ಶನಿವಾರ, ಏಪ್ರಿಲ್ 17, 2021
32 °C
ಚಾಕೇನಹಳ್ಳಿಯ ಜಿಲೆಟಿನ್ ಸ್ಫೋಟಗೊಂಡ ಸ್ಥಳಕ್ಕೆ ಉಸ್ತುವಾರಿ ಸಚಿವ ಗೋಪಾಲಯ್ಯ ಭೇಟಿ

ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳೆನರಸೀಪುರ: ಜಿಲ್ಲೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಯುತ್ತಿದ್ದರೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು  ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ತಾಲ್ಲೂಕಿನ ಚಾಕೇನಹಳ್ಳಿ ಕಟ್ಟೆ ಗ್ರಾಮಕ್ಕೆ ಸೋಮವಾರ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. 

‘ಸ್ಫೋಟಕ ವಸ್ತುಗಳನ್ನು ತಮಿಳುನಾಡಿನಿಂದ ತಂದು ಗೋದಾಮಿಗೆ ಇಳಿಸುವ ವೇಳೆ ದುರ್ಘಟನೆ ನಡೆದಿದೆ. ಪರವಾನಗಿ ಹೊಂದಿರುವ ದುರ್ಗಾಂಬ ಎಂಟರ್ ಪ್ರೈಸೆಸ್‌ ಮಾಲೀಕ ನಾಗೇಶ್ ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸಿ, ಶೀಘ್ರ ವರದಿ ಸಲ್ಲಿಸುವಂತೆ ಎಸ್ಪಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಅನುಮತಿ ಪಡೆದ 139 ಕಲ್ಲು ಗಣಿಕಾರಿಕೆಗೆ ಇದ್ದು, ಅಕ್ರಮವಾಗಿ ಗಣಿಕಾರಿಕೆ ಬಗ್ಗೆ  ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು. 

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ತಾಲ್ಲೂಕಿನ ಕಲ್ಲೊಡೆಬಾರೆ ಯಲ್ಲಿ ಅಕ್ರಮವಾಗಿ ಗಣಿಕಾರಿಕೆ ನಡೆಯುತ್ತಿದೆ. ಈ ಪೊಲೀಸರು ಮತ್ತು ತಹಶೀಲ್ದಾರ್ ವರದಿ ಸಲ್ಲಿಸಿದ್ದಾರೆ.  ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೇನೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಲು ಡ್ರೋನ್ ಸರ್ವೆ ಮಾಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ‘ಸ್ಫೋಟಕ ಸಾಮಗ್ರಿಗಳನ್ನು ಅನ್‌ಲೋಡ್‌ ಮಾಡುವಾಗ ಸರಿಯಾದ ಕ್ರಮ ಅನುಸರಿಸಿಲ್ಲ. ಹಾಗಾಗಿ ಅವಘಡ ಸಂಭವಿಸಿದೆ.  ಗ್ರಾಮದ ಹತ್ತಿರವಿರುವ ಸ್ಫೋಟಕ ಸಂಗ್ರಹ ಗೋದಾಮುಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಸಲಹೆ ನೀಡಿದರು. 

ಪೊಲೀಸ್ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ ಮಾತನಾಡಿ,  ‘ಸ್ಫೋಟಕ ಸಾಗಣೆ ವಾಹನದ ಚಾಲಕ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಕಾನೂನು ಉಲ್ಲಂಘನೆ ಮಾಡಿದ್ದಾರೆ.  ಘಟನೆ ನಡೆದಾಗ ಲಾರಿ ಚಾಲಕ, ಭರತ್, ಗೋದಾಮು ಮೇಲ್ವಿಚಾರಕ  ರವಿಕುಮಾರ್, ನಟರಾಜ್ ಮತ್ತು ಸಂಪತ್ ಇದ್ದರು. ಲಾರಿ ಬಲಭಾಗದಲ್ಲಿದ್ದ ಚಾಲಕ ಮತ್ತು ಭರತ್‍ಗೆ ಹಾನಿ ಆಗಿಲ್ಲ. ಆದರೆ ಎಡಭಾಗದಲ್ಲಿದ್ದ ಸಂಪತ್‌, ರವಿಕುಮಾರ್‌ ಮೃತಪಟ್ಟಿದ್ದಾರೆ. ನಟರಾಜು ಗಾಯಗೊಂಡಿದ್ದಾರೆ.  ಎರಡು ದ್ವಿಚಕ್ರ ವಾಹನ ಕರಕಲಾಗಿದೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ  ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಡಿವೈಎಸ್‌ಪಿ ಬಿ.ಬಿ.ಲಕ್ಷ್ಮೇಗೌಡ, ವೃತ್ತ ನಿರೀಕ್ಷಕ ಆರ್.ಪಿ.ಅಶೋಕ್, ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್, ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.