ಸೋಮವಾರ, ಅಕ್ಟೋಬರ್ 19, 2020
24 °C
ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆ‌

ಹಾಸನ: ವರ್ಷದಲ್ಲಿ 2ನೇ ಬಾರಿಗೆ ತುಂಬಿದ ಹೇಮೆ, ಯಗಚಿ

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯ ಜೀವನದಿ ಹೇಮಾವತಿ ಹಾಗೂ ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ವರ್ಷದಲ್ಲಿ
ಎರಡನೇ ಬಾರಿಗೆ ಭರ್ತಿಯಾಗಿದೆ.

ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ, ಬೇಲೂರು ಭಾಗದಲ್ಲಿ ಮುಂಗಾರು ಬಿರುಸುಗೊಂಡ
ಪರಿಣಾಮ ನೀರಿನ ಒಳ ಹರಿವು ಏರಿಕೆಯಾಗಿ ಭರ್ತಿ ಹಂತದಲ್ಲೇ ಇದೆ.

ಕಳೆದ ಆ.17ರಂದು ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿದ್ದರಿಂದ 18 ಸಾವಿರ ಕ್ಯುಸೆಕ್‌
ನೀರನ್ನು ನದಿಗೆ ಬಿಡಲಾಗಿತ್ತು. ಆ.27 ರ ವರೆಗೂ ನೀರಿನ ಮಟ್ಟ 2920 ಅಡಿಯಲ್ಲೇ ಇತ್ತು. ಹೆಚ್ಚು ಕಡಿಮೆ ಎರಡು
ತಿಂಗಳು ಒಡಲು ತುಂಬಿಕೊಂಡೇ ಇತ್ತು. ಜಲಾಶಯದ ಇತಿಹಾಸದಲ್ಲೇ ಹೊಸ ದಾಖಲೆ ಎಂದು ಅಧಿಕಾರಿಗಳೇ
ಹೇಳಿದ್ದರು.

ನಂತರ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಒಳ ಹರಿವು  ಕ್ಷೀಣಿಸುತ್ತಾ ಬಂದಿತ್ತು. ಸೆ. 20ರ ವೇಳೆಗೆ ನೀರಿನ ಮಟ್ಟ 2918.60 ಅಡಿಗೆ ಇಳಿದಿತ್ತು.

ಈ ಬಾರಿಯೂ ಮಲೆನಾಡು ಹಾಗೂ ಮೂಡಿಗೆರೆ ಭಾಗದಲ್ಲಿ ಜೋರು ಮಳೆಯಿಂದಾಗಿ ಆಗಸ್ಟ್ 2ನೇ ವಾರದಲ್ಲೇ
ಭರ್ತಿಯಾಗಿತ್ತು. ಅಲ್ಲಿಂದ ಈವರೆಗೂ ಹೇಮಾವತಿ ಜಲಾಶಯ ಬಹುತೇಕ ಭರ್ತಿ ಹಂತದಲ್ಲೇ ಇದೆ.
ಇದರಿಂದಾಗಿ ಭವಿಷ್ಯದಲ್ಲಿ ನೀರಾವರಿಗೆ ಮತ್ತು ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ತಲೆ
ಉಂಟಾಗುವುದಿಲ್ಲ.

ಹೇಮಾವತಿ ಜಲಾಶಯ ಭರ್ತಿ ಆಗುವ ಮುನ್ಸೂಚನೆ ಸಿಕ್ಕ ತಕ್ಷಣವೇ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ
ಮಾಡಲು ಶುರುವಾಯಿತು. ಸೆ. 4ರಂದು ಹೇಮಾವತಿ ಬಲ ದಂಡೆ ನಾಲೆಗೆ ನೀರು ಬಿಡುಗಡೆ ಮಾಡಿದ ಅಣೆಕಟ್ಟು
ವಿಭಾಗದ ಮೂರು ಜಿಲ್ಲೆಗಳ ಅಚ್ಚುಕಟ್ಟು ಹೊಂದಿರುವ ಹೇಮಾವತಿ ಎಡದಂಡೆ ನಾಲೆಗೆ ಆ. 8ರಿಂದ ನೀರು
ಬಿಡುಗಡೆ ಆರಂಭಿಸಿತು.

ಸದ್ಯ ಎಡದಂಡೆ ನಾಲೆಯಲ್ಲಿ ನಿತ್ಯ 3100 ಕ್ಯುಸೆಕ್‌, ಬಲದಂಡೆ ನಾಲೆಯಲ್ಲಿ 300 ಕ್ಯುಸೆಕ್‌ ಹಾಗೂ ಬಲ ಮೇಲ್ದಂಡೆ ನಾಲೇಯಲ್ಲಿ 600 ಕ್ಯುಸೆಕ್‌ ನೀರು ಅಚ್ಚುಕಟ್ಟು ಪ್ರದೇಶಕ್ಕೆ ಹರಿಯುತ್ತಿದೆ. ಡಿ.31ರವರೆಗೂ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಬೆಳೆಗೆ ನೀರು ಬಿಡುಗಡೆಗೆ ನೀರಾವರಿ ಸಲಹಾ
ಸಮಿತಿಯಲ್ಲಿ ನಿರ್ಧರಿಸಲಾಗಿದೆ.

ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ಎರಡು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಭರ್ತಿಯಾಗಿದೆ.
ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ಸುರಿದ
ಮಳೆಗೆ ದಾಖಲೆ ಮಟ್ಟದಲ್ಲಿ ನೀರು ಹರಿದು ಬಂತು.

3.603 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದ ಐದು ಕ್ರಸ್ಟ್‌ ಗೇಟ್‌ ಮೂಲಕ 74
ಸಾವಿರ ಕ್ಯುಸೆಕ್‌ ನೀರನ್ನು ಏಕಕಾಲದಲ್ಲಿ ಹರಿಸಬಹುದು. ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ
33 ಸಾವಿರ ಕ್ಯುಸೆಕ್‌ ನೀರನ್ನು ಹೊರಗೆ ಬಿಡಲಾಗಿತ್ತು.

ಕಳೆದ ಆಗಸ್ಟ್ 6 ರಂದು ಜಲಾಶಯ ಭರ್ತಿಯಾಗಿದ್ದರಿಂದ 5 ಸಾವಿರ ಕ್ಯುಸೆಕ್‌ ನೀರನ್ನು ಹೊರ ಹರಿಸಲಾಗಿತ್ತು. ಎರಡನೇ ಬಾರಿಗೆ ಸೆ.2 ರಂದು ನೀರನ್ನು ಬಿಡಲಾಗಿತ್ತು. ಮೂರನೇ ಬಾರಿಗೆ ಸೆ. 20ರಂದು ಜಲಾಶಯ ಭರ್ತಿಯಾಗುವ ಮೂಲಕ ಇತಿಹಾಸದಲ್ಲಿ ಒಂದೇ ವರ್ಷ ಮೂರು ತುಂಬಿದ ಹೆಗ್ಗಳಿಕೆ ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು