ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳ | ತಮ್ಮೂರಿಗೆ ತೆರಳಿದ 270 ಕ್ವಾರಿ ಕಾರ್ಮಿಕರು

ಜಿಲ್ಲಾಡಳಿತದಿಂದ 10 ಬಸ್‌ಗಳಲ್ಲಿ ಉತ್ತರ ಕರ್ನಾಟಕದ ಕಾರ್ಮಿಕರ ವ್ಯವಸ್ಥೆ
Last Updated 7 ಮೇ 2020, 5:28 IST
ಅಕ್ಷರ ಗಾತ್ರ

ಶ್ರವಣಬೆಳಗೊಳ (ಹಾಸನ): ಹೋಬಳಿಯ ಬೆಟ್ಟದಹಳ್ಳಿ ಕ್ವಾರಿಯ ಕಲ್ಲು ಕೆಲಸಕ್ಕೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದಿದ್ದ 270 ಜನ ಕೂಲಿ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ 42 ದಿನ ಕಲ್ಲು ಕ್ವಾರಿಯಲ್ಲಿಯೇ ಸಂಕಷ್ಟದ ದಿನಗಳನ್ನು ದೂಡುತ್ತಿದ್ದರು. ಬುಧವಾರ ಜಿಲ್ಲಾಡಳಿಯ 10 ಬಸ್‌ ವ್ಯವಸ್ಥೆ ಮಾಡಿ ಎಲ್ಲರನ್ನೂ ಕಳುಹಿಸಿತು.

ಬೆಟ್ಟದಹಳ್ಳಿ ಮತ್ತು ನಾಗಮಂಗಲ ತಾಲ್ಲೂಕಿಗೆ ಹೊಂದಿಕೊಂಡಂತಿರುವ ವಿಶಾಲ ಕಲ್ಲು ಕ್ವಾರಿಯಲ್ಲಿ 4 ಕ್ರಷರ್‌ಗಳು ಕಾರ್ಯಾರಂಭ ಮಾಡುತ್ತಿದ್ದು, ಅವುಗಳಲ್ಲಿ ದುಡಿಯಲಿಕ್ಕೆ ಉತ್ತರ ಕರ್ನಾಟಕದ ಕಾರ್ಮಿಕರು ತಮ್ಮ ಕುಟುಂಬಸ್ಥರೊಂದಿಗೆ ಬೀಡು ಬಿಟ್ಟಿದ್ದರು. ಕೊರೊನಾ ನಿಮಿತ್ತ ಲಾಕ್‌ಡೌನ್‌ ಮಾಡಿದ್ದರಿಂದಾಗಿ ಎಲ್ಲಿಗೂ ಹೋಗದೇ ಕೆಲಸವೂ ಇಲ್ಲದೇ ಕಲ್ಲು ಕ್ವಾರಿಯಲ್ಲಿಯೇ ತಾತ್ಕಾಲಿಕವಾಗಿ ನಿರ್ಮಿಸಿದ್ದ ಗುಡಿಸಲು ಮತ್ತು ಗುಡಾರದ ಡೇರಿಗಳಲ್ಲಿ ಕಾರ್ಮಿಕರು ತಮ್ಮ ಮಡದಿ ಮಕ್ಕಳೊಂದಿಗೆ ಬಿಸಿಲು, ಮಳೆಯನ್ನದೇ ನೋವು ನುಂಗಿಕೊಂಡು ವಾಸಿಸುತ್ತಿದ್ದರು.

ಏಪ್ರಿಲ್‌ 14ರಂದು ‘ಪ್ರಜಾವಾಣಿ’ಯಲ್ಲಿ ‌‌‘ಬೆಟ್ಟದಹಳ್ಳಿ ಕ್ವಾರಿಯಲ್ಲಿ 469 ಜನ ಬಂದಿ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ತಾಲ್ಲೂಕು ಆಡಳಿತ ಕ್ರಷರ್‌ ಮಾಲೀಕರು ಕ್ಷೇತ್ರದ ಶಾಸಕ ಸಿ.ಎನ್‌.ಬಾಲಕೃಷ್ಣ ಅವರು ಸ್ಪಂದಿಸಿ ದಿನಸಿ ಪದಾರ್ಥಗಳನ್ನು ಒದಗಿಸಿ ಮಾನವೀಯತೆ ಮೆರೆದರು.

‘ಪತ್ರಿಕೆಯಲ್ಲಿ ಸುದ್ದಿ ಬಂದ ಮ್ಯಾಲ್ ಪುಣ್ಯವಂತ ಜನ ನಮ್ಮ ಕಡೆ ಬಂದು ಕಿರಾಣಿ ಸಾಮಾನ, ಕಾಯಿಪಲ್ಲೆ–ಹಣ್ಣು ಕೊಟ್ಟರು. ಅದಕ್ಕಿಂತ ಮೊದಲ ಜೀವನಾನ್ ಬ್ಯಾಸ್ರ್ ಅನಿಸಿತ್ತು’ ಎಂದು ಕೈಮುಗಿದವರು ಬೆಳಗಾವಿ ಜಿಲ್ಲೆಯ ಕಾರ್ಮಿಕ ಕುಟುಂಬದವರು.

ಬಸ್‌ ನೋಡಿ ಅರಳಿದ ಮುಖಗಳು: ಬುಧವಾರ ಸರ್ಕಾರಿ ಬಸ್‌ಗಳು ಬೆಟ್ಟದಹಳ್ಳಿ ಕ್ವಾರಿಯ ಸ್ಥಳಕ್ಕೆ ಬರುತ್ತಿದ್ದಂತೆ 42 ದಿನಗಳಿಂದ ಕಂಗೆಟ್ಟು ಬಾಡಿದ್ದ ಕಾರ್ಮಿಕರ ಮುಖಗಳು ನಗುನಗುತ್ತಾ ಬಸ್‌ಗಳನ್ನು ಸ್ವಾಗತಿಸುತ್ತಾ ತಮ್ಮ ಟ್ರಂಕ್‌, ಮರದ ಪೆಟ್ಟಿಗೆ, ಅಡುಗೆ ಪಾತ್ರೆ, ಬಟ್ಟೆ, ಚಾಪೆ ಚಾದರಗಳನ್ನು ಸುತ್ತಿಕೊಂಡು ತಲೆಯ ಮೇಲೆ ಹೊತ್ತುಕೊಂಡು ಬಸ್‌ಗೆ ಇಡುತ್ತಾ ‘ರಾಮದುರ್ಗಕ್ಕೆ ಹೊರಟೆವಪ್ಪಾ’ ಎಂದು ಸುನಂದಾ, ನಂದಾ ಚವ್ವಾಣ್‌ ಹೇಳಿದರು.

ಬೆಳಗಾವಿಗೆ 7 ಬಸ್‌ಗಳಲ್ಲಿ 187 ಜನರು, ಬಾಗಲಕೋಟೆ 1 ಬಸ್‌ನಲ್ಲಿ 29 ಜನರು, ಯಾದಗಿರಿ 1 ಬಸ್‌ನಲ್ಲಿ 23, ವಿಜಯಪುರಕ್ಕೆ 1 ಬಸ್‌ನಲ್ಲಿ 31 ಜನರನ್ನು ಕಳುಹಿಸಿ ಕೊಡಲಾಯಿತು.

ಎಲ್ಲಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಿ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದು ಪ್ರಯಾಣದ ಮೇಲ್ವಿಚಾರಣೆಯ ಉಸ್ತುವಾರಿ ವಹಿಸಿದ್ದ ಕಂದಾಯ ನಿರೀಕ್ಷಕ ಮೋಹನ್‌ಕುಮಾರ್‌ ಹೇಳಿದರು.

ಇನ್ನುಳಿದ ನೂರಾರು ಸಂಖ್ಯೆಯ ಜನರು ತಮ್ಮ ಸ್ವಂತ ಟ್ರಾಕ್ಟರ್‌, ದ್ವಿಚಕ್ರ ವಾಹನ, ಜೀಪ್‌ಗಳಲ್ಲಿ ತೆರಳಲು ಪೊಲೀಸ್‌ ಇಲಾಖೆಗೆ ಅಂತರ್‌ ಜಿಲ್ಲಾ ಪಾಸ್‌ಗಳನ್ನು ಕೊಡಿಸಲು ಕಂದಾಯ ನಿರೀಕ್ಷಕರಲ್ಲಿ ಮನವಿ ಮಾಡಿದರು.

ಸ್ವಗ್ರಾಮಕ್ಕೆ ತೆರಳಿರುವ ಕಾರ್ಮಿಕರನ್ನು ಅವರವರ ಸ್ಥಳಗಳಿಗೆ ಸುಕ್ಷಿತವಾಗಿ ತಲುಪಿಸುವುದಾಗಿ ಚನ್ನರಾಯಪಟ್ಟಣ ಡಿಪೊ ವಾಹನ ಚಾಲಕರಾದ ಹೊನ್ನೇಗೌಡ ಎಂ, ಹರೀಶ್‌ಕುಮಾರ್‌ ಜಿ.ಡಿ, ಉಮೇಶ್‌, ಗಂಗಾಧರ್‌ ಕೆ.ಎಸ್‌, ಇನ್ನಿತರರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT