ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರೀತಿಸದಿದ್ದರೆ ಉಳಿಗಾಲವಿಲ್ಲ: ಸೋಮಶೇಖರ ಸ್ವಾಮೀಜಿ ಅಭಿಮತ

ಪರಿಸರ ಜಾಗೃತಿಯ ರಾಜ್ಯ ಸಮಾವೇಶ
Last Updated 8 ಜೂನ್ 2019, 12:04 IST
ಅಕ್ಷರ ಗಾತ್ರ

ಹಳೇಬೀಡು: ವೇದಿಕೆಯಲ್ಲಿ ಕುರ್ಚಿಗಳು ಇರಲಿಲ್ಲ. ಅತಿಥಿಗಳು ಸಹ ಸಭಿಕರು ಜೊತೆಯಲ್ಲಿಯೇ ಕುಳಿತಿದ್ದರು. ತಮ್ಮ ಭಾಷಣದ ಸರದಿ ಬಂದಾಗ ಒಬ್ಬೊಬ್ಬರೇ ವೇದಿಕೆಗೆ ಬಂದು ಮಾತನಾಡುತ್ತಿದ್ದರು. ಅಲ್ಲಿ ಭೂಮಿಯ ಮೇಲಿನ ಸಕಲ ಜೀವಿಗಳ ಉಳಿವಿಗಾಗಿ ವಿಷಯ ತಜ್ಞರು ವಿವರಣೆ ನೀಡುತ್ತಿದ್ದರು.

ಇದು ಚನ್ನಮ್ಮ ನಂಜೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರಾಜ್ಯ ಪರಿಸರ ಸಮಾವೇಶದಲ್ಲಿ ಕಂಡು ಬಂದ ದೃಶ್ಯ. ಸಮಾವೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ಗದ್ದಲವಿಲ್ಲದೆ ಪರಿಸರದ ಜಾಗೃತಿ ಬಿಡುವಿಲ್ಲದಂತೆ ನಡೆಯಿತು. ಆಸಕ್ತರು ಮಾತ್ರ ಸೇರಿದ್ದರಿಂದ ಶಾಂತವಾಗಿದ್ದು ಭಾಷಣ ಆಲಿಸುತ್ತಿದ್ದರು.

ಸಮಾವೇಶ ಉದ್ಘಾಟಿಸಿದ ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ‘ಜನರಲ್ಲಿ ಪರಿಸರ ಕಾಳಜಿ ಇಲ್ಲದೆ ಮಳೆ, ಬೆಳೆ ಇಲ್ಲದಂತಾಗಿದೆ. ಆರೋಗ್ಯಕರ ಗಾಳಿ, ಶುದ್ಧ ಕುಡಿಯುವ ನೀರು ದೊರಕದಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಆಮ್ಲಜನಿಕದ ಕೊರತೆಯಾಗಿ ಬದುಕು ಇಲ್ಲದಂತಾಗುತ್ತದೆ’ ಎಂದು ಎಚ್ಚರಿಸಿದರು.

ಇಂದಿನ ಯುಗದಲ್ಲಿ ಎಲ್ಲದಕ್ಕೂ ಅಳತೆ ಗೋಲು ಹಣವಾಗಿದೆ. ಹಣವೇ ಎಲ್ಲವೂ ಅಲ್ಲ. ಮಳೆ, ಬೆಳೆ ಇಲ್ಲದಾಗ ಆಹಾರವೂ ಇರುವುದಿಲ್ಲ. ಆಗ ಹಣಕ್ಕೂ ಬೆಲೆ ಸಿಗುವುದಿಲ್ಲ. ಬದುಕಿಗೆ ಆಹಾರ, ಶುದ್ಧ ಗಾಳಿಯೇ ಮುಖ್ಯ ಇದನ್ನು ಎಲ್ಲರೂ ಅರಿತು. ಪರಿಸರ ಉಳಿಸಿ, ಬೆಳೆಸಲು ಕಂಕಣಬದ್ಧರಾಗಬೇಕು ಎಂದು ಹೇಳಿದರು.

‘ಎಲ್ಲರಲ್ಲಿಯೂ ಪರಿಸರದ ಮೇಲಿನ ಪ್ರೀತಿ, ವಿಶ್ವಾಸ ಮೂಡಬೇಕಾಗಿದೆ. ಪುಷ್ಪಗಿರಿ ಮಠದಿಂದ 25,000 ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ. ಮಠದಿಂದ ಕೃಷಿ, ನೀರಾವರಿಯ ಜಾಗೃತಿ ಸಹ ಮೂಡಿಸಲಾಗುತ್ತಿದೆ’ ಎಂದು ಸ್ವಾಮೀಜಿ ಹೇಳಿದರು.

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಶಾಸಕ ಕೆ.ಎಸ್‌.ಲಿಂಗೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗೂರು ರಂಗೇಗೌಡ, ಸಮಾವೇಶದ ಸಂಚಾಲಕ ಧನಂಜಯ ಜೀವಾಳ, ಮುಖಂಡರಾದ ಎಚ್‌.ಎನ್‌.ಯೋಗೀಶ್, ಗಂಗೂರು ಶಿವಕುಮಾರ್, ಎಚ್‌.ಜಿ.ಅನಂತರಾಮು, ಡಿ.ಎಲ್‌.ಸೋಮಶೇಖರ್‌ ಮತ್ತಿತರರು ಇದ್ದರು.

ರಿಯಲ್‌ ಎಸ್ಟೇಟ್‌ನಿಂದ ಭೂಮಿ ಕಾಪಾಡಿ
ರಿಯಲ್‌ ಎಸ್ಟೇಟ್‌ನವರಿಗೆ ತಮ್ಮ ಜಮೀನು ಬಲಿಕೊಡಬೇಡಿ. ಕಳೆದು ಹೋದ ಕೃಷಿ ಭೂಮಿಯನ್ನು ಪುನಃ ಪಡೆದುಕೊಳ್ಳುವುದು ಸುಲಭ ಸಾಧ್ಯವಲ್ಲ. ವೃಕ್ಷಾಧಾರಿತ ಕೃಷಿಯಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂಬುದನ್ನು ರೈತರು ಅರಿತುಕೊಳ್ಳಬೇಕು. ಆಹಾರದಿಂದ ಜೀವಿಗಳಿಗೆ ಅಗತ್ಯವಿರುವ ಸಂಪತ್ತನ್ನು ಕೊಡುವ ಭೂಮಿಯ ಉಳಿವಿಗಾಗಿ ರೈತವರ್ಗ ಸಾವಯವ ಕೃಷಿ ನಡೆಸುವುದು ಸೂಕ್ತ ಎಂದು ಕೃಷಿ ಪ್ರಗತಿಪರ ಮಹಿಳೆ ಹೇಮಶ್ರಿ ಅನಂತ್‌ ಹೇಳಿದರು.

ಸಂಕಷ್ಟದಲ್ಲಿ ವನ್ಯಜೀವಿ ಮತ್ತು ಸಸ್ಯ ಸಂಪತ್ತು
‘ಭೂಮಿ ಮಾನವನ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ. ಭೂಮಿಯ ಮೇಲೆ ಬದುಕುವ ಹಕ್ಕನ್ನು ವನ್ಯಜೀವಿ ಹಾಗೂ ಸಸ್ಯಗಳು ಸಹ ಹೊಂದಿವೆ. ವನ್ಯ ಜೀವಿಗಳ ಉಪಟಳ ಎಂದು ಹೇಳಿ ಸಂಕಷ್ಟವನ್ನು ತೋಡಿಕೊಳ್ಳುವ ಮಾನವ, ವನ್ಯಪ್ರಾಣಿಗಳ ಸಮಸ್ಯೆಯತ್ತ ಗಮನಹರಿಸುವುದು ತೀರಾ ಕಡಿಮೆಯಾಗಿದೆ’ ಎಂದು ನಿವೃತ್ತ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ.ಅಣ್ಣಯ್ಯ ಕಳವಳ ವ್ಯಕ್ತಪಡಿಸಿದರು.

ಭೌಗೋಳಿಕ ಪ್ರದೇಶದಲ್ಲಿ ಬೃಹತ್‌ ಮರಗಳು ಹಾಗೂ ವನ್ಯ ಜೀವಿಗಳು ಬದುಕುವುದಕ್ಕೂ ಹಕ್ಕಿದೆ. ವಿಪರ್ಯಾಸವೆಂದರೆ ಭೂಮಿಯ ಹೆಚ್ಚು ಪಾಲು ಮಾನವನ ಬದುಕಿಗೆ ಬಳಕೆಯಾಗುತ್ತಿದೆ. ಕಾಡಾನೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅರಣ್ಯ ಸಂಪತ್ತು ಕಡಿಮೆಯಾದ ಪರಿಣಾಮ ಆನೆಗಳು ರೈತರ ಜಮೀನಿನತ್ತ ಲಗ್ಗೆ ಹಾಕುತ್ತಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT