ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠದ ಜೊತೆಗೆ ಪೌಷ್ಟಿಕ ಊಟ: ಪೋಷಕರ ಸೆಳೆಯುವ ಕೊಣನೂರಿನ ವಿದ್ಯಾರ್ಥಿ ನಿಲಯ

ಪೋಷಕರ ಸೆಳೆಯುವ ಕೊಣನೂರಿನ ಪರಿಸರ ಸ್ನೇಹಿ ವಿದ್ಯಾರ್ಥಿ ನಿಲಯ
ಗಂಗೇಶ್‌ ಬಿ.ಪಿ.
Published 20 ಫೆಬ್ರುವರಿ 2024, 6:35 IST
Last Updated 20 ಫೆಬ್ರುವರಿ 2024, 6:35 IST
ಅಕ್ಷರ ಗಾತ್ರ

ಕೊಣನೂರು: ವಿದ್ಯಾರ್ಥಿನಿಲಯದ ಹಸಿರುಮಯ ವಾತಾವರಣವು ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಒದಗಿಸುವುದು ಸಾಧ್ಯವಾಗಿದೆ.

ಇಲ್ಲಿನ ಕೋಟೆ ಬೀದಿಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಪ್ರವೇಶಿಸಿದ ತಕ್ಷಣ, ಹಚ್ಚಹಸಿರಿನ ತೋಟಕ್ಕೆ ಬಂದವೇನೋ ಎನ್ನುವಂತೆ ಭಾಸವಾಗುತ್ತದೆ. ಆವರಣ ತುಂಬ ಗಿಡಮರ, ಬಳ್ಳಿಗಳು ಕಂಗೊಳಿಸುತ್ತಿದ್ದು, ಪರಿಸರಸ್ನೇಹಿ ನಿಲಯವೆಂದು 2023-24 ನೇ ಸಾಲಿನ ಜಿಲ್ಲಾಡಳಿತದ ಗಣರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.

ಪ್ರತಿ ವರ್ಷ 5 ರಿಂದ 10 ನೇ ತರಗತಿಯವರೆಗಿನ 45 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಅವಕಾಶವಿರುವ ಈ ವಿದ್ಯಾರ್ಥಿ ನಿಲಯವು, ಮಕ್ಕಳ ವಿದ್ಯಾಭ್ಯಾಸ, ಸ್ವಚ್ಛತೆ, ಶಿಸ್ತಿನ ವಿಷಯದಲ್ಲಷ್ಟೇ ಅಲ್ಲದೆ ನಿಲಯದ ಹೊರಭಾಗದ ಪರಿಸರವನ್ನು ಅತ್ಯುತ್ತಮವಾಗಿ ನಿಭಾಯಿಸುವಲ್ಲಿ ಮೇಲುಗೈ ಸಾಧಿಸಿದೆ.

ನಿಲಯದ ಮುಂಭಾಗ ಮತ್ತು ಹಿಂದಿರುವ ಸ್ಥಳವನ್ನು ಒಂದಷ್ಟೂ ವ್ಯರ್ಥವಾಗದಂತೆ ಬಳಸಿಕೊಳ್ಳುತ್ತಿದ್ದು, ಲಭ್ಯವಿರುವ ಪೂರ್ಣ ಸ್ಥಳದಲ್ಲಿ ಮೆಂತ್ಯ, ಸಬ್ಬಸಿಗೆ, ದಂಟು, ಎಳವರೆ, ಪಾಲಕ್‌, ಮೂಲಂಗಿ, ಗಜ್ಜರಿ, ಬೀಟ್‌ರೂಟ್, ಸೀಮೆ ಬದನೆ ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ನಿಲಯದ ಮಕ್ಕಳಿಗೆ ವರ್ಷದ ಎಲ್ಲ ಕಾಲದಲ್ಲೂ ತಾಜಾ ಸೊಪ್ಪು ಮತ್ತು ತರಕಾರಿಗಳನ್ನು ಒದಗಿಸಲು ಸಾಧ್ಯವಾಗಿದೆ.

ಕೊಣನೂರಿನ ವಿದ್ಯಾರ್ಥಿ ನಿಲಯದಲ್ಲಿ ಬೆಳೆದಿರುವ ಬಾಳೆ
ಕೊಣನೂರಿನ ವಿದ್ಯಾರ್ಥಿ ನಿಲಯದಲ್ಲಿ ಬೆಳೆದಿರುವ ಬಾಳೆ

ಇಲಾಖೆಯು ನೀಡುವ ಊಟದ ನಿಯಮವನ್ನು ತಪ್ಪದೇ ಪಾಲಿಸುವುದರ ಜೊತೆಗೆ, ನಿಲಯದ 3 ಅಡುಗೆ ಸಿಬ್ಬಂದಿ ಪರಿಶ್ರಮ ಮತ್ತು ಮೇಲ್ವಿಚಾರಕರ ಆಸಕ್ತಿಯಿಂದ ತಾಜಾ ಸೊಪ್ಪು, ತರಕಾರಿಗಳನ್ನು ಸೇವಿಸಿ ಪೌಷ್ಟಿಕ ಆಹಾರ ಸೇವಿಸುವ ಅವಕಾಶ  ಇಲ್ಲಿನ ವಿದ್ಯಾರ್ಥಿಗಳಿಗೆ ದೊರಕಿದೆ. ಆವರಣದಲ್ಲಿ 6 ತೆಂಗು ಮತ್ತು ಅಡಿಕೆ ಗಿಡಗಳಿದ್ದು, ಇಲ್ಲಿನ ತೆಂಗಿನ ಕಾಯಿಗಳನ್ನು ಪೂರ್ಣವಾಗಿ ವಿದ್ಯಾರ್ಥಿನಿಲಯದ ಅಡುಗೆಗೆ ಬಳಸಲಾಗುತ್ತಿದೆ. 30 ಕ್ಕೂ ಹೆಚ್ಚು ಬೂದು ಮತ್ತು ಪಚ್ಚ ಬಾಳೆಗಿಡಗಳಲ್ಲಿ ನೈಸರ್ಗಿಕವಾಗಿ ಹಣ್ಣು ಮಾಡಿ ಮಕ್ಕಳಿಗೆ ನೀಡುವುದು ಇಲ್ಲಿನ ಪರಿಪಾಠವಾಗಿದೆ.

ಹಸಿರಿನಿಂದ ಕಂಗೊಳಿಸುವ ಕೊಣನೂರಿನ ವಿದ್ಯಾರ್ಥಿ ನಿಲಯ.
ಹಸಿರಿನಿಂದ ಕಂಗೊಳಿಸುವ ಕೊಣನೂರಿನ ವಿದ್ಯಾರ್ಥಿ ನಿಲಯ.

ಹಸಿರಿನ ವಾತಾವರಣದಿಂದ ಕೂಡಿರುವ ಇಡೀ ವಿದ್ಯಾರ್ಥಿನಿಲಯವೇ ತಂಪಾಗಿದ್ದು, ಸ್ವಚ್ಛತೆಯನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ನಿಲಯದ ಕಾರಿಡಾರ್‌ನಲ್ಲಿಯೂ ವಿವಿಧ ಅಲಂಕಾರಿಕ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಲಾಗಿದೆ.

ಅಜಿತ್‍ಕುಮಾರ್ ಕೆ.ಆರ್.
ಅಜಿತ್‍ಕುಮಾರ್ ಕೆ.ಆರ್.
ಇಲ್ಲಿನ ಮಕ್ಕಳೂ ನಮ್ಮ ಮಕ್ಕಳಂತೆ. ಆರೋಗ್ಯಕರ ಆಹಾರದ ಜೊತೆಗೆ ಪೌಷ್ಟಿಕಾಂಶವಿರುವ ಸೊಪ್ಪು ತರಕಾರಿ ಇಲ್ಲಿಯೇ ಬೆಳೆದು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದರೆ ನಮಗೂ ಅದು ಹೆಮ್ಮೆ
ಅಜಿತ್‍ಕುಮಾರ್ ಕೆ.ಆರ್. ಹಿರಿಯ ಮೇಲ್ಚಿಚಾರಕ
ನೂತನ್
ನೂತನ್
ವಿದ್ಯಾರ್ಥಿನಿಲಯದಲ್ಲಿ ರುಚಿ ಊಟದ ಜೊತೆಗೆ ಕಲಿಯಲು ಉತ್ತಮ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ. ಇಲ್ಲಿ ಬೆಳೆಯುವ ಸೊಪ್ಪು ತರಕಾರಿ ಬಾಳೆಹಣ್ಣು ತೆಂಗಿನಕಾಯಿಗಳನ್ನು ಹಾಸ್ಟೆಲ್ ಅಡುಗೆಗೆ ಬಳಸುತ್ತಾರೆ
ನೂತನ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ
ಪ್ರತಿ ವರ್ಷ 45 ವಿದ್ಯಾರ್ಥಿಗಳು
ಈ ವಿದ್ಯಾರ್ಥಿ ನಿಲಯದಲ್ಲಿ ಪ್ರತಿ ವರ್ಷ ಒಟ್ಟು 45 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಅವಕಾಶವಿದೆ. ಇದರಲ್ಲಿ ಎಸ್ಸೆಸ್ಸೆಲ್ಸಿಯ 15 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. 2022-23 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ನಿಲಯದಲ್ಲಿ ಮಕ್ಕಳ ಓದಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಉದಾಹರಣೆಯಾಗಿದೆ. ಬಿಎಸ್‌ಎಸ್ ಶಾಲೆಯ ಪೃಥ್ವಿರಾಜ್ ಶೇ 89.75 ಅಂಕಗಳನ್ನು ಗಳಿಸಿರುವುದು ಗಣನೀಯ ಸಾಧನೆ. ವಿದ್ಯಾರ್ಥಿಗಳ ಕಲಿಕೆಯ ಕುರಿತಂತೆ ನಿಗಾ ವಹಿಸಲು ಪೋಷಕರ ಸಭೆ ಸಹಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಲು ರಾಷ್ಟ್ರೀಯ ಹಬ್ಬಗಳ ಆಚರಣೆ 2 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ವಿಷಯಗಳ ಕುರಿತು ಸಂವಾದ ಕಾರ್ಯಕ್ರಮ ಸೇರಿದಂತೆ ನಿಲಯದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT