ಪ್ರಜ್ವಲ್‌ ಸುಳ್ಳು ಅಫಿಡವಿಟ್‌ ಪ್ರಕರಣ: ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ

ಮಂಗಳವಾರ, ಏಪ್ರಿಲ್ 23, 2019
33 °C
ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತ

ಪ್ರಜ್ವಲ್‌ ಸುಳ್ಳು ಅಫಿಡವಿಟ್‌ ಪ್ರಕರಣ: ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ

Published:
Updated:

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ನಾಮಪತ್ರದ ಜೊತೆಗೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂಬ ಪ್ರತಿಸ್ಪರ್ಧಿ ಬಿಜೆಪಿಯ ಎ.ಮಂಜು ದೂರು ಆಧರಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ವಿಚಾರಣೆ ನಡೆಯಿತು.

ಮೈಸೂರು ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್ ಕುಮಾರ್ , ಜಿಲ್ಲಾ ಚುನಾವಣಾ ಅಧಿಕಾರಿ ಪ್ರಿಯಾಂಕಾ ಮೇರಿ, ಬಿಜೆಪಿ ಅಭ್ಯರ್ಥಿ ಹಾಗೂ ಅವರ ವಕೀಲರ ಸಮ್ಮುಖದಲ್ಲಿ ವಿಚಾರಣೆ ನಡೆಸಿದರು. ಸುಮಾರು ಎರಡು ತಾಸು ನಡೆದ ವಿಚಾರಣೆಯಲ್ಲಿ ದೂರುದಾರರ ಅಹವಾಲನ್ನು ಕೂಲಂಕಷವಾಗಿ ಆಲಿಸಿದರು.

ಪ್ರಜ್ವಲ್ ರೇವಣ್ಣ ಅವರು ಅಧಿಕಾರ್ ವೆಂಚರ್ಸ್ ಲಿಮಿಟೆಡ್ ಮತ್ತು ಡ್ರೋಣ್ ವರ್ಕ್ಫೋರ್ಸ್ ಲಿಮಿಟೆಡ್ ಹೆಸರಿನ ಎರಡು ಕಂಪನಿಗಳಲ್ಲಿ ಈಗಲೂ ಪಾಲುದಾರರಾಗಿದ್ದಾರೆ. ಅದರಲ್ಲಿ ಹಣವನ್ನೂ ತೊಡಗಿಸಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆ ವೇಳೆ, ತಾವು ಷೇರುದಾರರಾಗಿರುವ ಕಂಪನಿ ಬಗ್ಗೆ ಉಲ್ಲೇಖ ಮಾಡದೇ ಸತ್ಯ ಮರೆ ಮಾಚಿದ್ದಾರೆ. ಹೀಗಾಗಿ ಅವರ ನಾಮಪತ್ರ ತಿರಸ್ಕಾರ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಮಂಜು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ವಿಚಾರಣೆ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಪರ ವಕೀಲ ವಿಜಯ್ ಕುಮಾರ್, ‘ ಪ್ರಜ್ವಲ್ ಸುಳ್ಳು ಮಾಹಿತಿಯಿರುವ ಅಫಿಡವಿಟ್ ಸಲ್ಲಿಸಿದ್ದಾರೆ. ಈ ರೀತಿಯ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ, ಪ್ರಜ್ವಲ್ ನಾಮಪತ್ರ ತಿರಸ್ಕರಿಸುವಂತೆ ದೂರು ನೀಡಿದ್ದೇವೆ. ನಾಮಪತ್ರದಲ್ಲಿ ತಪ್ಪು ಮಾಹಿತಿ ಇದ್ದರೂ ಸ್ವೀಕಾರ ಮಾಡಲಾಗಿದೆ ಎಂದು ತಕರಾರು ಹಾಕಿದ್ದೇವೆ. ನಮ್ಮ ವಾದ ಆಲಿಸಿರುವ ಅಧಿಕಾರಿಗಳು ಮುಖ್ಯ ಚುನಾವಣಾ ಅಧಿಕಾರಿಗೆ ವರದಿ ನೀಡುವುದಾಗಿ ಹೇಳಿದ್ದಾರೆ’ ಎಂದು ವಿವರಿಸಿದರು.

ವಿಚಾರಣೆಗೆ ಹಾಜರಾಗಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎ.ಮಂಜು, ‘ ಅಧಿಕಾರಿಗಳಿಗೆ ನಮ್ಮ ಬಳಿಯಿದ್ದ ಎಲ್ಲಾ ಮಾಹಿತಿಗಳನ್ನು ಸಲ್ಲಿಸಿದ್ದೇವೆ. ಚುನಾವಣಾ ಆಯೋಗ ನ್ಯಾಯಸಮ್ಮತ ತೀರ್ಮಾನ ಕೈಗೊಳ್ಳುವ ಭರವಸೆ’ ಇದೆ ಎಂದರು.

ಪ್ರಜ್ವಲ್ ರೇವಣ್ಣ, ‘ತಾವು ಎರಡು ಕಂಪನಿಗಳಿಗೆ ರಾಜೀನಾಮೆ ನೀಡಿದ್ದೇನೆ. ಅಲ್ಲಿ ಯಾವುದೇ ವಹಿವಾಟು ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಅಫಿಡವಿಟ್ ಸಲ್ಲಿಕೆ ವಿವಾದ ಕೇಂದ್ರ ಚುನಾವಣಾ ಆಯೋಗದ ಅಂಗಳ ತಲುಪಿದ್ದು, ಆಯೋಗದ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !