ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ವ್ಯವಸ್ಥೆ ಕುಸಿದರೆ ಅರಾಜಕತೆ

ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಎಚ್ಚರಿಕೆ
Last Updated 9 ಫೆಬ್ರುವರಿ 2019, 14:16 IST
ಅಕ್ಷರ ಗಾತ್ರ

ಹಾಸನ: ‘ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಕುಸಿದು ಬಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ’ ಎಂದು ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

ನಗರದ ರಾಮಾ ಹೋಟೆಲ್ ನಲ್ಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿಗೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಗಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ದೇಶದಲ್ಲಿ ಜನರು ಈಗಾಗಲೇ ಕಾರ್ಯಾಂಗ ಮತ್ತು ಶಾಸಕಾಂಗ ಮೇಲೆ ನಂಬಿಕೆ ಕಳೆದುಕೊಂಡಿದ್ದು, ನ್ಯಾಯಾಂಗದ ಮೇಲೆ ಸ್ವಲ್ಪ ನಂಬಿಕೆ ಇಟ್ಟುಕೊಂಡಿದ್ದಾರೆ. ಒಂದು ವೇಳೆ ನ್ಯಾಯಾಂಗ ವ್ಯವಸ್ಥೆ ಕುಸಿದು ಬಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿ ಪ್ರಜಾಪ್ರಭುತ್ವ ನಾಶವಾಗುತ್ತದೆ’ ಎಂದು ಎಚ್ಚರಿಸಿದರು.

‘ತೀರ್ಪುಗಳು ವಿಳಂಬ ಆಗುತ್ತಿರುವುದರ ಜತೆಗೆ ಹೆಚ್ಚು ಹಣ ವ್ಯಯವಾಗುತ್ತಿರುವ ಕಾರಣ ನ್ಯಾಯಾಂಗದ ವ್ಯವಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ನ್ಯಾಯಾಲಯಗಳು ಹಾಗೂ ನ್ಯಾಯಾಧೀಶರ ಕೊರತೆ ಇದಕ್ಕೆ ಪ್ರಮುಖ ಕಾರಣ. ಶೇಕಡಾ 40ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ನ್ಯಾಯಾಂಗದ ನಂಬಿಕೆ ಉಳಿಸಿಕೊಳ್ಳಲು ಗುಣಮಟ್ಟದ ತೀರ್ಪು, ಕಡಿಮೆ ಅವಧಿ ಹಾಗೂ ಕಡಿಮೆ ಖರ್ಚಿನಲ್ಲಿ ನ್ಯಾಯ ನೀಡಲು ನ್ಯಾಯಮೂರ್ತಿಗಳು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಪ್ರತಿಯೊಬ್ಬರು ಕೋರ್ಟ್‌ ತೀರ್ಪನ್ನು ಗೌರವಿಸುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ತೀರ್ಪು ವಿಮರ್ಶಿಸುವ ಅಧಿಕಾರವನ್ನು ಸಂವಿಧಾನ ನೀಡಿದೆ. ವಿಮರ್ಶೆ ವ್ಯಕ್ತಿಗತವಾಗಿರದೆ ಆರೋಗ್ಯಕರವಾಗಿರಬೇಕು’ ಎಂದರು.

‘ಬಾಬರಿ ಮಸೀದಿ ವಿವಾದವನ್ನು ಎರಡು ಧರ್ಮಗಳ ಗುರುಗಳು ಹಾಗೂ ಜನಪ್ರತಿನಿಧಿಗಳು ಕುಳಿತು ಇತ್ಯರ್ಥ ಪಡಿಸಬೇಕಾದ ಪ್ರಕರಣ. ಕಾವೇರಿ ನದಿ ನೀರು ಹಂಚಿಕೆ ಕೂಡ ಎರಡು ರಾಜ್ಯದ ಮುಖ್ಯಮಂತ್ರಿಗಳು ಕುಳಿತು ಬಗೆಹರಿಸಿಕೊಳ್ಳಬಹುದಾದ ಪ್ರಕರಣ. ಆದರೆ, ಇದನ್ನು ಕೋರ್ಟ್‌ ಮುಂದೆ ತರುತ್ತಿರುವುದರಿಂದ ನ್ಯಾಯಾಂಗದ ಮೇಲೆ ಹೆಚ್ಚು ಹೊರೆ ಬೀಳುತ್ತಿದೆ’ ಎಂದು ವಿಷಾದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಎಚ್.ಪಿ.ಸಂದೇಶ್, ‘ಪ್ರತಿ ಪ್ರಜೆಗೂ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. ಊರಿನ ಜನ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ಗ್ರಾಮೀಣ ಪ್ರದೇಶದ ವ್ಯಕ್ತಿಗೆ ಅವರ ಅನುಭವಗಳು ಸಾಧನೆಗೆ ಮುನ್ನುಡಿಯಾಗುತ್ತವೆ’ ಎಂದರು.

ಹೆತ್ತೂರು ಗ್ರಾಮಸ್ಥರು ಸಂದೇಶ್ ದಂಪತಿಯನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್, ಅಪ್ಪಸ್ವಾಮಿಗೌಡ, ಎಚ್.ಎಂ.ಪುಟ್ಟಸ್ವಾಮಿಗೌಡ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್.ಮುದ್ದೇಗೌಡ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಜಿ.ಪಿ.ಶೇಖರ್, ಉದ್ಯಮಿ ಅತಿಹಳ್ಳಿ ಎಂ.ಮಲ್ಲೇಶ್, ಎಸ್ ಡಿಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್, ಹೆತ್ತೂರು ಪಿ.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT