ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದಲ್ಲಿ ನಡೆದ ಘಟನೆ ಹೇಡಿಗಳ ಕೃತ್ಯ: ಆರ್.ಅಶೋಕ್‌

ಹೊಸದಾಗಿ ಪಠ್ಯಪುಸ್ತಕ ಮುದ್ರಣ ಮಾಡುವುದಿಲ್ಲ
Last Updated 30 ಜೂನ್ 2022, 1:40 IST
ಅಕ್ಷರ ಗಾತ್ರ

ಹಾಸನ: ‘ರಾಜಸ್ಥಾನದಲ್ಲಿ ನಡೆದ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ಹೇಡಿಗಳ ಕೃತ್ಯ. ಕೋಮುವಾದದ ಪ್ರತಿಫಲ. ಐಎಸ್‌ಐ ಭಯೋತ್ಪಾದನೆಯ ಮತ್ತೊಂದು ಮುಖ’ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

ಚಿಕ್ಕಮಗಳೂರಿಗೆ ತೆರಳುವ ಮಾರ್ಗಮಧ್ಯೆ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಮುಸ್ಲಿಂ ಭಯೋತ್ಪಾದನೆ ಚಟುವಟಿಕೆಗೆ ಐಎಸ್ಐ ಮೂಲ ಇದೆ. ಕೊಲೆ ಮಾಡಿದ ಆರೋಪಿಗಳಿಗೆ ತರಬೇತಿ ನೀಡಲಾಗಿದೆ. ಇಂತಹ ಸಂಘಟನೆಗಳು ಕರ್ನಾಟಕದ ಹಲವು ರಾಜ್ಯದಲ್ಲಿ ಇರಬಹುದು. ಈಗಾಗಲೇ ಸರ್ಕಾರ ಆರೋಪಗಳನ್ನು ಬಂಧಿಸಿ. ಈ ತರಹದ ಪ್ರಕರಣದ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದರು.

‘ಕೊಲೆಗಡುಕರ ಮೇಲೆ ರಾಜಸ್ಥಾನ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲ ಬೆಳವಣಿಗೆಯನ್ನು ಇಡೀ ದೇಶದ ಜನ ಗಮನಿಸುತ್ತಿದ್ದಾರೆ’ ಎಂದರು.

‘ಕೆಲವು ಸಂಘಟನೆಯಗಳು, ಬಿಜೆಪಿ ವಿರುದ್ಧ ನಿರಂತರವಾಗಿ ಟೀಕೆ ಮಾಡುತ್ತಿವೆ. ಆದರೆ, ಇಂದು ವಿರೋಧ ಪಕ್ಷಗಳು ಬಾಯಿ ಮುಚ್ಚಿ ಕುಳಿತಿವೆ. ವಿರೋಧ ಪಕ್ಷಗಳು ವೋಟ್‌ ಬ್ಯಾಂಕ್ ರಾಜಕಾರಣ ಮಾಡುತ್ತಿವೆ’ ಎಂದು ಟೀಕಿಸಿದರು.

‘ಪಠ್ಯ ಪರಿಷ್ಕರಣೆ ವಿಚಾರದಲ್ಲಿ ನಿತ್ಯ ಪುಟಗಟ್ಟಲೆ ಸರಣಿ ರೀತಿ ಟ್ವೀಟ್‌ ಹಾಕುತ್ತಿದ್ದ ಸಿದ್ದರಾಮಯ್ಯ ರಾಜಸ್ಥಾನದ ಅಮಾಯಕ ವ್ಯಕ್ತಿ ಕೊಲೆಗೆ ಕೇವಲ ಒಂದೇ ಒಂದು ಟ್ವಿಟ್ ಮಾಡುವ ಮೂಲಕ ಉದಾಸೀನ ಮನೋಭಾವ ತೋರಿದ್ದಾರೆ’ ಎಂದು ದೂರಿದರು.

‘ಹೊಸದಾಗಿ ಪಠ್ಯಪುಸ್ತಕ ಮುದ್ರಣ ಮಾಡುವುದಿಲ್ಲ. ಮತ್ತೆ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಿಲ್ಲ. ಪಠ್ಯದಲ್ಲಿನ ಕೆಲ ವಿಚಾರವನ್ನು ಮಾತ್ರ ಬದಲಾವಣೆ ಮಾಡುತ್ತೇವೆ’ ಎಂದು ಹೇಳಿದರು.

ಶಾಸಕ ಪ್ರೀತಂ ಜೆ.ಗೌಡ, ಬಿಜೆಪಿ ಮುಖಂಡರು ಇದ್ದರು.

‘ಮಹಾರಾಷ್ಟ್ರ: 4 ದಿನದಲ್ಲಿ ಬಿಜೆಪಿ ಸರ್ಕಾರ’

‘ಮಹಾರಾಷ್ಟ್ರ ಸರ್ಕಾರ ಕೆಡವಲು ಬಿಜೆಪಿ ಪ್ರಯತ್ನ ಮಾಡಿಲ್ಲ, ಆದರೆ ಶಿವಸೇನೆ ಶಾಸಕರ ಅಸಮಾಧಾನದಿಂದ ಸರ್ಕಾರ ಬೆಂಬಲ ಕಳೆದುಕೊಂಡಿದೆ. ಇನ್ನೂ ಮೂರು ನಾಲ್ಕು ದಿನದಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ’ ಎಂದು ಆರ್‌. ಅಶೋಕ್‌ ಹೇಳಿದರು.

‘ಶಿವಸೇನೆ, ಬಿಜೆಪಿ‌ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಗೆದ್ದಿತ್ತು. ನಂತರ ಕಾಂಗ್ರೆಸ್ ಜೊತೆ ಸೇರಿ ಕೋಮುವಾದಿ ಸರ್ಕಾರ ರಚನೆ ಮಾಡಿರುವುದನ್ನು ಅಲ್ಲಿನ ಜನ ಮತ್ತು ಶಿವಸೇನೆಯ ಅಸಮಾಧಾನಿತ ಶಾಸಕರು ಒಪ್ಪುವುದಿಲ್ಲ. ‌ಅವರು ಶಿವಸೇನೆಯ ಬಾಳಾಸಾಹೇಬ ಠಾಕ್ರೆ ಅವರ ಹೆಸರಿನಲ್ಲಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ನಂತರ ಪ್ರತ್ಯೇಕ ಶಿವಸೇನೆ ಅಸ್ತಿತ್ವಕ್ಕೆ ಬರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT