ಗುರುವಾರ , ಡಿಸೆಂಬರ್ 5, 2019
24 °C
ಘಟನೆ ಮುಂದುವರಿಸದಂತೆ ಸುಪ್ರೀಂ ನಿರ್ದೇಶನ; ವಕೀಲರ ಪರಿಷತ್ ಅಧ್ಯಕ್ಷ ಕೆ.ಬಿ.ನಾಯಕ್

ಕಲಾಪ ಬಹಿಷ್ಕಾರ ಕಾನೂನು ಬಾಹಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನ್ಯಾಯಾಲಯಗಳಲ್ಲಿ ವಕೀಲರು ಕಲಾಪ ಬಹಿಷ್ಕಾರ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದು ಕಾನೂನು ಬಾಹಿರ ಎಂದು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಕೆ.ಬಿ.ನಾಯಕ್ ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಾಪ ಬಹಿಷ್ಕಾರದಿಂದ ನ್ಯಾಯಕ್ಕಾಗಿ ಬರುವ ಕಕ್ಷಿದಾರರಿಗೆ ತೊಂದರೆಯಾಗಲಿದೆ. ಇಂತಹ ಘಟನೆ ಮುಂದುವರಿಸದಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎಂದು ಹೇಳಿದರು.

ವಕೀಲರು ಕೇವಲ ದಿನಾಚರಣೆ ಮಾಡಿದರಷ್ಟೇ ಸಾಲದು ನ್ಯಾಯ, ನೀತಿ ಕಾಪಾಡುವ ನಿಟ್ಟಿನಲ್ಲಿ ಅನೇಕ ಉತ್ತಮ ಕೆಲಸ ಮಾಡಬೇಕಿದೆ. ಕಿರಿಯ ವಕೀಲರು ಉತ್ತಮ ವಕೀಲರಾಗಿ ಹೊರ ಹೊಮ್ಮಲು ಹಿರಿಯ ವಕೀಲರು ತರಬೇತಿ, ಸಲಹೆ ಸಹಕಾರ ನೀಡಬೇಕು. ವಕೀಲರ ಪರಿಷತ್ ನಿಂದ ಸಂಘದ ಸದಸ್ಯರಿಗೆ ಗುಂಪು ವಿಮೆ ಯೋಜನೆ ರೂಪಿಸಲಾಗುತ್ತಿದೆ ಎಂದು ನುಡಿದರು.

ಪ್ರಧಾನ ಜಿಲ್ಲಾ ಮತ್ತು ಸೇಷನ್ಸ್‌ ನ್ಯಾಯಾಧೀಶ ಶಿವಣ್ಣ ಮಾತನಾಡಿ, ರೋಗಿಗಳಿಗೆ ವೈದ್ಯರೆ ದೇವರು, ವಕೀಲರಿಗೆ ಕಕ್ಷಿದಾರರೆ ದೇವರು. ಹಾಗಾಗಿ ನ್ಯಾಯ ಕೇಳಿ ಆಶ್ರಯಿಸುವವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದರು.

ನೊಂದು ನ್ಯಾಯಕ್ಕಾಗಿ ಮನೆ ಬಾಗಿಲು ತಟ್ಟಿದವರಿಗೆ ವಕೀಲರು ನ್ಯಾಯ ದೊರಕಿಸಿಕೊಟ್ಟಿರುವ ಹಲವು ಉದಾಹರಣೆಗಳಿದ್ದು, ಪ್ರಜಾಪ್ರಭುತ್ವ ಬಲಗೊಳಿಸಲು ಸಹಕಾರಿಯಾಗಿರುವ ನ್ಯಾಯಾಲಯದಿಂದ ಇಂದು ದೇಶದಲ್ಲಿ ನ್ಯಾಯ, ನೀತಿ ಉಳಿದಿದೆ ಎಂದು ಅಭಿಪ್ರಾಪಟ್ಟರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ದೇಶವನ್ನು ಒಟ್ಟುಗೂಡಿಸುವುದರಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಎಲ್ಲರೂ ನ್ಯಾಯಾಂಗವನ್ನು ಗೌರವಿಸಬೇಕಿದೆ. ಸಾಕಷ್ಟು ದೇಶಗಳಲ್ಲಿ ಸಂವಿಧಾನ, ನ್ಯಾಯಾಂಗ ವ್ಯವಸ್ಥೆ ಸರಿಯಿಲ್ಲದೆ ಅರಾಜಕತೆ ಉಂಟಾಗಿದ್ದನ್ನು ನೋಡಿದ್ದೇವೆ. ಆ ವಿಚಾರದಲ್ಲಿ ಭಾರತದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆ ಉತ್ತಮವಾಗಿದೆ ಎಂದು ನುಡಿದರು.

ಸಾಕಷ್ಟು ಸಂದರ್ಭಗಳಲ್ಲಿ ಕಕ್ಷಿದಾರರು ಮರಣ ಹೊಂದಿದ ನಂತರವೂ ನ್ಯಾಯಾಲಯದಲ್ಲಿ ಪ್ರಕರಣಗಳು ಉಳಿದಿವೆ. ನ್ಯಾಯ ಪಡೆಯಲು ಭಿಕ್ಷಕುರ ರೀತಿಯಲ್ಲಿ ಅಲೆದಾಡುವ ಸ್ಥಿತಿಯಿದೆ. ಇದು ಪರಿಸ್ಥಿತಿ ಬದಲಾವಣೆಯಾಗಿ ತ್ವರಿತವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಜಾರಿಯಾಗಬೇಕು ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನಿವಾಸ್ ಸೆಪೆಟ್ ಮಾತನಾಡಿ, ಸಮಾಜಕ್ಕೆ ಸತ್ಯತೆಯಿಂದ ಕೂಡಿರುವ ನ್ಯಾಯ ಒದಗಿಸುವ ನೇತೃತ್ವವನ್ನು ವಕೀಲರು ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ವತಿಯಿಂದ ನೆರೆ ಸಂತ್ರಸ್ತರ ನಿಧಿಗಾಗಿ ₹ 50 ಸಾವಿರ ಚೆಕ್ ಅನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ.ಶೇಖರ್ ಅಧ್ಯಕ್ಷತೆ ವಹಿಸಿದ್ದರು, ಉಪವಿಭಾಗಾಧಿಕಾರಿ ನವೀನ್‍ ಭಟ್‌, ಹಿರಿಯ ವಕೀಲ ಕೆ.ಆರ್.ಆಚಾರ್ಯ, ಉಪಾಧ್ಯಕ್ಷ ಸುರೇಶ್ ಕಟ್ಟಾಯ, ಪ್ರಧಾನ ಕಾರ್ಯದರ್ಶಿ ಕಾರ್ಲೆ ಮೊಗಣ್ಣಗೌಡ, ಜಂಟಿ ಕಾರ್ಯದರ್ಶಿ ಗೀತಾ, ಖಜಾಂಚಿ ಡಿ.ಆರ್. ಲೋಹಿತಾಶ್ವ ಇದ್ದರು.‌

ಪ್ರತಿಕ್ರಿಯಿಸಿ (+)