ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಮಹಿಳಾ ಸಬಲೀಕರಣಕ್ಕೆ ‘ಮಮತೆ’ಯ ಸಹಾಯಹಸ್ತ

Published 8 ಮಾರ್ಚ್ 2024, 7:05 IST
Last Updated 8 ಮಾರ್ಚ್ 2024, 7:05 IST
ಅಕ್ಷರ ಗಾತ್ರ

ಹಳೇಬೀಡು: ಸ್ವಸಹಾಯ ಸಂಘಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಹಿಳಾ ಸ್ವಸಹಾಯ ಸಂಘಗಳನ್ನು ಬೆಳೆಸುವುದರೊಂದಿಗೆ ಕುಟುಂಬವನ್ನು ಉದ್ಧಾರ ಮಾಡಬಹುದು ಎಂಬುದನ್ನು ಸಮೀಪದ ತಿರುಮಲನಹಳ್ಳಿ ಪುಟ್ಟ ಗ್ರಾಮದ ಮಮತಾ ಸಾಧಿಸಿ ತೋರಿಸಿದ್ದಾರೆ.

ಅಡಗೂರಿನ ಯಗಚಿ ಸಂಜೀವಿನಿ ಸ್ವಸಹಾಯ ಸಂಘಗಳ ಗ್ರಾಮ ಪಂಚಾಯಿತಿ ಒಕ್ಕೂಟದಲ್ಲಿ ಮಮತಾ ಮುಖ್ಯ ಪುಸ್ತಕ ಬರಹಗಾರರು. ಆದರೆ ಸ್ವಸಹಾಯ ಸಂಘಗಳ ಲೆಕ್ಕ ಬರೆಯುವುದಕ್ಕೆ ಮಾತ್ರ  ಕೆಲಸವನ್ನು ಸೀಮಿತಗೊಳಿಸದೇ, ಸಂಘಗಳ ಬಲವರ್ಧನೆಯಲ್ಲಿ ತೊಡಗಿದ್ದಾರೆ. ಮಮತಾ ಪರಿಶ್ರಮದಿಂದ ಅಡಗೂರು ಸ್ವಸಹಾಯ ಸಂಘಗಳ ಒಕ್ಕೂಟದ ವಹಿವಾಟು ₹ 1 ಕೋಟಿಗೆ ಏರಿಕೆಯಾಗಿದೆ. ಸಂಘದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದರಿಂದ ಸಂಘಗಳ ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಮರುಪಾವತಿ ಮಾಡಿದವರಿಗೆ ಪುನಃ ಸಾಲ ಕೊಡಿಸುತ್ತಿರುವುದರಿಂದ ಸಂಘದ ಸದಸ್ಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ.

ಮಮತಾ ಅವರು ಛಲದಿಂದ ಮುನ್ನುಗ್ಗಿದ ಪರಿಣಾಮ ಅಡಗೂರಿನ ಸ್ವಸಹಾಯ ಸಂಘಗಳ ಒಕ್ಕೂಟ ಅಡಗೂರು ಬ್ರಾಂಡ್‌ನ ಊದುಬತ್ತಿ ತಯಾರಿಕಾ ಘಟಕ ನಡೆಸುತ್ತಿದೆ. ಅಡಗೂರು ಊದುಬತ್ತಿ ಸುತ್ತಲಿನ ಗ್ರಾಮಗಳಲ್ಲಿ ಮಾರಾಟವಾಗುತ್ತಿದೆ. ಘಟಕದಲ್ಲಿ 4 ಮಹಿಳೆಯರಿಗೆ ಕೆಲಸ ದೊರಕಿದೆ.

ಅಡಗೂರು ಭಾಗದ ಜನರು ಕೃಷಿಯನ್ನು ಹಾಸು, ಹೊದ್ದು ಮಲಗಿದ್ದಾರೆ. ಒಕ್ಕೂಟಕ್ಕೊಂದು ಟ್ರ್ಯಾಕ್ಟರ್ ಬೇಕು ಎಂಬುದು ಅವರ ಮಹಾದಾಸೆಯಾಗಿತ್ತು. ಸಂಘಗಳ ಚಟುವಟಿಕೆಯನ್ನು ಉತ್ತಮವಾಗಿ ನಡೆಸಿದ್ದರಿಂದ ಒಕ್ಕೂಟ ಒಂದು ಟ್ರ್ಯಾಕ್ಟರ್ ನಿರ್ವಹಣೆ ಮಾಡುತ್ತಿದೆ. ಟ್ರ್ಯಾಕ್ಟರ್ ಉದ್ದಿಮೆ ₹ 1.60 ಲಕ್ಷ ಆದಾಯದಲ್ಲಿದೆ.

ಸ್ವಸಹಾಯ ಸಂಘದ ಸದಸ್ಯೆ, ಪ್ರತಿನಿಧಿಯಾಗಿದ್ದ ಮಮತಾ 5 ವರ್ಷದ ಹಿಂದೆ ಮುಖ್ಯಪುಸ್ತಕ ಬರಹಗಾರರಾಗಿ ಒಕ್ಕೂಟ ಸೇರಿದಾಗ 30 ಸಂಘಗಳಿದ್ದವು. ಸ್ಥಗಿತವಾಗಿದ್ದ 10 ಸಂಘಗಳನ್ನು ಪುನರುಜ್ಜೀವನಗೊಳಿಸಿದರು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ವಸಹಾಯ ಸಂಘದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಾಲವನ್ನು ಕೊಡಿಸಿದರು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಮಹಿಳೆಯರನ್ನು ಒಗ್ಗೂಡಿಸಿ 27 ಹೊಸ ಸಂಘಗಳನ್ನು ರಚಿಸಿದರು. ಸಂಘದ ಸದಸ್ಯರಿಂದ ಉಳಿತಾಯ ಮಾಡಿಸಿದ್ದಲ್ಲದೆ ಸಾಲ ಕೊಡಿಸಿ ಬಡ ಕುಟುಂಬಗಳ ನೆರವಿಗೆ ನಿಂತರು.

ಈಗ ಅಡಗೂರು ಒಕ್ಕೂಟದಲ್ಲಿ 67 ಸಂಘಗಳಿವೆ. 808 ಮಂದಿ ಸದಸ್ಯರನ್ನು ಹೊಂದಿದೆ. ಒಕ್ಕೂಟ ಉತ್ತಮ ಒಕ್ಕೂಟ ಪ್ರಶಸ್ತಿ ಪಡೆದಿದೆ. ಮಮತಾ ಉತ್ತಮ ಎಂಬಿಕೆ ವೈಯಕ್ತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಿಂದೆ ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ಕಾಂತರಾಜು ಅವರೂ, ಮಮತಾ ಅವರ ಕಾರ್ಯಕ್ಷಮತೆಯನ್ನು ಕೊಂಡಾಡಿದ್ದರು. ಈಗಲೂ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಅಡಗೂರು ಒಕ್ಕೂಟ ಹೆಸರು ಮಾಡಿದೆ.

ಊದುಬತ್ತಿ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಮಮತಾ
ಊದುಬತ್ತಿ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಮಮತಾ

Quote - ಅತ್ತೆ ಉಮಾದೇವಿ ಪತಿ ಮಹೇಶ್ ಹಾಗೂ ಸಿವಿಲ್ ಎಂಜಿನಿಯರ್ ಆಗಿರುವ ಪುತ್ರ ಜಯಂತ್ ಅವರ ಸಹಕಾರದಿಂದ ಸ್ವಾವಲಂಬಿ ಬದುಕು ಸಾಗುತ್ತಿದೆ ಮಮತಾ ಮುಖ್ಯ ಪುಸ್ತಕ ಬರಹಗಾರರು ಯಗಚಿ ಸಂಜೀವಿನಿ ಸ್ವಸಹಾಯ ಸಂಘಗಳ ಗ್ರಾಮ ಪಂಚಾಯಿತಿ ಒಕ್ಕೂಟ

Cut-off box - ಕೋಳಿ ಸಾಕಾಣಿಕೆ ಹೈನುಗಾರಿಕೆ ಮಮತಾ ಅವರ ಸಾಧನೆ ಸ್ವಸಹಾಯ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ ಮಾತ್ರ ಸಿಮೀತವಾಗಿಲ್ಲ. ಪತಿ ಮಹೇಶ ಅವರಿಗೆ ಪಿತ್ರಾರ್ಜಿತವಾಗಿ ಸಿಕ್ಕಿದ ಆಸ್ತಿ ಎಂದರೆ ಕೇವಲ 30 ಗುಂಟೆ ಜಮೀನು. ವಿವಾಹವಾಗುವ ಮೊದಲು 200 ಕೋಳಿ ಸಾಕಾಣಿಕೆಯ ಪೌಲ್ಟ್ರಿ ಫಾರಂ ನಿರ್ವಹಿಸುತ್ತಿದ್ದರು. ವಿವಾಹವಾದ ನಂತರ ಕೋಳಿ ಉದ್ದಿಮೆ ಬೆಳೆಯಲಾರಂಭಿಸಿತು. ಕೋಳಿ ಸಾಕಾಣಿಕೆ ದ್ವಿಗುಣವಾಗ ತೊಡಗಿತು. ಮಮತಾ ಪತಿಗೆ ಬೆನ್ನೆಲುಬಾಗಿ ನಿಂತಿದ್ದರಿಂದ ಪೌಲ್ಟ್ರಿ ಫಾರಂನ ಕೋಳಿ ಸಾಕಾಣಿಕೆ 5000ಕ್ಕೆ ಬೆಳೆದಿದೆ. ಅವರ ಜಮೀನಲ್ಲಿ ಜಾನುವಾರು ಮೇವು ಆಹಾರಕ್ಕೆ ರಾಗಿ ಮಾತ್ರ ದೊರಕುತ್ತಿದೆ. ಎರಡು ಹಸು ಸಾಕಿಕೊಂಡು ಹೈನುಗಾರಿಕೆ ನಡೆಸುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ತಲಾ 10 ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ಆಹಾರಕ್ಕೆ ಬಳಸುವ ಶುದ್ಧ ತೆಂಗಿನ ಎಣ್ಣೆ ಘಟಕವನ್ನು ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT