ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಟಿಕೆಟ್‌ಗಾಗಿ ರಾಮಸ್ವಾಮಿ ಪ್ರತಿಭಟನೆ: ಎಚ್‌.ಡಿ. ರೇವಣ್ಣ

Published 11 ಜನವರಿ 2024, 14:29 IST
Last Updated 11 ಜನವರಿ 2024, 14:29 IST
ಅಕ್ಷರ ಗಾತ್ರ

ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯಲು ಯತ್ನಿಸುತ್ತಿರುವ ಎ.ಟಿ. ರಾಮಸ್ವಾಮಿ, ಕಾಂಗ್ರೆಸ್ ನಾಯಕರನ್ನು ಮೆಚ್ಚಿಸಲು ಪ್ರತಿಭಟನೆ ಹಾಗೂ ನಮ್ಮ ಕುಟುಂಬದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಎಚ್‌.ಡಿ. ರೇವಣ್ಣ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಆರೋಪ ಮಾಡಬೇಕಾದರೆ ಸತ್ಯಾಸತ್ಯತೆಯನ್ನು ತಿಳಿಯಬೇಕು. ಪರಾಮರ್ಶಿಸಿ ಈ ರೀತಿ ಹೋರಾಟಗಳಿಗೆ ಇಳಿಯಬೇಕು. ಆದರೆ ರಾಮಸ್ವಾಮಿ ಅವರು ಲೋಕಸಭಾ ಚುನಾವಣೆಯ ಲಾಭ ಪಡೆಯಲು ಪೂರ್ವಗ್ರಹ ಪೀಡಿತರಾಗಿ ನಮ್ಮ ಕುಟುಂಬದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದರು.

ವರ್ಷದ ಹಿಂದೆ ನಡೆದಿರುವ ಘಟನೆ ಹಿಡಿದುಕೊಂಡು ಇದೀಗ ಬಂದಿದ್ದಾರೆ. ಅವರಿಗೆ ಭಗವಂತ ಒಳ್ಳೆಯದು ಮಾಡಲಿ. ನಮ್ಮ ಕುಟುಂಬ ಬೇನಾಮಿ ಆಸ್ತಿ ಹೊಂದಿದ್ದರೆ, ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದರು.

ಮಾಧ್ಯಮದಲ್ಲಿ ಬಂದಿದ್ದನ್ನು ನೋಡಿ ಅವರನ್ನು ಕರೆಯಿಸಿಕೊಂಡೆ ಎನ್ನುತ್ತಾರೆ. ನಾನು ಜಿಲ್ಲೆಯಲ್ಲಿ ಯಾರ ಮೇಲೆ ದೌರ್ಜನ್ಯ ಮಾಡಿದ್ದೇನೆ? ಯಾವ ಆಸ್ತಿ ಹೊಡೆಸಿದ್ದೇನೆ ಎಂಬುದನ್ನು ತಿಳಿಸಲಿ ಎಂದ ಅವರು, ರಾಮಸ್ವಾಮಿ ಅವರು ಹೇಗೆ ಮೆರವಣಿಗೆ ಮಾಡಿಸಿದರು? ಎಲ್ಲಿಂದ ಜನರನ್ನು ಕರೆತಂದರು ಎಂಬುದು ಗೊತ್ತಿದೆ. ಇಂಥದ್ದೆಲ್ಲ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಚುನಾವಣೆ ಮೂರು ತಿಂಗಳಿರುವಾಗ ಪದೇ ಪದೇ ಇಂತಹ ಅಪಪ್ರಚಾರ ಮಾಡಿಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಾನು ರಾಜ್ಯದ ಯಾವ ಮೂಲೆಯಲ್ಲೂ ಒಂದು ನಿವೇಶನ ಪಡೆದಿಲ್ಲ. ಯಾವುದೇ ಆರೋಪದ ಬಗ್ಗೆಯೂ ಸರ್ಕಾರ ತನಿಖೆ ಮಾಡಿಸಲಿ. ಪ್ರತಿಭಟನೆ ಮಾಡಲು ಬಂದವರಿಗೆ ಬಸ್ ಮಾಡಿಕೊಟ್ಟವರು ಯಾರು? ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಒಳ‌ ಒಪ್ಪಂದ ಆಗಿದೆಯೇ ಅನ್ನುವುದನ್ನು ತಿಳಿಸಲಿ ಎಂದರು. ಜಗನ್ನಾಥ್, ಲೋಕೇಶ್, ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT