ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮ್ಸ್‌ಗೆ ಎರಡನೇ ಬಾರಿ ‘ಕಾಯಕಲ್ಪ ಪ್ರಶಸ್ತಿ’ ಗರಿ

Last Updated 30 ಏಪ್ರಿಲ್ 2022, 15:44 IST
ಅಕ್ಷರ ಗಾತ್ರ

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ (ಹಿಮ್ಸ್‌) ಎರಡನೇ ಬಾರಿಗೆ ಕೇಂದ್ರ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿದೆ.ರಾಜ್ಯದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವ ಏಕೈಕ ಸರ್ಕಾರಿ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇಂದ್ರ ಸರ್ಕಾರ ಪ್ರಾರಂಭಿಸಿದ ಸ್ವಚ್ಛ ಭಾರತ ಅಭಿಯಾನದ ಅಡಿ ಸ್ವಚ್ಛ ಆಸ್ಪತ್ರೆಗಳಿಗೆ ಹಲವಾರು ವಿಭಾಗಗಳಲ್ಲಿ ಕಾಯಕಲ್ಪ ಪ್ರಶಸ್ತಿ ನೀಡುತ್ತಿದ್ದು, ಸ್ವಚ್ಛತೆ, ಗುಣಮಟ್ಟದ ಹಾಗೂ ಸೋಂಕು ರಹಿತ ಆರೋಗ್ಯ ಸೇವೆ ನೀಡಲು ಪೋತ್ಸಾಹಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

ಒಟ್ಟು ಏಳು ಮಾನದಂಡಗಳಾದ ಶುಚಿತ್ವ ಮತ್ತು ಸ್ವಚ್ಛತೆ, ಆಸ್ಪತ್ರೆ ನಿರ್ವಹಣೆ, ತ್ಯಾಜ್ಯ ವಸ್ತುಗಳು ಹಾಗೂ ಸೋಂಕುಗಳ ನಿರ್ವಹಣೆಗೆ ನಿಗದಿಗೊಳಿಸಿದ್ದ 100 ಅಂಕ, ಆಸ್ಪತ್ರೆಯ ಬೆಂಬಲ ಸೇವೆಗಳು, ಸ್ವಚ್ಛತೆ ಪಾಲನೆಗೆ 50 ಅಂಕ, ಆಸ್ಪತ್ರೆಯ ಹೊರಾಂಗಣದ ಸ್ವಚ್ಛತೆ ಮತ್ತು ಸಾರ್ವಜನಿಕರಿಗೆ ಆರೋಗ್ಯದ ಕುರಿತು ಅರಿವು ಮೂಡಿಸುವ ವಿಭಾಗಕ್ಕೆ 100 ಅಂಕ ಸೇರಿ ಒಟ್ಟು 600 ಅಂಕಗಳಿಗೆ ಮೌಲ್ಯಮಾಪನ ಮಾಡಲಾಗಿದೆ.

ರಾಜ್ಯದ 18 ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಸೇರಿದಂತೆ ಒಟ್ಟು 53 ಜಿಲ್ಲಾ ಮಟ್ಟದ ಆಸ್ಪತ್ರೆಗಳ ಪೈಕಿ ಆಂತರಿಕ ಮೌಲ್ ಮಾಪನ ಮತ್ತು ರಾಜ್ಯದ ಬೇರೊಂದು ಸಂಸ್ಥೆ ಸಮಿತಿಯಿಂದ ಅತ್ಯಂತ ವೈಜ್ಞಾನಿಕವಾಗಿ ಹಾಗೂ ಅತ್ಯಂತ ವಿವರವಾಗಿ ಪರಿಶೀಲನೆಗೆ ಒಳಪಟ್ಟು ಮೌಲ್ಯಮಾಪನವಾದ ನಂತರ 30 ಆಸ್ಪತ್ರೆಗಳು ಶೇ 70ಕ್ಕಿಂತ ಹೆಚ್ಚು ಅಂಕ ಪಡೆದು ಬಾಹ್ಯ ಮೌಲ್ಯಮಾಪನಕ್ಕೆ ಅರ್ಹತೆ ಪಡೆದವು.

ಮೂರು ಹಂತದ ಪರಿಶೀಲನೆಯ ನಂತರ ಶೇಕಡವಾರು ಶೇ 86.48 ಫಲಿತಾಂಶ ಪಡೆದ ಹಿಮ್ಸ್ ಆಸ್ಪತ್ರೆಗೆ ಪ್ರಥಮ ಸ್ಥಾನ ನೀಡಿ ಪ್ರಶಸ್ತಿಯೊಂದಿಗೆ ₹ 50 ಲಕ್ಷ ನಗದು ಬಹುಮಾನ ನೀಡಲಾಗುತ್ತಿದೆ.

‘ದ್ವಿತೀಯ ಸ್ಥಾನ ಪಡೆದ ವಿಕ್ಟೋರಿಯಾ ಆಸ್ಪತ್ರೆಗೆ ₹ 10 ಲಕ್ಷ ಹಾಗೂ ನಂತರ ಸ್ಥಾನ ಪಡೆದಿರುವ 28 ಸಂಸ್ಥೆಗಳಿಗೆ ತಲಾ ₹ 3ಲಕ್ಷ ಸಮಾಧಾನಕರ ಬಹುಮಾನ ನೀಡಲಾಗುತ್ತಿದ್ದು, ಬಹುಮಾನದ ಹಣದಲ್ಲಿ ಶೇ 75ರಷ್ಟು ಆಸ್ಪತ್ರೆಯ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ. ಉಳಿದ ಶೇ 25ರಷ್ಟು ಶ್ರಮ ವಹಿಸಿದ ಎಲ್ಲ ಸಿಬ್ಬಂದಿಗೂ ಪ್ರೋತ್ಸಾಹ ಧನವನ್ನಾಗಿ ನೀಡಲಾಗುವುದು’ ಎಂದು ಹಿಮ್ಸ್‌ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಹೇಳಿದರು.

‘ಪ್ರಶಸ್ತಿ ಬರಲು ಕಾರಣರಾದ ಕಾಯಕಲ್ಪ ನೋಡಲ್ ಅಧಿಕಾರಿ ಡಾ.ಸಿದ್ಧರಾಮು ಎಸ್.ಮೇತ್ರಿ, ಟೀಮ್ ಲೀಡರ್‌ಗಳಾದ ಡಾ.ಪ್ರೇಮಲತಾ, ಡಾ.ಜಿ.ಎಂ.ವೆಂಕಟೇಶ್, ಡಾ.ಜಿ.ಡಿ.ಈಶ್ವರ್ ಪ್ರಸಾದ್, ಡಾ.ಎಚ್‌.ಜಿ.ಶ್ರೀಧರ್, ಡಾ. ಸಿ.ಎಸ್‌. ಮಂಜುನಾಥ್, ಡಾ.ಎಸ್. ಸುಧನ್ವ, ನಿಚಿತಾ ಕುಮಾರಿ ಅವರನ್ನು ಅಭಿನಂದಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT