ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಖರೀದಿ ನೋಂದಣಿ: ನೂಕುನುಗ್ಗಲು

Published 4 ಮಾರ್ಚ್ 2024, 9:02 IST
Last Updated 4 ಮಾರ್ಚ್ 2024, 9:02 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕೊಬ್ಬರಿ ಖರೀದಿ ನೋಂದಣಿ ಸೋಮವಾರ ಆರಂಭವಾಗಿದ್ದು, ಬೆಳಿಗ್ಗೆಯಿಂದಲೇ ನೋಂದಣಿ ಕೇಂದ್ರದಲ್ಲಿ ನೂಕುನುಗ್ಗಲು ಉಂಟಾಗಿದೆ. ಬಹುತೇಕ ರೈತರು ಭಾನುವಾರ ಮಧ್ಯಾಹ್ನದಿಂದಲೇ ನೋಂದಣಿ ಕೇಂದ್ರಗಳ ಎದುರು ಠಿಕಾಣಿ ಹೂಡಿದ್ದು, ರಾತ್ರಿ ಅಲ್ಲಿಯೇ ಮಲಗಿದ್ದರು.

ಬೆಳಿಗ್ಗೆ ಎದ್ದು ಸರದಿಯಲ್ಲಿ ನಿಂತಿದ್ದಾರೆ. ಪ್ರತಿ ಕೇಂದ್ರದಲ್ಲಿ ನಿತ್ಯ 100–150 ಜನರ ನೋಂದಣಿ ಮಾಡಲು ಸಾಧ್ಯವಾಗುತ್ತಿದೆ. ಆದರೆ, 500–600 ಜನರು ಸರದಿಯಲ್ಲಿ ನಿಂತಿದ್ದು, ಎಲ್ಲರ ಹೆಸರನ್ನು ಒಂದೇ ದಿನ ನೋಂದಣಿ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಕೇಂದ್ರದ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೂ ರೈತರು ಮಾತ್ರ ತಮ್ಮ ಸರದಿಗಾಗಿ ಕಾದು ನಿಂತಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣ, ನುಗ್ಗೇಹಳ್ಳಿ, ಹಿರೀಸಾವೆ, ಅರಸೀಕೆರೆ, ಜಾವಗಲ್‌, ಗಂಡಸಿಯ ನೋಂದಣಿ ಕೇಂದ್ರಗಳಲ್ಲಿ ಹೆಚ್ಚಿನ ಜನರು ಸರದಿಯಲ್ಲಿ ನಿಂತಿದ್ದು, ಜನರನ್ನು ನಿಯಂತ್ರಿಸುವುದು ಹರಸಾಹಸವಾಗಿ ಪರಿಣಮಿಸಿದೆ.

ಫೆ.1 ರಿಂದ ಫೆ.5 ರವರೆಗೆ ಕೊಬ್ಬರಿ ಖರೀದಿಗೆ ರೈತರ ಹೆಸರು ನೋಂದಣಿ ಮಾಡಲಾಗಿತ್ತು. ಆದರೆ, ಅಕ್ರಮ ನಡೆದಿದ್ದರಿಂದ ಆ ಪ್ರಕ್ರಿಯೆಯನ್ನು ರದ್ದುಗೊಳಿಸಿರುವ ಸರ್ಕಾರ, ಹೊಸ ನೋಂದಣಿಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಕಳೆದ ಬಾರಿ ಬಹುತೇಕ ರೈತರು ನೋಂದಾಯಿಸಲು ಆಗಿರಲಿಲ್ಲ. ಈ ಬಾರಿಯೂ ಅಂಥದ್ದೇ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕದಲ್ಲಿ ಬಹುತೇಕ ರೈತರು ನೋಂದಣಿ ಕೇಂದ್ರಗಳ ಎದುರು ಸರದಿಯಲ್ಲಿ ನಿಂತಿದ್ದಾರೆ.

ರೈತರ ಹೆಸರು ನೋಂದಾಯಿಸಲು ಸರಿಯಾದ ವ್ಯವಸ್ಥೆ ಮಾಡಬೇಕು. ಒಂದೊಂದೇ ಕೇಂದ್ರಗಳನ್ನು ತೆರೆಯುವುದರಿಂದ ಈ ರೀತಿ ನೂಕುನುಗ್ಗಲು ಉಂಟಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ನೋಂದಣಿಗೆ ಅವಕಾಶ ನೀಡಿದರೆ, ಸಮರ್ಪಕವಾಗಿ ನೋಂದಣಿ ಆಗಲಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT