ಮಂಗಳವಾರ, ಸೆಪ್ಟೆಂಬರ್ 28, 2021
24 °C
ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ

ಕೊಳವೆ ಬಾವಿಗಳಿಗೆ ಮೀಟರ್: ರೈತರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ವಿದ್ಯುತ್ ಖಾಸಗೀಕರಣ ಹಾಗೂ ರೈತರ ಕೊಳವೆ ಬಾವಿಗಳಿಗೆ ಮೀಟರ್ ಅಳವಡಿಸುವುದನ್ನು
ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಜಿಲ್ಲಾಧಿಕಾರಿ
ಕಚೇರಿ ಎದುರು ಧರಣಿ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ತಮಟೆ ಬಡಿಯುತ್ತಾ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿ, ನೂತನ ಕಾನೂನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ವಿದ್ಯುತ್ ಖಾಸಗೀಕರಣಗೊಳಿಸಲು ತೀರ್ಮಾನ ಕೈಗೊಂಡಿರುವುದರಿಂದ ಕೃಷಿ ವಲಯದ
ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ. ಅದರಲ್ಲೂ ಮಧ್ಯಮ ವರ್ಗ ಮತ್ತು ಸಾಮಾನ್ಯ ವರ್ಗದ ಜನರಿಗೆ
ಖಾಸಗಿ ಕಂಪನಿಗಳು ವಿಧಿಸುವ ದುಬಾರಿ ದರವನ್ನು ನೀಡಲು ಅಸಾಧ್ಯವಾಗುತ್ತದೆ ಎಂದರು.

ಒಂದು ವೇಳೆ ವಿದ್ಯುತ್ ಖಾಸಗೀಕರಣಗೊಂಡರೆ ಮುಂಗಡವಾಗಿ ಹಣ ಪಾವತಿಸಿ ವಿದ್ಯುಚ್ಛಕ್ತಿಯನ್ನು ಬಳಕೆ
ಮಾಡಬೇಕಾಗುತ್ತದೆ. ವಿದ್ಯುತ್ ಚ್ಛಕ್ತಿ ಉತ್ಪಾದನೆ ವಿತರಣೆಯನ್ನು ಕಂಪನಿಗಳೇ ನಿರ್ವಹಿಸುತ್ತವೆ. ಕಂಪನಿಗಳು
ಲಾಭವಿಲ್ಲದೆ ಕಾರ್ಯಕ್ರಮ ಮಾಡುವುದು ಅಸಾಧ್ಯ. ಈ ಕಾರಣಕ್ಕೆ ಕೃಷಿ ಪಂಪ್ ಸೆಟ್ ಬಳಕೆಗೆ ಸಿಗುವ
ವಿದ್ಯುಚ್ಛಕ್ತಿ ಮುಂಬರುವ ದಿನಗಳಲ್ಲಿ ಕನಸಿನ ಮಾತಾಗಿದೆ. ಆದ್ದರಿಂದ ವಿದ್ಯುತ್ ಕ್ಷೇತ್ರ ಸರ್ಕಾರಿ
ಸಂಸ್ಥೆಯಾಗಿಯೇ ಉಳಿಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾ ಘಟಕದ ಅಧ್ಯಕ್ಷ ಬಾಬು, ಜಿಲ್ಲಾ
ಖಜಾಂಚಿ ಅಂಗಡಿ ರಾಜಣ್ಣ, ಉಪಾಧ್ಯಕ್ಷ ಮೀಸೆ ರಾಜಣ್ಣ, ಪುಟ್ಟಸ್ವಾಮಿ, ತಿಮ್ಮಣ್ಣ, ಬಸ್ತಿಹಳ್ಳಿ ಗೌರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು