ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಕಾರ್ಯಕರ್ತರ ಬಂಧಿಸಿ: ಡಿಸಿಎಂ

ನಂಬಿಹಳ್ಳಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌, ಪರಿಸ್ಥಿತಿ ಸಹಜಸ್ಥಿತಿಗೆ
Last Updated 4 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ನಂಬಿಹಳ್ಳಿಯಲ್ಲಿ ಬಿಬಿಎಂಪಿ ಬಿಜೆಪಿ ಸದಸ್ಯ ಸೇರಿದಂತೆ ಹಲವರ ಮೇಲೆ ಹಲ್ಲೆ ಮಾಡಿರುವ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಬಿಎಂಸಿ ಸದಸ್ಯ ಆನಂದ್ ಹೊಸೂರು ಸೇರಿ ಕೆಲವರು ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮುಗಿಸಿ ನಂಬಿಹಳ್ಳಿಯಲ್ಲಿ ಸ್ನೇಹಿತನ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಮಂಗಳವಾರ ರಾತ್ರಿ ಊಟ ಮಾಡುತ್ತಿದ್ದಾಗ ಅಲ್ಲಿಗೆ ನುಗ್ಗಿದ 150 ಹೆಚ್ಚು ಯುವಕರು ಮಚ್ಚು, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಜೆಡಿಎಸ್ ಯುವ ಮುಖಂಡ ಸೂರಜ್ ರೇವಣ್ಣ ಕುಮ್ಮಕ್ಕಿನಿಂದ ಈ ಹಲ್ಲೆ ನಡೆದಿದೆ’ ಎಂದು ಆರೋಪಿಸಿದರು.

ಎರಡು ಕಾರುಗಳು ಜಖಂಗೊಂಡಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಸ್ಥಿಯನ್ನು ತಹಬದಿಗೆ ತಂದಿದ್ದಾರೆ ಎಂದರು.

‘ಸೂರಜ್ ರೇವಣ್ಣ ಸ್ಥಳದಲ್ಲಿ ಇರಲಿಲ್ಲವಲ್ಲಾ’ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದು ಉತ್ತರಿಸಿದರು.

‘ಬಿಜೆಪಿ ಕಾರ್ಯಕರ್ತರಿಂದ ಏನಾದರು ತಪ್ಪು ನಡೆದಿದ್ದರೆ ಪೊಲೀಸರಿಗೆ ತಿಳಿಸಬಹುದಿತ್ತು. ಅದನ್ನು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡಿರುವುದು ಸರಿಯಲ್ಲ. ಜಿಲ್ಲೆಯಲ್ಲಿ ಭಯದ ವಾತಾವರಣ ಇದೆ. ಅಧಿಕಾರದ ದುರ್ಬಳಕೆ, ಕೆಟ್ಟ ವರ್ತನೆ ತೊಲಗಬೇಕು. ಕಾನೂನು ಅನುಷ್ಠಾನಗೊಳಿಸುವ ಮೂಲಕ ಭಯದ ವಾತಾವರಣ ನಿವಾರಣೆ ಮಾಡಲಾಗುವುದು’ ಎಂದರು.

‘ಕೆ.ಆರ್. ಪೇಟೆ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡರೂ ಬಿಜೆಪಿ ಗೆಲುವು ಸಾಧಿಸಲಿದೆ. ನಾಯಕರು ಮೇಲ್ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ತಳ ಮಟ್ಟದಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಒಂದಾಗುವುದಿಲ್ಲ. ಇದು ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಬೀತು ಆಗಿದೆ. ಇದು ಉಭಯ ಪಕ್ಷದ ನಾಯಕರಿಗೆ ಅರ್ಥವಾಗದ ವಿಚಾರವೇನಲ್ಲ’ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವದಲ್ಲಿ ಅವರ ತವರು ಕ್ಷೇತ್ರ ಕೆ.ಆರ್. ಪೇಟೆ ಸಾಕಷ್ಟು ಪ್ರಗತಿ ಸಾಧಿಸಲಿದೆ. ನಾರಾಯಣಗೌಡ ಗೆದ್ದರೆ ಮಂತ್ರಿಯಾಗುತ್ತಾರೆ ಎಂಬ ಭಾವನೆ ಜನರಲ್ಲಿದೆ. ಜೊತೆಗೆ ಕ್ಷೇತ್ರದಲ್ಲಿ ಅಭ್ಯರ್ಥಿ ಪರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 20 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಡಿ. 9ಕ್ಕೆ ಸಿಹಿ ಸುದ್ದಿ ನೀಡಲಾಗುವುದೆಂಬ’ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಖರ್ಗೆ ಅವರ ಚಿಂತನೆಯನ್ನು ತಪ್ಪು ಎನ್ನುವುದಿಲ್ಲ. ಕನಸು ಕಾಣುವವರನ್ನು ಬೇಡ ಎನ್ನಲು ನಾನು ಯಾರು? ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಶಿವನಂಜೇಗೌಡ, ಮುಖಂಡ ಪಟೇಲ್ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT