ಸಕಲೇಶಪುರ: ‘ವಿಶ್ವಕರ್ಮರಲ್ಲಿ ಅಡಗಿರುವ ಕಲೆಯನ್ನು ಉಳಿಸಿ ಬೆಳೆಸಲು ಹಾಗೂ ಈ ಕಲೆಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವವರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ವರ್ಷ ಬಜೆಟ್‌ನಲ್ಲಿ ₹13 ಸಾವಿರ ಕೋಟಿ ನೀಡಿದೆ’ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ವಿಶ್ವಕರ್ಮ ಸಮಾಜದಿಂದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.
‘ಹಾಸನ ಜಿಲ್ಲೆಗೆ ಶಿಲ್ಪಕಲೆಗಳ ತವರೂರು ಎಂಬ ಹೆಸರು ಬರಲು ವಿಶ್ವಕರ್ಮರಿಂದಲೇ ಸೃಷ್ಟಿಯಾಗಿರುವ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಸೇರಿದಂತೆ ಹಲವು ಶಿಲ್ಪಕಲಾಕೃತಿಗಳೇ ಕಾರಣ’ ಎಂದರು.
ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ, ‘ಕಲೆ, ಸಾಹಿತ್ಯ, ಕ್ರೀಡೆಯಲ್ಲಿ ಹೆಚ್ಚು ತೊಡಗಿಕೊಂಡವರು ಸಹಜವಾಗಿ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಅದೇ ರೀತಿ ವಿಶ್ವಕರ್ಮರಿಗೆ ಕಲೆ ರಕ್ತಗತವಾಗಿ ಬಂದಿದೆ. ಇವರು ಈ ಸಮಾಜಕ್ಕೆ ಆಸ್ತಿಯಾಗಿದ್ದಾರೆ’ ಎಂದು ಬಣ್ಣಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಯಡೇಹಳ್ಳಿ ಆರ್. ಮಂಜುನಾಥ್ ಮಾತನಾಡಿ, ‘ದೇವರನ್ನೇ ಸೃಷ್ಟಿ ಮಾಡುವ ಕಲೆ ಇರುವ ವಿಶ್ವಕರ್ಮರು ನಮ್ಮ ನಿಮ್ಮೊಳಗೆ ಇರುವುದು ಹೆಮ್ಮೆಯ ವಿಷಯ. ಮನಸ್ಸಿಗೆ ನೋವಾದಾಗ, ಬೇಸರವಾದಾಗ ದೇವರ ವಿಗ್ರಹದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ಮೌನವಾಗಿ ಕುಳಿತುಕೊಳ್ಳುತ್ತೇವೆ. ಮನಸ್ಸಿಗೆ ನೆಮ್ಮದಿ ನೀಡುವಂತಹ ಸುಂದರವಾದ ಮೂರ್ತಿಯನ್ನು ವಿಶ್ವಕರ್ಮರು ಕೆತ್ತನೆ ಮಾಡುತ್ತಾರೆ. ರಥ, ಮನೆಯ ಬಾಗಿಲು, ಚಿನ್ನಾಭರಣಗಳ ತಯಾರಿಕೆ ಹಿಂದೆ ವಿಶ್ವಕರ್ಮರ ಕೈಚಳಕವಿದೆ’ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿಶ್ವಕರ್ಮ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಉಪವಿಭಾಗಾಧಿಕಾರಿ ಡಾ. ಎಂ.ಕೆ.ಶ್ರುತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಡಿ. ಗಂಗಾಧರನ್, ಕ್ಷೇತ್ರ ಶಿಕ್ಷಣ ಅಧಿಕಾರಿ ಪುಷ್ಪಾ, ಶಿರಸ್ತೇದಾರ್ ಉಮೇಶ್, ಮೋಹನ್, ಮಲೆನಾಡು ವೀರಶೈವ ಸಮಾಜ ಅಧ್ಯಕ್ಷ ಎಚ್.ಎನ್. ದೇವರಾಜ್, ಹಿಂದುಳಿದ ವರ್ಗಗಳ ತಾಲ್ಲೂಕು ಅಧ್ಯಕ್ಷ ಲೋಕೇಶ್, ತಾಲ್ಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಎಚ್.ಆರ್. ಮೋಹನ್‌ಕುಮಾರ್, ಕಾರ್ಯದರ್ಶಿ ರೇಣುಕಾ ಪ್ರಸಾದ್, ಪುರಸಭಾ ಸದಸ್ಯ ಉಮೇಶ್ ಆಚಾರ್, ವನಜಾಕ್ಷಿ, ಅನ್ನಪೂರ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.