ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣನೂರು: ಮುರುಕಲು ಮನೆಯೇ ವೃದ್ಧೆಗೆ ಗತಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅನುದಾನವೂ ಇಲ್ಲ, ಮನೆಯೂ ಇಲ್ಲ
Last Updated 25 ಆಗಸ್ಟ್ 2021, 5:02 IST
ಅಕ್ಷರ ಗಾತ್ರ

ಕೊಣನೂರು: ಗ್ರಾಮ ಪಂಚಾಯಿತಿಯ ಲೆಕ್ಕದಲ್ಲಿ ವೃದ್ಧೆಯು ಸ್ವಂತ ಮನೆ ಹೊಂದಿದ್ದರೂ ಸಹ ಇಂದೋ ನಾಳೆಯೋ ಬಿದ್ದು ಹೋಗುವಂತಹ ಗುಡಿಸಲಿನ ವಾಸವೆ ಗತಿಯಾಗಿದೆ. ಏಕೆಂದರೆ ವೃದ್ಧೆಯ ಹೆಸರಿಗೆ ಬಂದಿದ್ದ ಆಶ್ರಯ ಯೋಜನೆಯ ಅನುದಾನ ಮತ್ತೊಬ್ಬರ ಪಾಲಾಗಿ ಮನೆಯೂ ಇಲ್ಲ, ಅನುದಾನವೂ ಇಲ್ಲ ಎಂಬಂತಾಗಿದೆ.

ಹೋಬಳಿಯ ಬನ್ನೂರು ಗ್ರಾ.ಪಂ ವ್ಯಾಪ್ತಿಯ ಅರೆಗಲ್ಲು ಗ್ರಾಮದ ಕೆ.ಸಿ. ಸರಸ್ವತಿ ಕೋಂ ಚಂಗಪ್ಪ ಅವರ ಹೆಸರಿಗೆ ಪ್ರಧಾನ ಮಂತ್ರಿ ಆವಾಸ್ ಆಶ್ರಯ ಯೋಜನೆಯಡಿ ಮನೆ ಮಂಜೂರಾಗಿ, ಅನುದಾನ ₹ 89 ಸಾವಿರ, 3 ಕಂತುಗಳಲ್ಲಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಮೂರು ತಿಂಗಳ ಹಿಂದೆ ಗ್ರಾಮದ ಗ್ರಾ.ಪಂ ಮಾಜಿ ಸದಸ್ಯರೊಬ್ಬರು ತಮ್ಮ ಖಾತೆಯಲ್ಲಿದ್ದ ಹಣವನ್ನು ತೆಗೆದುಕೊಂಡು ನನಗೆ ₹ 1 ಸಾವಿರ ನೀಡಿದ್ದಾರೆ’ ಎಂದು ವೃದ್ಧೆ ಸರಸ್ವತಿ ಗ್ರಾ.ಪಂ ಅಧ್ಯಕ್ಷರ ಮುಂದೆ ಹೇಳಿದ್ದರು.

ಈ ಬಗ್ಗೆ ವಿಚಾರಿಸುವುದಾಗಿ ಗ್ರಾ.ಪಂ ಅಧ್ಯಕ್ಷ ಕಾಂತರಾಜು ಹೇಳಿದಾಗ ಮರುದಿನವೇ ವೃದ್ಧೆಗೆ ಖಾತೆಗೆ ₹ 89 ಸಾವಿರ ಮರು ಜಮೆ ಆಗಿದ್ದರಿಂದ ವಿಷಯ ಮತ್ತಷ್ಟು ತಿರುವು ಪಡೆಯಿತು.

‘ಗ್ರಾ.ಪಂ ದಾಖಲೆಗಳು ಮತ್ತು ಸ್ಥಳ ಪರಿಶೀಲನೆ ನಡೆಸಿದಾಗ ಸರಸ್ವತಿ ಯವರಿಗೆ ಅನ್ಯಾಯ ವಾಗಿರುವುದು ಕಂಡುಬಂದಿದೆ. ಸೂಕ್ತ ಕ್ರಮಕ್ಕಾಗಿ ತಾಲ್ಲೂಕು ಪಂಚಾಯಿತಿ ಇ.ಒ ಅವರಿಗೆ ಪತ್ರ ಬರೆಯಲಾಗಿದೆ’ ಎಂದು
ಬನ್ನೂರು ಗ್ರಾ.ಪಂ ಅಧ್ಯಕ್ಷ ಕಾಂತರಾಜು ತಿಳಿಸಿದ್ದಾರೆ.

‘ವೃದ್ಧೆಯ ಹೆಸರಿನಲ್ಲಿ ಜಿಪಿಎಸ್ ನಡೆದು ಹಣ ಮಂಜೂರಾಗಿರುವ ಮನೆಯು ಸದ್ಯ ಸಮೀಪದ ವೀರಪ್ಪ ಅವರಿಗೆ ಸೇರಿದ ಜಮೀನಿನಲ್ಲಿದ್ದು, ಸರಸ್ವತಿಯವರಿಗೆ ಮನೆ ಕಟ್ಟಿಕೊಳ್ಳಲು 1 ಗುಂಟೆ ಜಾಗವನ್ನು ಅವರ ಹೆಸರಿಗೆ ಬರೆದು, ಮನೆ ಕಟ್ಟಿಕೊಟ್ಟು ಸರ್ಕಾರದಿಂದ ಬರುವ ಹಣವನ್ನು ನಾವು ಪಡೆಯಲು ನಮ್ಮ ತಂದೆ ಪತ್ರ ಬರೆದು ಕೊಟ್ಟಿದ್ದರು. ಈಗ ನಾವು ಬಿಟ್ಟುಕೊಡುವುದಿಲ್ಲ’ ಎಂದು ವೀರಪ್ಪ ಅವರ ಮಗ ಶುಭಾಕರ ಹೇಳುತ್ತಿದ್ದಾರೆ.

‘ವೃದ್ಧೆಗೆ ಆಶ್ರಯ ಮನೆ ನಿರ್ಮಿಸಿಕೊಳ್ಳಲು ಬಂದಿದ್ದ ಹಣವನ್ನು ಪಡೆದುಕೊಂಡು, ಆಕೆಗೆ ಮನೆಯೂ ಇಲ್ಲ ಹಣವೂ ಇಲ್ಲದಂತೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮನೆ ನಿರ್ಮಾಣ ಮಾಡಿ ಕೊಡಬೇಕು’ ಎಂದು ಗ್ರಾಮಸ್ಥ, ರಮೇಶ, ಪುಟ್ಟರಾಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT