ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ಡ್ರೈವ್ ಹಂಚಿಕೆ: ಹಾಸನದ 18 ಕಡೆಗಳಲ್ಲಿ ಎಸ್‌ಐಟಿ ಶೋಧ

ಶರತ್ ಮನೆಯಲ್ಲಿ ಉಪಯುಕ್ತ ಮಾಹಿತಿ ಸಿಕ್ಕಿಲ್ಲ: ಪಂಚನಾಮೆ ವರದಿಯಲ್ಲಿ ಮಾಹಿತಿ
Published 15 ಮೇ 2024, 5:44 IST
Last Updated 15 ಮೇ 2024, 5:44 IST
ಅಕ್ಷರ ಗಾತ್ರ

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಹೊಂದಿದ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣ ಸಂಬಂಧ ಮಂಗಳವಾರದಿಂದ ಬುಧವಾರ ಬೆಳಗಿನ ಜಾವದವರೆಗೆ ಎಸ್‌ಐಟಿ ಅಧಿಕಾರಿಗಳು ನಗರದ ಹದಿನೆಂಟು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಎಸ್ಐಟಿ ಅಧಿಕಾರಿಗಳ ತಂಡ ಬುಧವಾರ ಬೆಳಗಿನ ಜಾವ 3.30 ರವರೆಗೂ ಶೋಧಕಾರ್ಯ ನಡೆಸಿದೆ. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಆಪ್ತರಾದ ಕ್ವಾಲಿಟಿ ಬಾರ್ ಶರತ್, ಪುನೀತ್, ಎಚ್.ಪಿ.ಕಿರಣ್, ಕಾಂಗ್ರೆಸ್ ಕಾರ್ಯಕರ್ತರಾದ ಪುಟ್ಟರಾಜು, ನವೀನ್‌ಗೌಡ, ಪ್ರಜ್ವಲ್‌ ರೇವಣ್ಣ ಮಾಜಿ ಕಾರುಚಾಲಕ ಕಾರ್ತಿಕ್, ಶಶಿ, ಚೇತನ್‌ಗೌಡ ನಿವಾಸದ ಮೇಲೂ ಎಸ್ಐಟಿ ತಂಡಗಳು ಪ್ರತ್ಯೇಕವಾಗಿ ದಾಳಿ ನಡೆಸಿವೆ.

ಕ್ವಾಲಿಟಿ ಬಾರ್ ಶರತ್ ಅವರ ಬೆಂಗಳೂರಿನ ಗೋಪಾಲನಗರದ ಶೋಭಾ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್ ಮೇಲೂ ದಾಳಿ ಮಾಡಿದ್ದ ಎಸ್‌ಐಟಿ ತಂಡ, ಶರತ್ ಅವರ ಐಫೋನ್ ವಶಕ್ಕೆ ಪಡೆದಿದ್ದು, ಅವರ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಯುಕ್ತ ದಾಖಲಾತಿ, ಎಲೆಕ್ಟ್ರಾನಿಕ್ ವಸ್ತುಗಳು ದೊರಕಿಲ್ಲ ಎಂದು ಎಸ್ಐಟಿ ಶೋಧನಾ ಪಂಚನಾಮೆಯಲ್ಲಿ ಹೇಳಿದೆ.

ವಿವಿಧೆಡೆಯ ದಾಳಿಗಳಿಂದ ಎಸ್ಐಟಿ ತಂಡಗಳು ಮಹತ್ವದ ಸಾಕ್ಷ್ಯ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು ಹೊರಟಿವೆ.

ಕಾಂಗ್ರೆಸ್ಸಿಗರ ಮನೆ ಮೇಲೂ ದಾಳಿ

ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಆರೋಪಿ ಕಾಂಗ್ರೆಸ್ ಕಾರ್ಯಕರ್ತ, ಸಚಿವ ಜಮೀರ್ ಅಹಮದ್ ಅವರ ಆಪ್ತ ನವೀನ್‌ಗೌಡ ನಿವಾಸದ ಮೇಲೂ ಎಸ್ಐಟಿ‌ ದಾಳಿ ನಡೆಸಿದೆ.

ಬೇಲೂರಿನ ತಾಲ್ಲೂಕಿನ ನೆಲ್ಕೆ ಗ್ರಾಮದಲ್ಲಿರುವ ನವೀನ್‌ಗೌಡ ನಿವಾಸದ ಮೇಲೆ ಎಸ್‌ಐಟಿ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಪೆನ್‌ಡ್ರೈವ್ ಹಂಚಿದ ಸಂಬಂಧ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ.

ಪೆನ್‌ಡ್ರೈವ್ ಹಂಚಿಕೆ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ನವೀನ್‌ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT