ಮಂಗಳವಾರ, ಮೇ 17, 2022
26 °C
ಆಸ್ತಿ ದಾಖಲೆ ತಿದ್ದಿದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ

ಪುರಸಭೆ ಆಸ್ತಿ ವಿವಾದ: ಬಗೆಹರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ಪಟ್ಟಣದ ತೇಜಸ್ವಿ ಚಿತ್ರಮಂದಿರ ಪಕ್ಕದ ಸುಮಾರು 4200 ಅಡಿ ಪುರಸಭೆ ನಿವೇಶನವನ್ನು ದಾಖಲೆ ತಿದ್ದಿ ಅಕ್ರಮ‌ವಾಗಿ ಖಾತೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪುರಸಭೆ ಅಧ್ಯಕ್ಷ ಕಾಡಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಯಿತು.

‘ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಬೈಂದೂರು ವಿರಾಜಪೇಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದ ಹೃದಯಭಾಗದಲ್ಲಿ ಪುರಸಭೆ ನಿವೇಶನವನ್ನು ಹಿಂದಿನ ಅಧಿಕಾರಿಗಳು ಹಾಗೂ ಕೆಲ ನೌಕರರು ದಾಖಲೆ ತಿದ್ದಿ ಥಿಯೇಟರ್ ಮಾಲೀಕರ ಹೆಸರಿಗೆ ಮಾಡಿರುವ ಬಗ್ಗೆ ದಾಖಲೆ ಸಮೇತ ದೂರುಗಳು ಬಂದಿವೆ. ಜನರು  ಸದಸ್ಯರಾಗಿರುವ ನಮ್ಮನ್ನು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ನಾವೇನು ಉತ್ತರ ನೀಡಬೇಕು, ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳೇ ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಸಭೆಯ ಗಮನಕ್ಕೆ ತನ್ನಿ’ ಎಂದು ಸದಸ್ಯ ಪ್ರಜ್ವಲ್‌ ಆಗ್ರಹಿಸಿದರು.

ಮುಖ್ಯಾಧಿಕಾರಿ ವಿಲ್ಸನ್ ಮಾತನಾಡಿ, ‘ದಾಖಲೆಗಳನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ದಾಖಲೆ ತಿದ್ದಿರುವುದು ಕಂಡು ಬಂದಿದೆ. ಎರಡು ದಿನಗಳಲ್ಲಿ ಸರ್ವೆ ನಡೆಸಿ, ಅವರ ಜಾಗವನ್ನು ಗೊತ್ತು ಮಾಡಿ, ಜಿಲ್ಲಾಧಿಕಾರಿಗಳಿಗೆ ವರದಿ ಕಳಿಸಲಾಗುವುದು’ ಎಂದರು.

‘ಈ ಕೆಲಸ ತಕ್ಷಣ ಆಗಬೇಕು, ಪುರಸಭೆ ಆಸ್ತಿಯನ್ನೆಲ್ಲಾ ಖಾಸಗೀಯವರ ಹೆಸರಿಗೆ ದಾಖಲೆ ಮಾಡಿಕೊಡುತ್ತಿದ್ದಾರೆ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಹೀಗಾದರೆ ಸದಸ್ಯರ ಮೇಲೆ ನಂಬಿಕೆಯೇ ಇಲ್ಲವಾಗುತ್ತದೆ’ ಎಂದು ಕೆಲ ಸದಸ್ಯರು ಹೇಳಿದರು.

‘ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಕೂಡಲೇ ಪರಿಹಾರ ಆಗಬೇಕು. ರಸ್ತೆ, ಮನೆಗಳ ಮುಂದೆ ರಾಶಿ ರಾಶಿ ಕಸ ಬಿದ್ದಿದೆ. ಸಾರ್ವಜನಿಕರು ಬಾಯಿಗೆ ಬಂದಂತೆ ಪುರಸಭಾ ಸದಸ್ಯರನ್ನು ಬೈಯುತ್ತಿದ್ದಾರೆ. ಈ ಸಮಸ್ಯೆಗೆ ಕೂಡಲೆ ಶಾಶ್ವತ ಪರಿಹಾರ ಆಗಲೇ ಬೇಕು’ ಎಂದು ಮಹಿಳಾ ಸದಸ್ಯರು ಒತ್ತಾಯಿಸಿದರು.

‘ಪಕ್ಕದ ಮಳಲಿ ಗ್ರಾಮದಲ್ಲಿ ಈಗಾಗಲೇ ನಿರ್ಮಾಣ ಹಂತದಲ್ಲಿ ಇರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದಕ್ಕಾಗಿ ₹ 2.27 ಲಕ್ಷ ಅನುದಾನದಲ್ಲಿ ಟೆಂಡರ್ ನೀಡಲಾಗಿದೆ. ಕಾಮಗಾರಿಗೆ ಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆ’ ಎಂದು ಪುರಸಭಾ ಅಧ್ಯಕ್ಷ ಕಾಡಪ್ಪ ಹೇಳಿದರು.

ಸಕಲೇಶ್ವರಸ್ವಾಮಿ ಜಾತ್ರಾ ವಸ್ತು ಪ್ರದರ್ಶನವನ್ನು ಟೆಂಡರ್ ನೀಡುವುದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪುರಸಭೆ ವತಿಯಿಂದಲೇ ನಡೆಸಲು ತೀರ್ಮಾನಿಸಲಾಯಿತು. ಬಿ.ಎಂ ರಸ್ತೆಯ ಒಂದು ಕಡೆ 300 ಮೀಟರ್ ಇಂಟರ್ ಲಾಕ್‌ ‌ಹಾಕುವುದು, ಮಳಲಿ ಗ್ರಾಮದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಹಾಗೂ ಅಲ್ಲಿ ಕೊಳವೆಬಾವಿ ದುರಸ್ತಿ ಮಾಡಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕಾನೂನು ಬಾಹಿರವಾಗಿ ಖಾತೆ ಮಾಡಿಸಿಕೊಂಡಿರುವ ಆಸ್ತಿಗೆ ಸಂಬಂಧಿಸಿದಂತೆ ಪುರಸಭಾ ಅಧ್ಯಕ್ಷರು ಚರ್ಚೆ ನಡೆಯಬೇಕು ಎಂದು ಸದಸ್ಯ ಅಣ್ಣಪ್ಪ ಪಟ್ಟು ಹಿಡಿದರು. ಈ ವಿಷಯವನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಎಸಿಬಿಗೆ ದೂರು ನೀಡಿರುವುದರಿಂದ ಈ ಸಭೆಯಲ್ಲಿ ಆ ವಿಷಯ ಚರ್ಚೆ ಬೇಡ ಎಂದು ಕೆಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು