ಜಿಲ್ಲೆಯ ₹1.23 ಲಕ್ಷ ರೈತರ ಸಾಲ ಮನ್ನಾ: ಎಚ್‌. ಡಿ ರೇವಣ್ಣ

7
ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಘೋಷಣೆ

ಜಿಲ್ಲೆಯ ₹1.23 ಲಕ್ಷ ರೈತರ ಸಾಲ ಮನ್ನಾ: ಎಚ್‌. ಡಿ ರೇವಣ್ಣ

Published:
Updated:
Deccan Herald

ಹಾಸನ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಸುಮಾರು ₹ 1 .23 ಲಕ್ಷ ರೈತರು ಪಡೆದಿರುವ ₹ 501 ಕೋಟಿ ಸಾಲ ಮನ್ನಾ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಸಹಕಾರ ಸಂಸ್ಥೆಗಳು ವಿತರಿಸಿದ ಅಲ್ಪಾವಧಿ ಬೆಳೆ ಸಾಲದ ಪೈಕಿ ಒಂದು ಕುಟುಂಬಕ್ಕೆ ಗರಿಷ್ಠ ₹ 1 ಲಕ್ಷವರೆಗಿನ ಸಾಲವನ್ನು ಬಡ್ಡಿ ಸಮೇತ ಸರ್ಕಾರ ಮನ್ನಾ ಮಾಡಿದೆ. ಇದಲ್ಲದೇ ರಾಷ್ಟ್ರೀಕೃತ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು, ಪ್ರಾಥಮಿಕ ಸಹಕಾರ ಕ್ರೆಡಿಟ್‌ ಸೊಸೈಟಿ, ರೈತ ಸೇವಾ ಸಹಕಾರ ಸಂಘಗಳಿಂದ ಪಡೆದಿರುವ ಬೆಳೆ ಸಾಲಗಳನ್ನು ಕುಟುಂಬಕ್ಕೆ ₹ 2 ಲಕ್ಷ ವರೆಗೂ ಸಾಲ ಮನ್ನಾ ಮಾಡಲು ತೀರ್ಮಾನಿಸಿದೆ. ಜಿಲ್ಲೆಯಲ್ಲಿ ರೈತರು ಪಡೆದಿರುವ ಅಂದಾಜು ₹ 1,500 ಕೋಟಿವರೆಗೂ ಸಾಲ ಮನ್ನಾ ಆಗಲಿದೆ ಎಂದು ವಿವರಿಸಿದರು.

ಹೊಳೆನರಸೀಪುರ ತಾಲ್ಲೂಕಿನ ಕಟ್ಟೆ ಬೆಳಗುಳಿ ಸಮೀಪ ಹೇಮಾವತಿ ನದಿಗೆ ಅಡ್ಡಲಾಗಿ ಶ್ರೀರಾಮದೇವರ ಅಣೆಕಟ್ಟೆಯ ಕೆಳಭಾಗದಲ್ಲಿ ಹೊಸ ಅಣೆಕಟ್ಟೆ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ₹ 122 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು. 96 ಕಿ.ಮೀ. ಉದ್ದದ ಹೇಮಾವತಿ ಬಲ ಮೇಲ್ದಂಡೆ ನಾಲೆಯ ಆಧುನೀಕರಣ ಕಾಮಗಾರಿಯನ್ನು ₹ 380.07 ಕೋಟಿ ಹಾಗೂ ಹೇಮಾವತಿ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿಯನ್ನು ₹ 264.68 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಕ್ರಮ ವಹಿಸಲಾಗಿದೆ. ಅದೇ ರೀತಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ನೀರು ಎತ್ತುವ ಲಿಫ್ಟ್‌ ಕಾಂಪೋನೆಂಟ್ ಪ್ರಗತಿಯಲ್ಲಿದ್ದು, ಡಿಸೆಂಬರ್ ಅಂತ್ಯಕ್ಕೆ ಜಾರಿಗೊಳಿಸಲಾಗುವುದು. ಅಲ್ಲದೇ ಇದೇ ಯೋಜನೆ ಅಡಿ ಗುರುತ್ವಾಕರ್ಷಣೆಯಿಂದ ನೀರು ಹರಿಯಲು ಕಾಲುವೆ ಕಾಮಗಾರಿಗಳನ್ನು ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಮತ್ತು ಅರಸೀಕೆರೆ ತಾಲ್ಲೂಕುಗಳಲ್ಲಿ ಅಂದಾಜು ₹ 2,318 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಂಡಿಗನಹಳ್ಳಿ ಹೋಬಳಿಯ ಕಾಚೇನಹಳ್ಳಿಯಲ್ಲಿ ಏತ ನೀರಾವರಿ ಯೋಜನೆಯ 2ನೇ ಹಂತದ ಕಾಮಗಾರಿ ₹ 96.49 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಮೂರನೇ ಹಂತದ ಕಾಮಗಾರಿ ಶೀಘ್ರ ಪ್ರಾರಂಭಿಸಲಾಗುವುದು ಎಂದರು.

ಬೇಲೂರು ತಾಲ್ಲೂಕಿನ ಹಳೇಬೀಡು–ಮಾದಿಹಳ್ಳಿ ಭಾಗದ 27 ಕೆರೆ, ಚನ್ನಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಕೆರೆ, ಹಿರೀಸಾವೆ, ಶ್ರವಣಬೆಳಗೊಳ ಹೋಬಳಿ, ಕೆ.ಆರ್‌.ಪೇಟೆ ತಾಲ್ಲೂಕಿ ಸಂತೇಬಾಚಹಳ್ಳಿ ಹೋಬಳಿಯ 22 ಕೆರೆಗಳನ್ನು ಕುಡಿಯುವ ನೀರಿಗಾಗಿ ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ನುಡಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಹೇಮಾವತಿ ಅಣೆಕಟ್ಟೆ ಕೆಳಭಾಗದಲ್ಲಿ ಲಭ್ಯವಿರುವ 446 ಎಕರೆ ಖಾಲಿ ಪ್ರದೇಶದಲ್ಲಿ ಕೆಆರ್‌ಎಸ್‌ ಬೃಂದಾವನ ಉದ್ಯಾನ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ, ಸಂಗೀತ ಕಾರಂಜಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಶಾಸಕ ಪ್ರೀತಮ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ. ಎಸ್. ಶ್ವೇತಾ ದೇವರಾಜ್, ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸತೀಶ್, ನಗರಸಭೆ ಅಧ್ಯಕ್ಷ ಎಚ್.ಎಸ್ ಅನಿಲ್ ಕುಮಾರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ, ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಇದ್ದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !