ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು| ಪುಷ್ಪಗಿರಿ: ಗಿರಿಜಾಕಲ್ಯಾಣ ನಾಳೆ

ಮಲ್ಲಿಕಾರ್ಜುನ ಸ್ವಾಮಿ, ಪಾರ್ವತಮ್ಮನವರಿಗೆ ವಿಶೇಷ ಪೂಜೆ
Last Updated 4 ಮಾರ್ಚ್ 2023, 4:51 IST
ಅಕ್ಷರ ಗಾತ್ರ

ಹಳೇಬೀಡು: ಇಲ್ಲಿನ ಪುಷ್ಪಗಿರಿಯು ಮಾ. 5 ರಂದು ಸಂಜೆ ಗಿರಿಜಾಕಲ್ಯಾಣೋತ್ಸವ ಹಾಗೂ 6 ರಂದು ನಡೆಯುವ ರಥೋತ್ಸವಕ್ಕೆ ಸಜ್ಜಾಗಿದ್ದು, ಸಿದ್ದತೆಗಳು ಭರದಿಂದ ನಡೆಯುತ್ತಿವೆ.

ಹಳೇಬೀಡು ಭಾಗದ ತಟ್ಟೆಹಳ್ಳಿ, ಹರುಬಿಹಳ್ಳಿ ಹಾಗೂ ಹಳೇಬೀಡಿನ ಶ್ಯಾನುಭೋಗ್ ವಂಶಸ್ಥರು, ಬೇಲೂರು ತಾಲ್ಲೂಕಿನ ಬ್ರಾಹ್ಮಣ ಸಮಾಜದ ಸಹಕಾರದೊಂದಿಗೆ ನಡೆಸುವ ಧಾರ್ಮಿಕ ಕಾರ್ಯಕ್ರಮಗಳಿಗೆ ಪುಷ್ಪಗಿರಿಯ ಭಕ್ತಮಂಡಳಿ ಸಾಥ್ ನೀಡಿದೆ.

ಗಿರಿಸ್ಥಳದ ಹತ್ತು ಹಳ್ಳಿಗಳಾದ ಸಿದ್ದಾಪುರ, ಭಂಡಾರಿಕಟ್ಟೆ, ಹುಲಿಕೆರೆ, ರಾಜಗೆರೆ, ತಟ್ಟೆಹಳ್ಳಿ, ಗಿರಕಲ್ಲಳ್ಳಿ, ಹರುಬಿಹಳ್ಳಿ, ವಡ್ರಹಳ್ಳಿ ಕೋಮಾರನಹಳ್ಳಿ, ಮಲ್ಲಾಪುರ ಗ್ರಾಮಸ್ಥರು ಸಂಭ್ರಮದಿಂದ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.

ಶೆಡ್‌ನಲ್ಲಿ ಸುರಕ್ಷಿತವಾಗಿದ್ದ ರಥ ಈಗ ಹೊರಬಂದಿದೆ. ರಥದ ಅಲಂಕಾರದ ಕೆಲಸ ನಡೆಯುತ್ತಿದೆ. ರಥದಲ್ಲಿ ಪಾರ್ವತಿ ಪರಮೇಶ್ವರರನ್ನು ಆರೋಹಣ ಮಾಡಲು ಅಗತ್ಯವಿರುವ ಮೆಟ್ಟಿಲು, ಕಳಸಾರೋಹಣಕ್ಕೆ ಬೇಕಾದ ದೊಡ್ಡ ಏಣಿಯನ್ನು ಪುಷ್ಪಗಿರಿ ಭಕ್ತವೃಂದ ಅಣಿ ಮಾಡಿಕೊಂಡಿದೆ.

ರಥೋತ್ಸವ ಆರಂಭವಾದ ದಿನದ ಕುರಿತು ಸೂಕ್ತವಾದ ಮಾಹಿತಿ ಇಲ್ಲ. ಶ್ಯಾನುಭೋಗ್ ವಂಶದವರು ಮೂರು ತಲೆಮಾರಿನಿಂದ ರಥೋತ್ಸವ ನಡೆಸಿಕೊಂಡು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಿದೆ. ಹೀಗಾಗಿ ರಥೋತ್ಸವಕ್ಕೆ ಶತಮಾನದ ಇತಿಹಾಸವಿದೆ.

ಮಾ. 5 ರಂದು ಸಂಜೆಯಿಂದ ಮರುದಿನ ಬೆಳಗಿನವರೆಗೆ ಗೆಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವ ನಡೆಯುತ್ತದೆ. ವಿಧಿ ವಿಧಾನದೊಂದಿಗೆ, ವರನ ಬರಮಾಡಿಕೊಳ್ಳುವ ಶಾಸ್ತ್ರದಿಂದ ಗಿರಿಜಾ ಕಲ್ಯಾಣ ಸಂಭ್ರದಿಂದ ಆರಂಭವಾಗುತ್ತದೆ. ವಧುವನ್ನು ಹಸೆ ಮಣೆಯಲ್ಲಿ ಕೂರಿಸಿ ಬಳೆ ತೊಡಿಸುವುದು, ಹೂವು ಮೂಡಿಸುವ ಶಾಸ್ತ್ರ ನಡೆಯುತ್ತದೆ. ವರಪೂಜೆ, ಕಾಶಿಯಾತ್ರೆ, ಭತ್ತ ಕುಟ್ಟುವುದು, ರಾಗಿ ಬೀಸುವ ಶಾಸ್ತ್ರ ಸೇರಿದಂತೆ ಪ್ರಾಚೀನ ಕಾಲದ ವಿವಾಹ ಸಂಪ್ರದಾಯ ನಡೆಸಲಾಗುತ್ತದೆ. ನಂತರ ಮಂಗಲ್ಯಧಾರಣೆ ನಡೆಯುತ್ತದೆ.

‘ಬೇಲೂರು, ಮತಿಘಟ್ಟ, ಹಳೇಬೀಡು, ಘಟ್ಟದಹಳ್ಳಿ, ಸವಾಸಿಹಳ್ಳಿ, ಮಲ್ಲಾಪುರ ಅಡಗೂರು ಮೊದಲಾದ ಗ್ರಾಮದ ಬ್ರಾಹ್ಮಣ ಸಮಾಜದವರು ಧಾರ್ಮಿಕ ಕಾರ್ಯಗಳಿಗೆ ಕೈಜೋಡಿಸುತ್ತಾರೆ’ ಎನ್ನುತ್ತಾರೆ ತಟ್ಟೆಹಳ್ಳಿ ಶ್ಯಾನುಭೋಗ್ ವಂಶಸ್ಥ ಸೂರ್ಯನಾರಾಯಣ.

ಮರು ದಿನ ನಡೆಯುವ ರಥೋತ್ಸವಕ್ಕೂ ಮೊದಲು ಗರ್ಭಗುಡಿಯ ಮೂಲದೇವರಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯುತ್ತದೆ. ಪಾರ್ವತಿ ಪರಮೇಶ್ವರರ ಪೂಜೆ ನೆರವೇರಿಸಿದ ನಂತರ ಮಂಗಳವಾದ್ಯದೊಂದಿಗೆ ಅಡ್ಡೆ ಉತ್ಸವ ನಡೆಯುತ್ತದೆ. ನಂತರ ರಥದ ಶಿಖರದ ಮೇಲೆ ಹುಲಿಕೆರೆಯ ವಿಶ್ವಕರ್ಮ ಸಮಾಜದವರು ಕಳಾಸರೋಹಣ ನೆರವೇರಿಸುತ್ತಾರೆ. ಕದಳಿ ಬಲಿ ಅರ್ಪಿಸಿದ ನಂತರ ರಥೋತ್ಸವ ನಡೆಯುತ್ತದೆ ಎಂದು ಮಲ್ಲಿಕಾರ್ಜುನ ಸ್ವಾಮಿ ದಾಸೋಹ ಸಮಿತಿ ಅಧ್ಯಕ್ಷ ಸೋಮಸುಂದರ್ ಹಾಗೂ ಕಾರ್ಯದರ್ಶಿ ಸಂಗಮ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT