ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಪಕ್ಷದವರ ಮೇಲೂ ದಾಳಿ ನಡೆಸಲಿ

ಚುನಾವಣೆ ಸಂದರ್ಭದಲ್ಲಿಯೇ ದಾಳಿ ಏಕೆ: ಶಾಸಕ ಎಚ್.ಡಿ.ರೇವಣ್ಣ ಪ್ರಶ್ನೆ
Last Updated 5 ಅಕ್ಟೋಬರ್ 2020, 13:56 IST
ಅಕ್ಷರ ಗಾತ್ರ

ಹಾಸನ: ಚುನಾವಣೆ ಸಂದರ್ಭದಲ್ಲಿಯೇ ಜೆಡಿಎಸ್‌, ಕಾಂಗ್ರೆಸ್‌ ಪಕ್ಷದವರ ಮನೆ, ಕಚೇರಿ ಮೇಲೆ ಸಿಬಿಐ, ಐಟಿ
ಮತ್ತು ಇಡಿ ದಾಳಿ ನಡೆಸುವುದು ಏಕೆ ಎಂದು ಪ್ರಶ್ನಿಸಿರುವ ಶಾಸಕ ಎಚ್.ಡಿ.ರೇವಣ್ಣ, ಎಲ್ಲಾ ಪಕ್ಷದವರ ಮೇಲೂ
ಸಿಬಿಐ ದಾಳಿ ನಡೆಸಲಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.

ಕಳೆದ ಲೋಕಸಭೆ ಚುನಾವಣೆ ವೇಳೆ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಹಾಸನ, ಮಂಡ್ಯ, ತುಮಕೂರು
ಕ್ಷೇತ್ರದ ಪಕ್ಷದ ಮುಖಂಡರ ಮನೆಗಳ ಮೇಲೂ ಐಟಿ ದಾಳಿ ನಡೆದಿತ್ತು. ಕಾಂಗ್ರೆಸ್-ಜೆಡಿಎಸ್ ಪಕ್ಷವನ್ನು
ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಲು ಹೊರಟಿವೆ ಎಂದು
ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ
ಅವರು, ಕಾನೂನು ಚೌಕಟ್ಟಿನಲ್ಲಿ ದಾಳಿ ನಡೆಸಿದ್ದರೆ ತಪ್ಪಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಇದನ್ನು
ಬಳಸಿಕೊಳ್ಳುವುದು ಸರಿಯಲ್ಲ ಎಂದರು.

ದಿನ ಬೆಳಗಾದರೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್‌, ಬಿಜೆಪಿ ನಾಯಕರು
ಟೀಕಿಸುತ್ತಲೇ ಇರುತ್ತಾರೆ. ಏಕೆಂದರೆ ಜೆಡಿಎಸ್ ಕಂಡರೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಭಯವಿದೆ
ಎಂದರು.‌

‘ನಮ್ಮನ್ನು ತಬ್ಬಿಕೊಳ್ಳುವಂತೆ ಯಾರನ್ನಾದರೂ ಕೇಳಲು ಹೋಗಿದ್ದಿವಾ? ಅವರೇ ನಮ್ಮ ತಬ್ಬಿಕೊಂಡು ಈಗ
ದೂರುತ್ತಿದ್ದಾರೆ. ಕುಮಾರಸ್ವಾಮಿ ಅವರೇ ಸಿ.ಎಂ ಆಗಬೇಕೆಂದವರು ಯಾರು? ಜೆಡಿಎಸ್‌ ಕಾಲು
ಹಿಡಿದುಕೊಂಡುವರು ಯಾರು? ಈಗ ಅವರೇ ಜೆಡಿಎಸ್‌ ಟೀಕಿಸುತ್ತಿದ್ದಾರೆ. ಜೆಡಿಎಸ್‌ ರಾಜಕೀಯ ಪಕ್ಷವೋ,
ಅಲ್ಲವೋ ಎಂಬುದನ್ನು ಜನರು ತೀರ್ಮಾನಿಸುತ್ತಾರೆ’ಎಂದು ಸಿದ್ದಾರಾಮಯ್ಯ ಆರೋಪಕ್ಕೆ ತಿರುಗೇಟು
ನೀಡಿದರು.

ಬಡವರನ್ನು ಕಂಡಾಗ ಕುಮಾರಸ್ವಾಮಿಗೆ ಕಣ್ಣೀರು ಬರುತ್ತದೆ. ದೇವೇಗೌಡರು ತಳಮಟ್ಟದಿಂದ ಬೆಳೆದವರು.ಬಡವರ ಕಷ್ಟ ಹಾಗೂ ದೇಶದ ಪರಿಸ್ಥಿತಿ ಕಂಡು ಅವರಿಗೆ ನೋವಾಗಿದೆ. ಬಿಜೆಪಿ-ಕಾಂಗ್ರೆಸ್ ಮುಖಂಡರಿಗೆ ಹೊಟ್ಟೆ
ತುಂಬಿ ಹೋಗಿದೆ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಪುನರುಚ್ಚರಿಸಿದ ರೇವಣ್ಣ, ಪಿಡಿಒ, ಡಿ ಗ್ರೂಪ್ ನೌಕರರು,
ಗುಮಾಸ್ತರನ್ನು ವರ್ಗಾವಣೆ ಮಾಡಲು ಹಣ ತೆಗೆದುಕೊಳ್ಳಲಾಗುತ್ತಿದೆ. ಕುಮಾರಸ್ವಾಮಿ ಸರ್ಕಾರದಲ್ಲಿ ಕೆಲವರು
ದುಡ್ಡು ಮಾಡಿಕೊಂಡು ಈಗ ಟೀಕೆ ಮಾಡುತ್ತಿದ್ದಾರೆ. ದ್ವೇಷದ ರಾಜಕಾರಣ ಹೆಚ್ಚು ದಿನ ಇರುವುದಿಲ್ಲ. ಯಾವುದೇ ಸರ್ಕಾರವಿದ್ದರೂ ಕೆಲಸ ಮಾಡಿಸಿಕೊಳ್ಳುವುದು ಗೊತ್ತು ಎಂದರು.

‘ಹಾಸನ ನಗರಕ್ಕೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಷ್ಟು ಅನುದಾನ ನೀಡಲಾಗಿದೆ ಎಂಬುದರ ಬಗ್ಗೆ ದಾಖಲೆ
ನೀಡಲಾಗುವುದು. ಹಾಸನ ಜಿಲ್ಲೆಗೆ ₹508 ಕೋಟಿ ಮೊತ್ತದ ಕುಡಿಯುವ ನೀರಿನ ಯೋಜನೆ
ಪ್ರಸ್ತಾವನೆಯನ್ನು ಕೇಂದ್ರದ ಎನ್‌ಡಿಎ ಸರ್ಕಾರ ವಜಾ ಮಾಡಿತು. ಅಭಿವೃದ್ಧಿ ಹಾಗೂ ಜೆಡಿಎಸ್‌ ಬಗ್ಗೆ
ಮಾತನಾಡಲು ಬಿಜೆಪಿಗೆ ಯಾವ ನೈತಿಕತೆ’ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಗೆ ಸಮಯ ಕೇಳಲಾಗಿದೆ. ಅವರು ಅವಕಾಶ ನೀಡಿದರೆ, ಹಾಸನ ಜಿಲ್ಲೆಯಲ್ಲಿ
ಏನು ನಡೆಯುತ್ತಿದೆ ಎಂಬುದನ್ನು ಎಲ್ಲಾ ಶಾಸಕರು ತಿಳಿಸುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT