ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆಗಳಲ್ಲಿ ನೆರಳು, ನೀರಿನ ವ್ಯವಸ್ಥೆ

ಜಿಲ್ಲಾಡಳಿತದಿಂದ ಮತದಾರರ ಮನೆಗೆ ಮತಚೀಟಿ ವಿತರಣೆ
Last Updated 9 ಮೇ 2018, 10:29 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯ 2,384 ಮತಗಟ್ಟೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಮೊದಲ ಬಾರಿಗೆ ₹2.75 ಕೋಟಿ ಹಣ ನೀಡಿದೆ. ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಫ್ಯಾನ್‌, ವಿದ್ಯುತ್‌ ದೀಪ, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ನೆರಳು ಇರದ ಮತಗಟ್ಟೆಗಳಲ್ಲಿ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲ ಮತಗಟ್ಟೆಗಳಿಗೆ ಅಂಗವಿಕಲರಿಗೆ ರ್‍ಯಾಂಪ್‌ ನಿರ್ಮಿಸಿದ್ದು, ಗಾಲಿ ಕುರ್ಚಿಗಳನ್ನು ಖರೀದಿಸಲಾಗುತ್ತಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ 21.17 ಲಕ್ಷ ಮತದಾರರು ಇದ್ದು, ಅವರ ಮನೆಗೆ ತೆರಳಿ ಮತಚೀಟಿ ಹಾಗೂ ಮತದಾನದ ಬಗ್ಗೆ ಸಮಗ್ರ ಮಾಹಿತಿ ಇರುವ ಮಾಹಿತಿ ಪತ್ರ ವಿತರಿಸುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದರು.

ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಈ ವರೆಗೆ ₹70.51 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇದು ಯಾವುದೇ ಅಭ್ಯರ್ಥಿ, ಇಲ್ಲವೆ ಪಕ್ಷಕ್ಕೆ ಸೇರಿದ್ದು ಸಾಬೀತಾಗಿಲ್ಲ. ₹57.29 ಲಕ್ಷ ಮೌಲ್ಯದ ಟಿ.ವಿ., ಪ್ರಚಾರ ಸಾಮಗ್ರಿ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಯಮ ಉಲ್ಲಂಘಿಸಿದ 8 ವೈನ್‌ಶಾಪ್‌ಗಳ ಪರವಾನಗಿ ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂದಿನ ಚುನಾವಣೆಯಲ್ಲಿ ಶೇ 90ರಷ್ಟು ಮತದಾನ ದಾಖಲಾಗಿದ್ದು, ಅವುಗಳಲ್ಲಿ ಶೇ 75ರಷ್ಟು ಮತಗಳು ಒಂದೇ ಅಭ್ಯರ್ಥಿಗೆ ಚಲಾವಣೆಯಾಗಿರುವ 180 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಆ ಪೈಕಿ 50 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌ ಮೂಲಕ ಮತದಾನ ಪ್ರಕ್ರಿಯೆ ನೇರ ಪ್ರಸಾರ ಮಾಡಲಾಗುವುದು ಎಂದು ಹೇಳಿದರು.

ಮೇ 10 ರಂದು ಸಂಜೆ 6ರಿಂದ ಮೇ 12ರ ಸಂಜೆ 6.30ರ ವರೆಗೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಚರ್ಚೆ, ಸಂವಾದ, ವಿಶ್ಲೇಷಣೆ, ಚುನಾವಣೋತ್ತರ ಸಮೀಕ್ಷೆ, ಜಾಹೀರಾತು ಹಾಗೂ ಸುದ್ದಿಯನ್ನು ವಿದ್ಯುನ್ಮಾನ ವಾಹಿನಿಗಳಲ್ಲಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಮೇ 11 ಮತ್ತು 12 ರಂದು ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಘ-ಸಂಸ್ಥೆ, ವ್ಯಕ್ತಿಗತವಾಗಿ ಮುದ್ರಣ ಮಾಧ್ಯಮದಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತು ಪ್ರಕಟಿಸಬೇಕಾದಲ್ಲಿ ಸಂಬಂಧಿಸಿದ ರಾಜ್ಯ/ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯಿಂದ ಮೇ 9ರ ಒಳಗಾಗಿ ಪೂರ್ವಾನುಮತಿ ಪಡೆದಿರಬೇಕು ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಎಎಸ್‌ಪಿ ಲೋಕೇಶ್‌ ಬಿ.ಜೆ. ಇದ್ದರು.

ಬಹಿರಂಗ ಪ್ರಚಾರಕ್ಕೆ ಎರಡೇ ದಿನ: ‘ಮೇ 10ರ ಸಂಜೆ 6ರ ನಂತರ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಮನೆ ಮನೆ ಪ್ರಚಾರಕ್ಕೆ ಅಡ್ಡಿ ಇಲ್ಲ. ಆದರೆ, ಒಂದು ತಂಡದಲ್ಲಿ ಗರಿಷ್ಠ 10 ಜನ ಮಾತ್ರ ಇರಬೇಕು. ಈ ಅವಧಿಯ ನಂತರ ಅಭ್ಯರ್ಥಿಗಳು ಮೂರು ವಾಹನಗಳನ್ನು ಮಾತ್ರ ಬಳಸಬೇಕು. ಉಳಿದ ವಾಹನಗಳಿಗೆ ನೀಡಿರುವ ಪರವಾನಗಿ ರದ್ದಾಗಲಿದೆ. ಹೊರಗಿನವರು ಕ್ಷೇತ್ರ ತೊರೆಯಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.

ಇದೇ ಮೊದಲ ಬಾರಿ ಹೆಚ್ಚಿನ ಭದ್ರತೆ: ‘ಅರೆ ಸೇನಾಪಡೆಯ 23 ತುಕಡಿಗಳು ಸೇರಿದಂತೆ ಒಟ್ಟಾರೆ 6 ಸಾವಿರ ಸಮವಸ್ತ್ರಧಾರಿ ಅಧಿಕಾರಿ/ಸಿಬ್ಬಂದಿ ಜಿಲ್ಲೆಯ ಚುನಾವಣಾ ಬಂದೋಬಸ್ತ್‌ಗೆ ನೇಮಕಗೊಂಡಿದ್ದಾರೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚಿನ ಭದ್ರತೆಯಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್‌ ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಡಿವೈಎಸ್‌ಪಿ ದರ್ಜೆಯ ಅಧಿಕಾರಿಯನ್ನು ಪೊಲೀಸ್‌ ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಿ ಆ ಕ್ಷೇತ್ರದ ಭದ್ರತೆಯ ಮೇಲ್ವಿಚಾರಣೆಯ ಹೊಣೆಯನ್ನು ಅವರಿಗೆ ವಹಿಸಲಾಗುವುದು. ಒಟ್ಟು ಮತಗಟ್ಟೆಗಳಲ್ಲಿ ಶೇ20ರಷ್ಟು ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಿದ್ದು, ಅಲ್ಲಿ ಹೆಡ್‌ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸ ಲಾಗುವುದು. ಪ್ರತಿ ಮತಗಟ್ಟೆಗೂ ಒಬ್ಬ ಸಿಬ್ಬಂದಿ ಇರಲಿದ್ದಾರೆ ಎಂದರು.

**
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ 13 ಸಾವಿರ ನೌಕರರಿಗೆ ಮತಪತ್ರ ವಿತರಿಸಲಾಗಿತ್ತು. ಅಂಚೆ ಮತದಾನ ಪ್ರಮಾಣ ಶೇ 95ರಷ್ಟಾಗಿದೆ
– ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT