ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ ಕುಸಿತ: ಸಂಕಷ್ಟದಲ್ಲಿ ಹಾಸನದ ಮೆಕ್ಕೆಜೋಳ ಬೆಳೆಗಾರರು

‌ಉತ್ತಮ ಫಸಲು: ಆರು ಲಕ್ಷ ಮೆಟ್ರಿಕ್‌ ಮೆಕ್ಕೆಜೋಳ ಉತ್ಪಾದನೆ ನಿರೀಕ್ಷೆ
Last Updated 19 ಅಕ್ಟೋಬರ್ 2020, 19:39 IST
ಅಕ್ಷರ ಗಾತ್ರ

ಹಾಸನ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಒಂದೆಡೆ ಮೆಕ್ಕೆಜೋಳ ನೆಲಕಚ್ಚಿದ್ದರೆ, ಮತ್ತೊಂದೆಡೆ ಕಟಾವು
ಮಾಡಿದ್ದ ಫಸಲು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಅಕಾಲಿಕ ಮಳೆ ಹಾಗೂ ಶೀತದಿಂದಾಗಿ ಕೊಯ್ಲು ಮಾಡಿರುವ ಮೆಕ್ಕೆಜೋಳ ಮೊಳಕೆಯೊಡೆಯಲು ಆರಂಭಿಸಿದೆ. ಇದೇ ರೀತಿ ಮಳೆ ಸುರಿಯತೊಡಗಿದರೆ ಜೋಳವನ್ನು ಕಸವಾಗಿ ಎಸೆಯಬೇಕಾಗುತ್ತದೆ. ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ತಗುಲಿದ್ದರಿಂದ ರೈತರು ಮುಸುಕಿನ ಜೋಳದತ್ತ ಮುಖ ಮಾಡಿದರು. ಆದರೆ ಈ ಬೆಳೆಯೂ ಬೆಳೆಗಾರರ ಕೈ ಹಿಡಿಯಲಿಲ್ಲ.

ಜಿಲ್ಲೆಯಲ್ಲಿ ಮುಂಗಾರು ಮಳೆ ಹದವಾಗಿ ಸುರಿದ ಪರಿಣಾಮ ಉತ್ತಮ ಫಸಲು ಬಂದಿದೆ. ಹಾಸನ, ಬೇಲೂರು, ಅರಸೀಕೆರೆ ತಾಲ್ಲೂಕಿನಲ್ಲಿ ಹೆಚ್ಚು ಬೆಳೆಯಲಾಗಿದೆ. ಮುಂಗಾರು ಹಂಗಾಮಿನಲ್ಲಿ 96 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದ್ದು, ಆರು ಲಕ್ಷ ಮೆಟ್ರಿಕ್‌ ಟನ್‌ ಮೆಕ್ಕೆ ಜೋಳದ ಉತ್ಪಾದನೆ ನಿರೀಕ್ಷಿಸಲಾಗಿದೆ. ಎಕರೆಗೆ 25ರಿಂದ 30 ಕ್ವಿಂಟಲ್‌ವರೆಗೆ ಇಳುವರಿ ಪಡೆದಿದ್ದಾರೆ.

ಕಳೆದ ವರ್ಷ ₹2,200–2,500 ರವರೆಗೆ ಪ್ರತಿ ಕ್ವಿಂಟಲ್‌ಗೆ ಮಾರಾಟವಾಗಿ ಲಾಭ ಗಳಿಸಿದ್ದರು. ಈ ವರ್ಷವೂ ಅದೇ ದರದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆ ಉಂಟಾಗಿದೆ. ಪ್ರಸ್ತುತ ಜೋಳದ ಬೆಲೆ ಕ್ವಿಂಟಲ್‌ ₹1000–₹1100 ಕ್ಕೆ ಕುಸಿದಿದೆ. ಶೇಕಡಾ 50ರಷ್ಟು ದರ ಕಡಿತವಾಗಿದೆ. ಬೆಳೆ ಕುಸಿತದ ಸಂಕಷ್ಟದೊಂದಿಗೆ ರೈತರು ನಷ್ಟದ ಸುಳಿಗೆ ಸಿಲುಕುವಂತಾಗಿದೆ.

ಮುಂಗಾರಿನಲ್ಲಿ ಜೋಳ ಬಿತ್ತನೆ ಮಾಡಿದ್ದ ರೈತರು ಬೆಳೆ ಕಟಾವು ಮಾಡಿ, ಜೋಳ ಒಣಗಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಆದರೆ, ಅಕಾಲಿಕ ಮಳೆಯಿಂದ ಬೆಳೆ ರಕ್ಷಿಸಿಕೊಳ್ಳಲು ಕಣದಲ್ಲಿ ಟಾರ್ಪಾಲ್‌ ಹೊದಿಸಿ, ಮಳೆ ನಿಲ್ಲುವುದನ್ನು ಕಾಯುತ್ತಿದ್ದಾರೆ. ಟಾರ್ಪಾಲ್‌ ಒಳಗಿರುವ ಜೋಳ ಮೊಳೆಕೆಯೊಡತೊಡಗಿದೆ. ಮಳೆ ನಿಲ್ಲದಿದ್ದರೆ ಜೋಳವನ್ನು ತಿಪ್ಪೆಗೆ ಎಸೆಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

‘ಜಿಲ್ಲೆಯಲ್ಲಿ ಉತ್ಪಾದನೆ ಆಗುವ ಮೆಕ್ಕೆಜೋಳದ ಬಹುಪಾಲು ಪಶು ಆಹಾರ ತಯಾರಿಕೆ ಹಾಗೂ ಪೌಲ್ಟ್ರಿ ಫಾರ್ಮ್‌ಗಳಿಗೆ ಬಳಕೆಯಾಗುತ್ತದೆ. ಲಾಕ್‌ಡೌನ್‌ ಅವಧಿಯಲ್ಲಿ ಪೌಲ್ಟ್ರಿ ಫಾರ್ಮ್‌ಗಳು ಭಾರಿ ನಷ್ಟ ಅನುಭವಿಸಿ ಬಾಗಿಲು ಮುಚ್ಚಿದ್ದವು. ಪಶು ಆಹಾರ ಉತ್ಪಾದನಾ ಘಟಕಗಳು ಬಂದ್ ಆಗಿದ್ದವು.‌ಕೇಂದ್ರ ಸರ್ಕಾರ ಮೆಕ್ಕೆಜೋಳ ಕ್ವಿಂಟಲ್‌ಗೆ ₹1850 ಬೆಂಬಲ ಬೆಲೆ ನಿಗದಿ ಮಾಡಿದೆ. ಜಿಲ್ಲೆಯಲ್ಲಿ ಜೋಳ ಖರೀದಿಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕಾಗಿದೆ. ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವ ಮೂಲಕ ಸರ್ಕಾರ ನೆರವಿಗೆ ಧಾವಿಸಬೇಕು’ ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.

‘ಹೊರ ರಾಜ್ಯದ ವರ್ತಕರು ಲಾರಿಗಳಲ್ಲಿ ಬಂದು ಕ್ವಿಂಟಲ್‌ಗೆ ₹800 ರಿಂದ ₹900ರಂತೆ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ದರ ಕುಸಿತದಿಂದ ಏನು ಮಾಡಬೇಕೋ ತೋಚುತ್ತಿಲ್ಲ’ ಎಂದು ಜೋಳ ಬೆಳೆಗಾರ ವಿಶ್ವನಾಥ್‌ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT