಲು ಹೇಗೆ ಸಾಧ್ಯ ಎಂದು ಕೇಳಿದರು. ರಾಜ್ಯಮಟ್ಟದ ಕಾರ್ಯಕ್ರಮ ಅವರೇ ಘೋಷಣೆ ಮಾಡಿಕೊಂಡಿದ್ದಾರೆ. ಪೂರ್ವಭಾವಿ ಸಭೆ ನನ್ನನ್ನು ಆಹ್ವಾನಿಸಿರಲಿಲ್ಲ/ ಜಿಲ್ಲಾ ಉಸ್ತುವಾರಿ ಸಚಿವರು ಕರೆದಿರಲಿಲ್ಲ; ಸಂಸದರು ಮೆರವಣಿಗೆಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಮುಂದಿನ ಕೆಡಿಪಿ ಮೀಟಿಂಗ್ ಕರೆದಾಗ ಭಾಗವಹಿಸುತ್ತೇನೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.