ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಬಸ್‌ಗಳ ಸಂಚಾರ ಆರಂಭ

ಕೆಎಸ್‌ಆರ್‌ಟಿಸಿಯ 150 ಸಿಬ್ಬಂದಿ ಕರ್ತವ್ಯಕ್ಕೆ ಹಾಜರು
Last Updated 10 ಏಪ್ರಿಲ್ 2021, 13:11 IST
ಅಕ್ಷರ ಗಾತ್ರ

ಹಾಸನ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ, ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನವಾದ ಶನಿವಾರವೂ ಮುಂದುವರೆಯಿತು. ಈ ನಡುವೆ ಸಂಜೆ ವೇಳೆಗೆ 30 ಬಸ್‌ಗಳು ಕಾರ್ಯಾಚರಣೆ ಆರಂಭಿಸಿದವು.

ನೌಕರರ ಮನವೊಲಿಸಿ ಕರ್ತವ್ಯಕ್ಕೆ ಕರೆತರುವ ಪ್ರಯತ್ನವನ್ನು ಅಧಿಕಾರಿಗಳು ಮುಂದುವರಿಸಿದ್ದು, ಹಾಸನ ವಿಭಾಗದಲ್ಲಿ 86 ಮೆಕಾನಿಕ್‌ಗಳು, 50 ಚಾಲಕ, ನಿರ್ವಾಹಕರು ಮತ್ತು ಇತರೆ ಸಿಬ್ಬಂದಿ ಸೇರಿ ಒಟ್ಟು 150 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಂಚಾರ ಆರಂಭಿಸಿರುವ ಬಸ್‌ಗಳಿಗೆ ತೊಂದರೆಯಾಗದಂತೆ ಭದ್ರತೆಗಾಗಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ಬೆಳಿಗ್ಗೆಯಿಂದ ಜಿಲ್ಲೆಯ ಬೇಲೂರು, ಸಕಲೇಶಪುರ, ಅರಕಲಗೂಡು, ಜಾವಗಲ್‌, ಹೊಳೆನರಸೀಪುರ, ಶ್ರವಣಬೆಳಗೊಳ, ಅರಸೀಕೆರೆ, ಆಲೂರು, ಹಳೇಬೀಡಿಗೆ ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ಆರಂಭಿಸಿವೆ. ಉಳಿದಂತೆ ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಿಗೆ ತಡೆರಹಿತ ಬಸ್‌ಗಳು ಸಂಚಾರ ನಡೆಸಿದವು ಎಂದು ಕೆಎಸ್‌ಆರ್‌ಟಿಸಿ ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ಮಾಹಿತಿ ನೀಡಿದರು.

ಖಾಸಗಿ ವಾಹನಗಳ ದುಬಾರಿ ಬೆಲೆಗೆ ಬೇಸತ್ತಿರುವ ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಕಾದು ಕುಳಿತ್ತಿದ್ದರು. ಹೊಸ ಬಸ್‌ ನಿಲ್ದಾಣ ಹಾಗೂ ಎನ್‌.ಆರ್‌.ವೃತ್ತದಿಂದ ವಿವಿಧ ತಾಲ್ಲೂಕು ಹಾಗೂ ಹೊರ ಜಿಲ್ಲೆಗಳಿಗೆ ತೆರಳಿದ ಬಸ್‌ಗಳಲ್ಲಿ ಪ್ರಯಾಣಿಕರು ತೆರಳಿದರು. ತಾಲ್ಲೂಕು ಕೇಂದ್ರಗಳಿಂದಲೂ ಬಸ್‌ ಜಿಲ್ಲಾ ಕೇಂದ್ರಕ್ಕೆ ಬರುತ್ತಿವೆ.

ಖಾಸಗಿ ವಾಹನಗಳು ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಹೊರ ಜಿಲ್ಲೆಗಳಿಗೆ ಸಂಚರಿಸಿದವು. ಪೂರ್ಣ ಪ್ರಮಾಣದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು ರಸ್ತೆಗಿಳಿಯದ ಕಾರಣ ಗ್ರಾಮೀಣ ಪ್ರದೇಶದ ಜನರ ಸಮಸ್ಯೆ ದೂರವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT