ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದಲ್ಲಿ ನಿತ್ಯ 170 ಆಮ್ಲಜನಕ ಸಿಲಿಂಡರ್‌ ಕೊರತೆ: ಜಿಲ್ಲಾಧಿಕಾರಿ ಗಿರೀಶ್‌‌

ತೀರಾ ಅವಶ್ಯವಿರುವ ರೋಗಿಗಳಿಗೆ ಮಾತ್ರ ಬಳಕೆ
Last Updated 6 ಮೇ 2021, 13:14 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ನಿತ್ಯ 170 ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಕೊರತೆಯಾಗುತ್ತಿದ್ದು, ತೀರಾ ಅವಶ್ಯವಿರುವ ರೋಗಿಗಳಿಗೆ ಮಾತ್ರ ಅದನ್ನು ಬಳಸಿಕೊಳ್ಳುವಂತೆ ವೈದ್ಯರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಮ್ಸ್‌ನಲ್ಲಿ 13 ಕೆಎಲ್ ಸಾಮರ್ಥ್ಯದ ಆಮ್ಲಜನಕ ಘಟಕವಿದ್ದು, ಅಲ್ಲಿನ ರೋಗಿಗಳಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ. ಆದರೆ ಖಾಸಗಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಕೊರತೆಯಾಗುತ್ತಿದೆ. ಜಿಲ್ಲೆಗೆ ನಿತ್ಯ 650 ಆಮ್ಲಜನಕ ಸಿಲಿಂಡರ್ ಬೇಕು. ಲಭ್ಯವಾಗುತ್ತಿರುವುದು 480 ಸಿಲಿಂಡರ್ ಮಾತ್ರ. ಪಕ್ಕದ ಜಿಲ್ಲೆಯಲ್ಲೂ ವಿಚಾರಿಸಿದ್ದು ಎಲ್ಲ ಕಡೆ ಇದೇ ಸಮಸ್ಯೆ ಇದೆ ಎಂದು ವಿವರಿಸಿದರು.

ಚಿಕ್ಕಮಗಳೂರಿಗೂ ಹಾಸನದಿಂದಲೇ ಆಮ್ಲಜನಕ ಸಿಲಿಂಡರ್ ಪೂರೈಕೆ ಆಗುತ್ತಿತ್ತು. ಈಗ ಅಭಾವ ಎದುರಾಗಿರುವುದರಿಂದ ಅಲ್ಲಿಗೆ ಕಳುಹಿಸಿಕೊಡಲು ಸಾಧ್ಯವಾಗುತ್ತಿಲ್ಲ. ವ್ಯಕ್ತಿಯ ಆರೋಗ್ಯ ಸ್ಥಿತಿಗತಿಯ ಮೇಲೆ ಆಮ್ಲಜನಕ ಬಳಕೆ ನಿಗದಿಯಾಗುತ್ತದೆ. ವೆಂಟಿಲೇಟರ್‌ನಲ್ಲಿರುವ ವ್ಯಕ್ತಿಗೆ ನಿತ್ಯ 15 ರಿಂದ 20 ಲೀಟರ್‌ ಆಮ್ಲಜನಕ ಬೇಕಾಗುತ್ತದೆ. ಒಂದು ಸಿಲಿಂಡರ್ 47 ಲೀಟರ್‌ ಸಾಮರ್ಥ್ಯ ಹೊಂದಿರುತ್ತದೆ. ಆದ್ದರಿಂದ ತೀರಾ ಅವಶ್ಯವಿರುವ ರೋಗಿಗಳಿಗೆ ಮಾತ್ರ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಬೆಡ್‍ಗಳ ಸಂಖ್ಯೆ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಆದರೆ ಆಮ್ಲಜನಕ ಪೈಪ್ ಸಂಪರ್ಕ ಕಲ್ಪಿಸುವುದು ಸ್ವಲ್ಪ ಸಮಸ್ಯೆಯಾಗಲಿದೆ. ಉಸ್ತುವಾರಿ ಸಚಿವರ ಜತೆ ಚರ್ಚಿಸಿದ್ದು, ತುರ್ತಾಗಿ ಆಗಬೇಕಿರುವ ಕೆಲಸಗಳನ್ನು ವಿಳಂಬವಿಲ್ಲದೆ ಮಾಡಲಾಗುತ್ತಿದೆ ಎಂದರು.

ಆಸ್ಪತ್ರೆಗಳಲ್ಲಿ ಖಾಲಿ ಇರುವ ನರ್ಸ್, ಡಿ ಗ್ರೂಪ್‌, ವೈದ್ಯಕೀಯ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ನಾಲ್ಕು ದಿನಗಳಲ್ಲಿ ಎಲ್ಲ ಹುದ್ದೆ ಭರ್ತಿ ಮಾಡಿಕೊಳ್ಳಲಾಗುವುದು. ಎಸ್‍ಡಿಆರ್‍ಎಫ್ ಅಡಿ ಹಣ ಖರ್ಚು ಮಾಡಲು ಅವಕಾಶವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT