ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಒಡೆಯುವ ಕೆಲಸ ಮಾಡದಿರಿ: ಟಿಪ್ಪು ಜಯಂತಿಯಲ್ಲಿ ಸಚಿವ ಎಚ್‌.ಡಿ.ರೇವಣ್ಣ

ಟಿಪ್ಪು ಜಯಂತಿಯಲ್ಲಿ ಸಚಿವ ಎಚ್‌.ಡಿ.ರೇವಣ್ಣ
Last Updated 10 ನವೆಂಬರ್ 2018, 13:02 IST
ಅಕ್ಷರ ಗಾತ್ರ

ಹಾಸನ: ‘ಬೇರೆ ಯಾವುದೇ ಜಯಂತಿಗಳಿಗೆ ಇಲ್ಲದ ವಿರೋಧ, ಟಿಪ್ಪು ಜಯಂತಿಗೇ ಏಕೆ? ದೇಶಕ್ಕಾಗಿ ಹೋರಾಡಿದ ವ್ಯಕ್ತಿಯ ಜಯಂತಿ ಆಚರಿಸಿದರೆ ಬಿಜೆಪಿಗೆಯವರಿಗೆ ಹೊಟ್ಟೆ ಉರಿ’ ಎಂದು ಸಚಿವ ಎಚ್.ಡಿ.ರೇವಣ್ಣ ಕಿಡಿ ಕಾರಿದರು.

ಹಾಸನಾಂಬ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

‘ದೇಶದ ಏಕತೆ, ಸಾಮರಸ್ಯದ ಬಗ್ಗೆ ಭಾಷಣ ಬಿಗಿಯುತ್ತಾರೆ. ಆದರೆ ರಾಜಕೀಯಕ್ಕಾಗಿ ಜಾತಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಹೇಳುವುದು ಒಂದು, ಮಾಡುವುದು ಇನ್ನೊಂದು. ಆದರೂ ರಾಜ್ಯದಲ್ಲಿ ಬಿಜೆಪಿ 104 ಸ್ಥಾನ ಗೆಲ್ಲಲು ಜನರದ್ದೂ ಪಾತ್ರವಿದೆ’ ಎಂದರು.

‘ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸ್ವಾತಂತ್ರ್ಯ ಹೋರಾಟಗಾರ. ಶೃಂಗೇರಿ, ನಂಜನಗೂಡು, ಮೇಲುಕೋಟೆಯ ಹಿಂದೂ ದೇವಾಲಯಗಳಿಗೂ ಸಾಕಷ್ಟು ನೆರವು ನೀಡಿದ್ದಾನೆ. ಆತನ ಆಡಳಿತದಲ್ಲಿ ಕೃಷಿಗೆ ಆದ್ಯತೆ ನೀಡಲಾಗಿತ್ತು. ಕಾವೇರಿ ನದಿಗೆ ಮೊದಲ ಅಣೆಕಟ್ಟು ಕಟ್ಟಿದ್ದು, ಅದೇ ಜಾಗದಲ್ಲಿ ನಂತರ ಕೆ.ಆರ್.ಎಸ್. ನಿರ್ಮಾಣವಾಯಿತು. ಕರ್ನಾಟಕ್ಕೆ ರೇಷ್ಮೆ ಪರಿಚಯಿಸಿದ ಕೀರ್ತಿ ಆತನಿಗೆ ಸಲ್ಲುತ್ತದೆ’ ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಮಾತನಾಡಿ, ಟಿಪ್ಪು ಸಕಲ ಧರ್ಮಗಳನ್ನು ಸಮಾನತೆಯಿಂದ ಕಾಣುತ್ತಿದ್ದರು. ಮಹಾನ್‌ ನಾಯಕರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು’ ಎಂದರು.

ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಚ್.ಎಲ್.ಮಲ್ಲೇಶ್‌ಗೌಡ ಉಪನ್ಯಾಸ ನೀಡಿದರು. ಸಾಹಿತಿ, ಜ.ಹೊ.ನಾರಾಯಣಸ್ವಾಮಿ ನಿಧನ ಹಿನ್ನಲೆಯಲ್ಲಿ ಎರಡು ನಿಮಿಷ ಮೌನ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ಪ್ರೀತಂ ಗೌಡ ಗೈರಾಗಿದ್ದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ತಹಶೀಲ್ದಾರ್‌ ಶಿವಶಂಕರಪ್ಪ, ನಗರಸಭೆ ಸದಸ್ಯ ಸೈಯದ್‌ ಏಜಜ್‌ಪಾಷ, ಮುಖಂಡರಾದ ಅಕ್ಮಲ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT