ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಪೊಲೀಸರನ್ನೇ ಠಾಣೆಗೆ ಕರೆದೊಯ್ದ ಸಕಲೇಶಪುರ ಪೊಲೀಸರು

Published 14 ಫೆಬ್ರುವರಿ 2024, 15:26 IST
Last Updated 14 ಫೆಬ್ರುವರಿ 2024, 15:26 IST
ಅಕ್ಷರ ಗಾತ್ರ

ಹಾಸನ: ಅಪಹರಣ ಮಾಡುತ್ತಿದ್ದಾರೆ ಎಂದು ಭಾವಿಸಿ, ಆಂಧ್ರಪ್ರದೇಶದ ಪೊಲೀಸರನ್ನೇ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು, ಮಂಗಳವಾರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ರಕ್ತಚಂದನ ಮಾರಾಟ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಬೈಕ್ ಹತ್ತಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಗಳ ಆರೋಪಿ ಸುರೇಶ್ ಎಂಬಾತ ಆಂಧ್ರಪ್ರದೇಶದಿಂದ ತಲೆಮರೆಸಿಕೊಂಡು ಬಂದು ಸಕಲೇಶಪುರ ತಾಲ್ಲೂಕಿನ ವಲಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆತನ ಸುಳಿವು ಪತ್ತೆ ಮಾಡಿದ ಆಂಧ್ರಪ್ರದೇಶದ ಪಿ.ಎನ್. ಪಲ್ಲಿ ಠಾಣೆ ಪೊಲೀಸರ ತಂಡ, ಸಕಲೇಶಪುರ ತಾಲ್ಲೂಕಿಗೆ ಬಂದು ಆರೋಪಿ ಸುರೇಶ್‌ನನ್ನು ವಶಕ್ಕೆ ಪಡೆದಿತ್ತು.

ಆದರೆ ಮಫ್ತಿಯಲ್ಲಿದ್ದ ಪೊಲೀಸರನ್ನು ರೌಡಿಗಳೆಂದು ಭಾವಿಸಿದ ತೋಟದ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದರು. ಅದನ್ನು ಲೆಕ್ಕಿಸದ ಆಂಧ್ರಪ್ರದೇಶದ ಪೊಲೀಸರು ಆರೋಪಿಯನ್ನು ತಾವು ತಂದಿದ್ದ ಖಾಸಗಿ ವಾಹನಕ್ಕೆ ಹತ್ತಿಸಿಕೊಂಡು ಹಾಸನದ ಕಡೆಗೆ ಹೊರಟ್ಟಿದ್ದರು.

ಕಾರ್ಮಿಕರು ನೀಡಿದ ಮಾಹಿತಿ ಆಧರಿಸಿ ತೋಟದ ಮ್ಯಾನೇಜರ್, ‘ತಮ್ಮ ಕೂಲಿ ಕಾರ್ಮಿಕನನ್ನು ಯಾರೋ ಅಪಹರಿಸಿಕೊಂಡು ಹೋಗಿದ್ದಾರೆ’ ಎಂದು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆಂಧ್ರಪ್ರದೇಶದ ಪೊಲೀಸರು ತೆರಳುತ್ತಿದ್ದ ವಾಹನವನ್ನು ಬೆನ್ನಟ್ಟಿ‌ದ್ದು, ಬಾಳ್ಳುಪೇಟೆ ಬಳಿ ವಾಹನವನ್ನು ತಡೆದಿದ್ದಾರೆ.

ರಸ್ತೆಯಲ್ಲಿಯೇ ನಿಲ್ಲಿಸಿ ವಾಹನದಲ್ಲಿದ್ದವರ ವಿಚಾರಣೆ ನಡೆಸಿದ ಪೊಲೀಸರು, ಅವರ ವಿವರಣೆಯಿಂದ ತೃಪ್ತರಾಗದೇ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ವೇಳೆ, ಎಫ್‌ಐಆರ್ ಪ್ರತಿ, ಇತರೆ ದಾಖಲೆಗಳನ್ನು ತೋರಿಸಿದ ಆಂಧ್ರಪ್ರದೇಶದ ಪೊಲೀಸರು ತಾವು ಆರೋಪಿಯನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿರುವುದಾಗಿ ಸ್ಪಷ್ಟಪಡಿಸಿದರು. ನಿಜ ಸಂಗತಿ ಅರ್ಥ ಮಾಡಿಕೊಂಡ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಯನ್ನು ಆಂಧ್ರಪ್ರದೇಶ ಪೊಲೀಸರ ಜೊತೆಗೆ ಕಳುಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT