ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಲು ಸಂಸದ ಪ್ರಜ್ವಲ್ ಸಲಹೆ

ಒಕ್ಕಲಿಗರ ಸಂಘದಿಂದ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Last Updated 28 ಜುಲೈ 2019, 10:44 IST
ಅಕ್ಷರ ಗಾತ್ರ

ಹಾಸನ: ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾರತದ ಸಂವಿಧಾನ ಓದಿ ತಿಳಿದುಕೊಳ್ಳುವ ಮೂಲಕ ಉತ್ತಮ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ದೇಶದ ರಾಜಕೀಯ ಮತ್ತು ರಾಜಕಾರಣಿಗಳು ಸುಧಾರಣೆಗೊಳ್ಳಲು ಸಾಧ್ಯ ಎಂದು ಸಂಸದ ಪ್ರಜ್ವಲ್ ರೇವಣ್ಣ ಅಭಿಪ್ರಾಯಪಟ್ಟರು.

ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿದ್ಯಾರ್ಥಿ ಜೀವನದಲ್ಲಿಯೇ ಸಂವಿಧಾನ ಓದಿ ಮನನ ಮಾಡಿಕೊಂಡರೆ ಈ ದೇಶದ ಉತ್ತಮ ಮತ್ತು ಜವಾಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ. ಯಾವುದೇ ವೃತ್ತಿ ಆರಿಸಿಕೊಂಡರೂ ಸಂವಿಧಾನದ ಅರಿವು ಇದ್ದರೆ, ವೃತ್ತಿಯನ್ನು ಮತ್ತಷ್ಟು ಆತ್ಮವಿಶ್ವಾಸದಿಂದ ಅರ್ಥಪೂರ್ಣವಾಗಿ ಮಾಡಬಹುದು. ರಾಜಕಾರಣವನ್ನು ಟೀಕಿಸಿಕೊಂಡು ದೂರ ಉಳಿದರೆ ದೇಶ ಮತ್ತಷ್ಟು ಅಧಃಪತನದತ್ತ ಸಾಗುತ್ತದೆ. ಹಾಗಾಗಿ ರಾಜಕಾರಣವನ್ನು ಸರಿದಾರಿಗೆ ತರುವ ಹೊಣೆಗಾರಿಕೆಯೂ ಯುವಜನರ ಮೇಲಿದೆ ಎಂಬುದನ್ನು ಮರೆಯಬಾರದು’ ಎಂದು ಎಚ್ಚರಿಸಿದರು.

‘ತಪ್ಪನ್ನು ತಿದ್ದಿಕೊಂಡು ನಡೆಯುವುದೇ ಸಾಧನೆಯ ಹಾದಿ. ವೈದ್ಯ, ಎಂಜಿನಿಯರ್ ಆಗುವುದಷ್ಟೇ ಬದುಕಲ್ಲ. ಪ್ರಪಂಚ ವಿಶಾಲವಾಗಿದೆ, ಬದುಕು ಅದಕ್ಕಿಂತ ದೊಡ್ಡದಿದೆ. ಹಾಗಾಗಿ ಎಂದಿಗೂ ಆತ್ಮಹತ್ಯೆಯಂತಹ ಹೀನ ಕೃತ್ಯದ ಕುರಿತು ಆಲೋಚನೆ ಮಾಡಬಾರದು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ‘ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿ ಈ ರಾಜ್ಯ ಮತ್ತು ದೇಶಕ್ಕೆ ದೊಡ್ಡ ಕೊಡುಗೆ ನೀಡಿರುವ ಸಾಧಕರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಅದು ಜಾತಿಯ ಬಗ್ಗೆ ಗರ್ವ ಪಡಲು ಅಲ್ಲ, ಬದಲಿಗೆ ಅವರಿಂದ ಸ್ಫೂರ್ತಿ ಪಡೆದು ಕುವೆಂಪು ಅವರಂತೆ ವಿಶ್ವಮಾನವ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಹುಟ್ಟಿದ ಸಮುದಾಯವನ್ನು ಪ್ರೀತಿಸುತ್ತಲೇ ಇಡೀ ಸಮಾಜದ ಆಸ್ತಿಯಾಗಿ ಬೆಳೆಯಬೇಕು’ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಪಡೆದ ಹಾಸನದ ವಿಜಯ ಶಾಲೆಯ ವಿದ್ಯಾರ್ಥಿನಿ ಪ್ರಗತಿ ಎಂ. ಗೌಡ, ವಿಜಯ ಶಾಲೆಯ ಆಡಳಿತಾಧಿಕಾರಿ ತಾರಾ ಮತ್ತು ಸುಬ್ಬುಸ್ವಾಮಿ ದಂಪತಿ, ಒಕ್ಕಲಿಗ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿ ಮಡಿಕೇರಿಯಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಬಿ.ಕೆ. ಮನು, ಒಕ್ಕಲಿಗರ ಸಂಘದ ಅಭಿವೃದ್ಧಿಗೆ ಮತ್ತು ಹಾಸ್ಟೆಲ್ ಮಕ್ಕಳ ಊಟದ ವ್ಯವಸ್ಥೆಗೆ ಹಣ ಸಂಗ್ರಹಿಸಲು ಅಧ್ಯಕ್ಷರೊಂದಿಗೆ ಸಹಕರಿಸುತ್ತಿರುವ ಕೆ.ಆರ್. ಪುಟ್ಟಸ್ವಾಮಿ, ಅಂತರರಾಷ್ಟ್ರೀಯ ನೆಟ್‍ಬಾಲ್ ಪಟು ಯೋಗೀಶ್ ಗೌಡ, ಹಾಸನ ಉಪ ವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್ ಹಾಗೂ ‘ಬೆಳಕಿನೆಡೆಗೆ’ ಕೃತಿಯನ್ನು ಪರಿಶೀಲಿಸಿ ಪುನರ್‌ ಮುದ್ರಣ ಮಾಡಲು ಸಹಕರಿಸಿದ ಸಂಪಾದಕ ಮಂಡಳಿ ಸದಸ್ಯರಾದ ಡಾ. ಹಂಪನಹಳ್ಳಿ ತಿಮ್ಮೇಗೌಡ, ಅಪ್ಪಾಜಿಗೌಡ, ಚೌಡುವಳ್ಳಿ ಪುಟ್ಟರಾಜು ಮತ್ತು ಎನ್.ಎಲ್. ಚನ್ನೇಗೌಡ ಅವರನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಿ ಪುರಸ್ಕರಿಸಲಾಯಿತು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಶಾಖಾ ಮಠದ ಶಿವಪುತ್ರ ಸ್ವಾಮೀಜಿ, ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಅಪ್ಪೇಗೌಡ, ಮುಖಂಡರಾದ ಪಟೇಲ್ ಶಿವರಾಂ, ಎಚ್.ಪಿ. ಮೋಹನ್, ಸ್ವಾಮಿಗೌಡ, ಬಿ.ಈ. ಜಗದೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT