ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಕ್ಕೆ ಪ್ರಥಮ ಸ್ಥಾನ ಬರಲು ರೋಹಿಣಿ ಅಲ್ಲ, ಪತ್ನಿ ಭವಾನಿ ಕಾರಣ: ಸಚಿವ ರೇವಣ್ಣ

ರೋಹಿಣಿ ಸಿಂಧೂರಿ ಏನು ಕಡಿದು ಕಟ್ಟೆ ಹಾಕಿದ್ದಾರೆ: ರೇವಣ್ಣ ವ್ಯಂಗ್ಯ
Last Updated 1 ಮೇ 2019, 18:43 IST
ಅಕ್ಷರ ಗಾತ್ರ

ಹಾಸನ:‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಲು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಆಗಿರುವ ನನ್ನ ಪತ್ನಿ ಭವಾನಿ ಕೂಡ ಕಾರಣ’ ಎಂದು ಸಚಿವ ಎಚ್.ಡಿ.ರೇವಣ್ಣ ಇಲ್ಲಿ ಬುಧವಾರ ಹೇಳಿದರು.

‘ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಏನು ಕಡಿದು ಕಟ್ಟೆ ಹಾಕಿದ್ದಾರೆ. ಯಾವ ಶಾಲೆಗೆ ಹೋಗಿ ಪಾಠ ಮಾಡಿದ್ದಾರೆ. ಎಷ್ಟು ಸಭೆ ನಡೆಸಿದ್ದಾರೆ ಎಂಬುದನ್ನು ತೋರಿಸಲಿ. ಶಿಕ್ಷಕರಿಗೆ ಪರೀಕ್ಷೆ ನಡೆಸಲು ಹೋಗಿ ಅವರಿಂದಲೇ ವಿರೋಧ ಎದುರಿಸಿದರು. ಆದರೆ, ಭವಾನಿ ಹಲವು ಬಾರಿ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇದರ ಪರಿಣಾಮ ಅಗ್ರಸ್ಥಾನ ಬಂದಿದೆ. ಜತೆಗೆ ಶಿಕ್ಷಣಕ್ಕೆ ಒತ್ತು ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಪರಿಶ್ರಮವೂ ಇದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜಿಲ್ಲೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿರುವ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಜತೆಗೆ ಶಿಕ್ಷಣ ಇಲಾಖೆ ಪ್ರಮಾಣ ಪತ್ರ ನೀಡಲಿದೆ’ ಎಂದು ಸಚಿವರು ತಿಳಿಸಿದರು.

ಅಗ್ರಸ್ಥಾನ ಪಡೆಯಲು ರೋಹಿಣಿ ಸಿಂಧೂರಿ ಕೈಗೊಂಡ ಪರಿಣಾಮಕಾರಿ ಕಾರ್ಯಕ್ರಮಗಳೇ ಕಾರಣ ಎಂದು ಮಾಧ್ಯಮಗಳಲ್ಲಿ ಬುಧವಾರ ಪ್ರಕಟವಾದ ವರದಿಗಳಿಗೆ ಸಂಬಂಧಿಸಿ ಸಚಿವರು ಈ ರೀತಿ ಪ್ರಕ್ರಿಯಿಸಿದ್ದಾರೆ. ಆದರೆ, ನಿಜವಾದ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂಬುದರ ಕುರಿತು ಈಗ ಚರ್ಚೆ ಶುರುವಾಗಿದೆ.

2016–17ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯು 31ನೇ ಸ್ಥಾನದಲ್ಲಿತ್ತು. ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರ ಸಭೆ ನಡೆಸಿ, ಫಲಿತಾಂಶ ಸುಧಾರಣೆಗೆ ಹಲವು ಕಾರ್ಯಕ್ರಮ ರೂಪಿಸಿದ್ದರು. ಇದಕ್ಕೆ ಪೂರಕವಾಗಿ ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿಶೇಷ ತರಗತಿಗಳನ್ನು ಆಯೋಜಿಸಿತ್ತು. ಕಡಿಮೆ ಫಲಿತಾಂಶ ಬಂದಿದ್ದ ಶಾಲೆಗಳನ್ನು ಗುರುತಿಸಿ, ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಹದಿನೈದು ದಿನಗಳಿಗೊಮ್ಮೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಯಾವ ವಿಷಯದಲ್ಲಿ ವಿದ್ಯಾರ್ಥಿ ಹಿಂದೆ ಉಳಿದಿದ್ದಾನೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದರು. ಕಲಿಕಾ ಅಂತರ ನಿವಾರಿಸಲು ಶಿಕ್ಷಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತಿದ್ದರು.

***

ಬಿಜೆಪಿಗೆ ವೋಟು ಹಾಕಿದ್ದರಿಂದ ದಕ್ಷಿಣ ಕನ್ನಡ 5ನೇ ಸ್ಥಾನಕ್ಕೆ ಹೋಗಿದೆ. ಜಾತ್ಯತೀತ ಪಕ್ಷಗಳಿಗೆ ಮತ ಹಾಕಿದ್ದರೆ ಮೊದಲ ಸ್ಥಾನ ಬರುತಿತ್ತು.

–ಎಚ್‌.ಡಿ. ರೇವಣ್ಣ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT