ಹಾಸನ: ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಕಾಲೊನಿ ನಿವಾಸಿ ಕವಿತಾ ಮತ್ತು ಮಾಲತೇಶ್ ದಂಪತಿ, ತಮ್ಮ ಮನೆಯ ಚಾವಣಿಯಿಂದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಮಳೆ ನೀರನ್ನು ಸಂಗ್ರಹಿಸಿಟ್ಟು, ವರ್ಷಪೂರ್ತಿ ಅಡುಗೆ ಮತ್ತು ಕುಡಿಯಲು ಬಳಸುತ್ತಿದ್ದಾರೆ.
ಶಿವಮೊಗ್ಗದವರಾದ ಕೆ.ವಿ.ಮಾಲತೇಶ್, ನಗರದಲ್ಲಿ ಎಚ್‌ಪಿಸಿಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಕವಿತಾ ಭದ್ರಾವತಿಯವರು. ‘ಕವಿತಾ ಅವರು ಕೃಷಿ ಕುಟುಂಬದಲ್ಲಿ ಜನಿಸಿದ್ದು, ಮರ ಗಿಡಗಳೆಂದರೆ ಅಪಾರ ಕಾಳಜಿ. ಇದರಿಂದಾಗಿ ನಾನೂ ಕೂಡ ಪರಿಸರದ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ’ ಎಂದು ಮಾಲತೇಶ್ ಹೇಳುತ್ತಾರೆ.
‘ವಿಜಯ ಅಂಗಡಿ ನೇತೃತ್ವದ ‘ಪುಣ್ಯ ಭೂಮಿ’ಯಲ್ಲಿ ಪರಿಸರಪ್ರಿಯ ಕೃಷಿಕರ ಶಿಬಿರಗಳಲ್ಲಿ ಪಾಲ್ಗೊಂಡ ನಂತರ ಪರಿಸರದ ಬಗ್ಗೆ ಇನ್ನಷ್ಟು ಕಾಳಜಿ ಹೆಚ್ಚಾಯಿತು. ಕೆಲಸ ಕಾರ್ಯಗಳ ಬಗ್ಗೆ ಸ್ಪಷ್ಟತೆ ಬಂತು. ಅಂಗಡಿಯವರ ಮಾರ್ಗದರ್ಶನದಲ್ಲಿ ಮೂರು ವರ್ಷಗಳ ಹಿಂದೆ ಮಳೆ ನೀರು ಸಂಗ್ರಹ ಕೆಲಸ ಆರಂಭಿಸಿದೆವು’ ಎಂದು ಮಾಲತೇಶ್ ತಿಳಿಸಿದರು.
ಮಹಡಿಯಲ್ಲಿ ಒಂದು ಶೆಡ್ ನಿರ್ಮಿಸಿ, ಅದರೊಳಗೆ ಕಬ್ಬಿಣದ ಸ್ಟ್ಯಾಂಡ್ ಮಾಡಿ, ಎರಡು ಸಾವಿರ ಲೀಟರ್ ಸಾಮರ್ಥ್ಯದ ಎರಡು ಸಿಂಟೆಕ್ಸ್ ಟ್ಯಾಂಕ್‍ಗಳನ್ನು ಇಡಲಾಗಿದೆ. ಶೆಡ್‍ನ ಮೇಲೆ ಬಿದ್ದ ಮಳೆ ನೀರನ್ನು ಪೈಪ್‌ಗಳ ಮೂಲಕ ಹರಿಸಿ, ಫಿಲ್ಟರ್‌ಗಳಲ್ಲಿ ಶುದ್ಧೀಕರಿಸಿದ ನಂತರ ಟ್ಯಾಂಕ್‍ಗಳಲ್ಲಿ ಸಂಗ್ರಹಿಸಿ ಭದ್ರವಾಗಿ ಮುಚ್ಚಳ ಹಾಕಿ ಇಡಲಾಗುತ್ತದೆ.
‘ಎರಡು ಟ್ಯಾಂಕ್‍ಗಳು, ಪೈಪ್, ಸ್ಟ್ಯಾಂಡ್, ಫಿಲ್ಟರ್ ಸೇರಿ ₹ 35 ಸಾವಿರ ಖರ್ಚಾಗಿದೆ. ಶೆಡ್‍ನ ಖರ್ಚು ಇದರಲ್ಲಿ ಸೇರಿಲ್ಲ. ಸಂಗ್ರಹಿಸಿದ ನೀರಿನ ಟ್ಯಾಂಕ್ ಮೇಲೆ ನೇರವಾಗಿ ಬಿಸಿಲು ಬೀಳಬಾರದು. ಬಿಸಿಲು ಬಿದ್ದರೆ ಹುಳು ಬರಬಹುದು ಅಥವಾ ಪಾಚಿ ಬೆಳೆಯಬಹುದು’ ಎಂದು ಅವರು ವಿವರಿಸಿದರು.
‘ವರ್ಷದ ಆರಂಭದ ತಿಂಗಳಲ್ಲಿ ಬಿದ್ದ ಮಳೆ ನೀರಿನಲ್ಲಿ ಚಾವಣಿ ಶುದ್ಧವಾಗುತ್ತದೆ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ನೀರನ್ನು ಸಂಗ್ರಹಿಸುತ್ತೇವೆ. ಮಳೆ ನೀರು ಬಹಳ ಶುದ್ಧವಾಗಿರುತ್ತದೆ. ಖನಿಜಾಂಶಗಳಿಂದಲೂ ಕೂಡಿರುತ್ತದೆ. ಕಂಪನಿಗಳ ಫಿಲ್ಟರ್, ನೀರು ಶುದ್ಧೀಕರಣ ಘಟಕಗಳಿಂದ ಖನಿಜಾಂಶಗಳು ನಷ್ಟವಾಗುತ್ತದೆ. ಈ ಫಿಲ್ಟರ್‌ಗಳು ಕೆಲಸ ಮಾಡಲು ವಿದ್ಯುತ್ ಕೂಡ ಬೇಕು. ಮುಖ್ಯವಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತದೆ’ ಎನ್ನುತ್ತಾರೆ ಮಾಲತೇಶ್.
‘ಮಳೆ ನೀರನ್ನು ಸಂಗ್ರಹಿಸಿ ಕುಡಿಯುವ ನೀರಿಗೆ ಬಳಸುವ ಮಾದರಿ ಹಳ್ಳಿಗಳನ್ನು ಸರ್ಕಾರ ರೂಪಿಸಿದರೆ, ಹೆಚ್ಚು ಜನರು ಮುಂದೆ ಬರುತ್ತಾರೆ. ಈ ಕೆಲಸ ಮಾಡಿಕೊಟ್ಟವರು ಚನ್ನರಾಯಪಟ್ಟಣ ತಾಲ್ಲೂಕಿನ ರೈತ ಅರಿಂಜಯ’ ಎಂದು ಹೇಳಲು ಕವಿತಾ-ಮಾಲತೇಶ್ ದಂಪತಿ ಮರೆಯಲಿಲ್ಲ.
ಜಿಲ್ಲೆಯ ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗುವುದು.ಬಿ.ಆರ್. ಪೂರ್ಣಿಮಾ ಜಿ.ಪಂ. ಸಿಇಒ
ವ್ಯವಸ್ಥೆ ಪರಿಶೀಲಿಸಿದ ಜಿ.ಪಂ. ಸಿಇಒ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಮಳೆ ನೀರು ಸಂಗ್ರಹಿಸಿ ವರ್ಷ ಪೂರ್ತಿ ಕುಡಿಯುವ ನೀರು ಅಡಿಗೆಗೆ ಬಳಸುತ್ತಿರುವ ಮಾಲತೆಶ್ ಹಾಗೂ ಕವಿತಾ ದಂಪತಿ ಮನೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ವ್ಯವಸ್ಥೆಗೆ ಮಾಡಿರುವ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಪಡೆದರು. ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತದಲ್ಲಿ ನಿರ್ಮಿಸಿಕೊಂಡಿರುವ ಸಭಾಂಗಣಗಳ ಚಾವಣಿಯ ಮೇಲೆ ಬೀಳುವ ಮಳೆ ನೀರನ್ನು ಸುಲಭವಾಗಿ ಸಂಗ್ರಹಿಸಬಹುದಾಗಿದೆ ಎಂದು ಮಾಲತೇಶ್ ತಿಳಿಸಿದರು. ಪ್ರತಿ ತಾಲ್ಲೂಕಿನಿಂದ ಒಂದಿಬ್ಬರು ಉತ್ಸಾಹಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಕರೆಸಿ ಮಾಲತೇಶ್ ಹಾಗೂ ಕವಿತಾ ದಂಪತಿಗಳಿಂದ ಅಳವಡಿಸಿಕೊಂಡಿರುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲಾಗುವುದು. ಇದೇ ರೀತಿ ಕುಡಿಯುವ ನೀರಿಗೆ ಬಳಸುವ ವ್ಯವಸ್ಥೆ ಮಾಡಿಕೊಂಡು ನಂತರ ಉಳಿದ ಪಂಚಾಯಿತಿಗಳಿಗೂ ಸೂಚನೆ ನೀಡಲಾಗುವುದು ಎಂದು ಬಿ.ಆರ್. ಪೂರ್ಣಿಮಾ ತಿಳಿಸಿದರು.
ತಾರಸಿಯಲ್ಲಿ ತೋಟ ಮನೆಯ ತಾರಸಿಯಲ್ಲಿ ಮಾಲತೇಶ್–ಕವಿತಾ ದಂಪತಿ ಸೇರಿ ಸುವರ್ಣ ಗೆಡ್ಡೆ ಡ್ರಾಗನ್ ಫ್ರೂಟ್ ಅಲೋವೆರಾ ನಿಂಬೆಹಣ್ಣು ಬಸಳೆ ಚಕ್ರಮುನಿ ದಾಸವಾಳ ಕರಿಬೇವು ಸೌತೆ ಬಿರಿಯಾನಿ ಎಲೆ ಮಿಂಟ್ ಪುದಿನ ಫ್ಯಾಷನ್ ಫ್ರೂಟ್ ಗಣಿಕೆ ಸೊಪ್ಪು ಗೆಣಸು ಮಂಗರಬಳ್ಳಿ ಒಂದೆಲಗ ಮಲ್ಲಿಗೆ ಕಾಕಡ ಸೇವಂತಿಗೆ ತುಳಸಿ ಗುಲಾಬಿ ಸ್ನೇಕ್ ಪ್ಲಾಂಟ್ ನಿತ್ಯ ಪುಷ್ಪ ನಿತ್ಯ ಮಲ್ಲಿಗೆ ಬಿಲ್ವ ಪತ್ರೆ ಶಂಕರ ಪುಷ್ಪ ಮ್ಯಾಚ್‍ಸ್ಟಿಕ್ ಬ್ರೊಮೈಡ್ ಮೆಣಸಿನಕಾಯಿ ವೀಳ್ಯೆ ದೆಲೆ ಕಾಮಕಸ್ತೂರಿ ನಿಂಬೆ ಕಣಗಲ ಹೂ ಮನಿ ಪ್ಲಾಂಟ್ ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದಾರೆ. ಮನೆಯ ಆವರಣದಲ್ಲೇ ಮಾವು ನೇರಳೆ ದಾಳಿಂಬೆ ಪಪ್ಪಾಯಿ ಹಿಪ್ಪಲಿ ಮರಗಳೂ ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.