ಶನಿವಾರ, ನವೆಂಬರ್ 28, 2020
18 °C
ರಾಮನಾಥಪುರ ತಂಬಾಕು ಮಾರುಕಟ್ಟೆ ಎದುರು ರೈತರ ಧರಣಿ

ಕೊಣನೂರು: ಚಪ್ಪಡಿ ಕಲ್ಲು ಹೊತ್ತು ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಣನೂರು: ತಂಬಾಕಿಗೆ ಉತ್ತಮ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಧರಣಿಯಲ್ಲಿ ಮಂಗಳವಾರ ರೈತರು ತಲೆ ಮೇಲೆ ಚಪ್ಪಡಿ ಕಲ್ಲುಗಳನ್ನು ಹೊತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಮನಾಥಪುರ ತಂಬಾಕು ಮಾರುಕಟ್ಟೆ ಎದುರು ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸೋಮವಾರದಿಂದ ಅಹೋರಾತ್ರಿ ಧರಣೆ ನಡೆಸುತ್ತಿವೆ.

‘ಆಂಧ್ರ ಪ್ರದೇಶದಲ್ಲಿ ಹೊಗೆಸೊಪ್ಪಿಗೆ ಉತ್ತಮ ದರ ನೀಡುತ್ತಿದ್ದು, ಆಂಧ್ರ ಮೂಲದ ವರ್ತಕರು ಕರ್ನಾಟಕದಲ್ಲಿ ಉತ್ಕೃಷ್ಟ ದರ್ಜೆಯ ತಂಬಾಕಿಗೆ ಉತ್ತಮ ಬೆಲೆ ನೀಡದೆ ಬೇಕಾಬಿಟ್ಟಿ ದರ ನೀಡಿ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ತಂಬಾಕು ಖರೀದಿಸಿದ ಕಂಪನಿಗಳು ವಿದೇಶಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಕೋಟಿಗಟ್ಟಲೆ ಲಾಭ ಮಾಡಿಕೊಳ್ಳುತ್ತಿವೆ’ ಎಂದು ಪ್ರತಿಭಟನನಿರತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ್, ಬಿ. ಮಾರಣ್ಣ ಮಾತನಾಡಿ, ‘ಇಪತ್ತು ದಿನದೊಳಗೆ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಈಡೇರಿಸಲಾಗುವುದು’ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.

ಅಧಿಕಾರಿಗಳ ಮಾತಿಗೆ ಒಪ್ಪದ ಪ್ರತಿಭಟನಕಾರರು, ‘‌ತಂಬಾಕು ಹಾಳಾದರೂ ಚಿಂತೆಯಿಲ್ಲ, ಬೇಕಾಬಿಟ್ಟಿ ಬೆಲೆಗೆ ಮಾರುವುದಿಲ್ಲ. ಒಂದೆರಡು ದಿನದಲ್ಲಿ ಉತ್ತಮ ದರ್ಜೆ ತಂಬಾಕಿನ ಜೊತೆ ಕೆಳದರ್ಜೆಯ ತಂಬಾಕು ಖರೀದಿಸಿ ಬೇಡಿಕೆ ಈಡೇರಿಸುವ ಕುರಿತು ಲಿಖಿತ ಹೇಳಿಕೆ ನೀಡಬೇಕು’ ಎಂದು ಪಟ್ಟುಹಿಡಿದರು.

ಹರಾಜು ಅಧೀಕ್ಷಕ ದಯಾನಂದ ಮಾತನಾಡಿ, ‘ಆಂಧ್ರ ಪ್ರದೇಶದ ರೀತಿಯಲ್ಲಿ ಸರ್ಕಾರ ಆವರ್ತ ನಿಧಿಯನ್ನು ಸ್ಥಾಪಿಸಿ ಕೆಳದರ್ಜೆಯ ಹೊಗೆಸೊಪ್ಪನ್ನು ಖರೀದಿಸಲು ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕು’ ಎಂದರು.

ಪೊಲೀಸರು ಮಧ್ಯಪ್ರವೇಶಿಸಿ, ತಂಬಾಕು ಮಂಡಳಿ ಅಧಿಕಾರಗಳ ಅಶ್ವಾಸನೆ ಪಡೆದು ರೈತರನ್ನು ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು