ಮಂಗಳವಾರ, ಡಿಸೆಂಬರ್ 7, 2021
20 °C
₹ 8.25 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ

ಹಾಸನ ಜಿಲ್ಲಾ ಕ್ರೀಡಾಂಗಣಕ್ಕೆ ಹೈಟೆಕ್‌ ಸ್ಪರ್ಶ: ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸುಮಾರು 30 ಎಕರೆ ವಿಸ್ತೀರ್ಣದಲ್ಲಿರುವ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಬಹು ದಿನಗಳ
ಬೇಡಿಕೆಯಂತೆ ಸಿಂಥೆಟಿಕ್ ಟ್ರ್ಯಾಕ್‌ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.

ಸಮಸ್ಯೆಗಳಿಂದ ನಲುಗಿದ್ದ, ವಿಸ್ತೀರ್ಣದಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದ ಕೊಂಡಿರುವ ಕ್ರೀಡಾಂಗಣಕ್ಕೆ
ಹೊಸ ರೂಪ ನೀಡುವ ಕಾರ್ಯ ನಡೆದಿರುವುದು ಕ್ರೀಡಾಪಟುಗಳಿಗೆ ಖುಷಿ ಉಂಟು ಮಾಡಿದೆ.

2013ರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ
ಇಂಡೋರ್‌ ಸ್ಟೇಡಿಯಂ ಮತ್ತು ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಮಾಡಲಾಗುತ್ತಿದ್ದು, 2022ರ ಮಾರ್ಚ್‌
ಒಳಗೆ ಬಹು ನಿರೀಕ್ಷಿತ ₹ 8.25 ಕೋಟಿ ವೆಚ್ಚದ ಸಿಂಥೆಟಿಕ್ ಟ್ರ್ಯಾಕ್‌ ನಿರ್ಮಾಣ ಕಾಮಗಾರಿ
ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಲೋಕೋಪಯೋಗಿ ಇಲಾಖೆಯ ಮೇಲುಸ್ತುವಾರಿಯಲ್ಲಿ ನವದೆಹಲಿಯ
ಶಿವನರೇಸ್‌ ಕಂಪನಿ ಗುತ್ತಿಗೆಗೆ ನೀಡಲಾಗಿದೆ.

ಸ್ವಿಡ್ಜರ್‌ಲೆಂಡ್‌ನಿಂದ ಪೂರಕ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಲಿ ಟ್ರ್ಯಾಕ್‌ ಪಥದಲ್ಲೇ
ಸುಸಜ್ಜಿತವಾದ 400 ಮೀಟರ್‌ನ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣವಾಗುತ್ತಿದ್ದು, ಇದರಿಂದ ರಾಜ್ಯ, ರಾಷ್ಟ್ರೀಯ
ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ನಡೆಸಬಹುದು.

ಕ್ರೀಡಾಂಗಣ ಸಮುಚ್ಛಯದಲ್ಲೇ ಇರುವ ಹಾಸನಾಂಬಾ ಒಳಾಂಗಣ ಕ್ರೀಡಾಂಗಣ, ಸುಸಜ್ಜಿತ ಈಜುಕೊಳ ಹಾಗೂ ಬೆಳಕಿನ ವ್ಯವಸ್ಥೆ ಇದೆ. ರಾತ್ರಿ ವೇಳೆ ಕ್ರೀಡಾ ಚಟುವಟಿಕೆ ನಡೆಸಲು ಫ್ಲಡ್‌ಲೈಟ್‌ ಸೌಲಭ್ಯ ಇದೆ. ಕೆಆರ್‌ಐಡಿಎಲ್‌ನಿಂದ
ಮೂರು ವುಡನ್‌ ಕೋರ್ಟ್‌ ನಿರ್ಮಿಸಲಾಗಿದೆ.

ಬ್ಯಾಸ್ಕೆಟ್‌ಬಾಲ್‌, ವಾಲಿಬಾಲ್‌, ಶಟಲ್‌, ಥ್ರೋಬಾಲ್‌, ಟೇಬಲ್‌ ಟೆನಿಸ್‌ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಹತ್ತು ಕ್ರೀಡೆ ಆಡಿಸಬಹುದಾಗಿದೆ. ಜಿಮ್ನಾಸ್ಟಿಕ್ಸ್‌ ಮೈದಾನ ಸಹ ಇದೆ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಯುಜಿಡಿ ಸಂಪರ್ಕ ಕಲ್ಪಿಸಲಾಗಿದೆ. ಕ್ರೀಡಾಂಗಣದ ಸುತ್ತಲೂ ಇದ್ದ ಗಿಡಗಂಟಿ ತೆರವು ಗೊಳಿಸಿ, ವಾಯುವಿಹಾರಕ್ಕೆ ಅನುಕೂಲ ಮಾಡಲಾಗಿದೆ. ಶೌಚಾಲಯ ದುರಸ್ತಿ ಕೆಲಸ ಬಾಕಿ ಇದೆ.

‘ಮುಂದಿನ ವರ್ಷ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಕಂಠೀರವ ಕ್ರೀಡಾಂಗಣ ಮಾದರಿಯಲ್ಲಿ ಫುಟ್‌ ಬಾಲ್‌ ಮತ್ತು ಹಾಕಿ ಮೈದಾನಗಳನ್ನು ಟರ್ಫ್ ಮೈದಾನವಾಗಿ ಪರಿವರ್ತಿಸಬೇಕೆಂಬ ಬೇಡಿಕೆ ಇದೆ. ಒಂದು ಕೋಟಿ ರೂಪಾಯಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಕಬಡ್ಡಿ, ಕೊಕ್ಕೊ, ಹ್ಯಾಂಡ್‌ಬಾಲ್‌ ಅಂಕಣ ಮೇಲ್ದರ್ಜೇಗೇರಿಸಲು ಅನುದಾನ ಕೇಳಲಾಗಿದೆ. ಫುಟ್‌ಬಾಲ್‌, ಹಾಕಿ, ವಾಲಿಬಾಲ್‌, ಕೊಕ್ಕೊ ಕ್ರೀಡೆಗೆ ತರಬೇತುದಾರರು ಇದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಿ ಉಪಯೋಗ ಪಡೆದುಕೊಳ್ಳಬೇಕು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್‌ ಮನವಿ ಮಾಡಿದರು.

‘ಮುಖ್ಯ ದ್ವಾರ ಹೊರತು ಪಡಿಸಿ ಇತರೆ ಮಾರ್ಗದಲ್ಲಿ ಕ್ರೀಡಾಂಗಣ ಪ್ರವೇಶಿಸದಂತೆ ಸುತ್ತ ಕಾಂಪೌಂಡ್‌ ನಿರ್ಮಿಸಿ, ಅನೈತಿಕ ಚಟುವಟಿಗಳಿಗೆ ಕಡಿವಾಣ ಹಾಕಲಾಗಿದೆ. ಬೆಳಿಗ್ಗೆ 5ರಿಂದ 9 ಹಾಗೂ ಸಂಜೆ 4 ರಿಂದ 8.30ರವರೆಗೆ ಸಾರ್ವಜನಿಕರಿಗೆ ಪ್ರವೇಶ ಇದೆ. ಹಲವು ಬಾರಿ ರಿಪೇರಿ ಮಾಡಿದರೂ ಕಿಡಿಗೇಡಿಗಳು ಕುಡಿಯುವ ನೀರಿನ ನಲ್ಲಿಗಳನ್ನು ಮುರಿದು ಹಾಕಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು