ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಕೆರೆ, ಒಂಬತ್ತು ಉದ್ಯಾನ ಅಭಿವೃದ್ಧಿ: ಶಾಸಕ ಪ್ರೀತಂ ಗೌಡ

‘ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ತಿರಸ್ಕೃತ’
Last Updated 10 ಜನವರಿ 2021, 11:43 IST
ಅಕ್ಷರ ಗಾತ್ರ

ಹಾಸನ: ‘ನಗರದ ಹೃದಯ ಭಾಗದ ಚನ್ನಪಟ್ಟಣಕೆರೆಯನ್ನು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ತಿರಸ್ಕೃತಗೊಂಡು ತಿಪ್ಪೆಗುಂಡಿ ಸೇರಿತ್ತು’ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

‘ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಳಿ ಮನವಿ ಮಾಡಿ, ಕೇವಲ ಒಂದುಕೆರೆ ಅಭಿವೃದ್ಧಿ ಮಾಡುವ ಬದಲು ನಗರ ವ್ಯಾಪ್ತಿಯ 6 ಕೆರೆ, 9 ಉದ್ಯಾನಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಿದರು. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಒಂದು ವೇಳೆ ಹೇಮಾವತಿ ನದಿ ನೀರು ಸರಬರಾಜು ನಿಂತರೆ ಜನರು ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನೇ ಅವಲಂಬಿಸಬೇಕು. ಹಾಗಾಗಿ ನಗರಸುತ್ತಮುತ್ತಲಿನ ಕೆರೆಗಳ ಪುನಶ್ಚೇತನ ಅಗತ್ಯವಾಗಿತ್ತು. ನಾಗರಿಕರ ಜೊತೆಗೆ ಚರ್ಚಿಸಿ 6 ಕೆರೆಗಳ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದೇನೆ. ಕುಡಿಯಲು ನೀರೇ ಇಲ್ಲದಾಗ ಮಕ್ಕಳ ರೈಲು ಏಕೆ ಬೇಕು?ಅವರಿಗೆ ಬೇಕಾದ ಕಾಮಗಾರಿ ಕೈಗೊಂಡು ಹಣ ಹೊಡೆಯುವುದೇ ಅವರ ಉದ್ದೇಶ. ಚನ್ನಪಟ್ಟಣ ಕೆರೆಯನ್ನು ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ಧಿ ಪಡಿಸುವುದು ಎಂದರೆ ‘ಹೊಟ್ಟೆಗೆ ಹಿಟ್ಟಿಲ್ಲದೆ ಜುಟ್ಟಿಗೆ ಮಲ್ಲಿಗೆ ಹೂವು ಮುಡಿಸಿದಂತೆ’ ಎಂದು ಪರೋಕ್ಷವಾಗಿ ಶಾಸಕ ಎಚ್‌.ಡಿ. ರೇವಣ್ಣ ಅವರು ವಿರುದ್ಧ ಹರಿಹಾಯ್ದರು.

‘ಒಬ್ಬರು ಪ್ರಧಾನಿ, ಇನ್ನೊಬ್ಬರು ಮುಖ್ಯಮಂತ್ರಿಯಾಗಿ, ಮತ್ತೊಬ್ಬರು ಪ್ರಭಾವಿ ಸಚಿವರಾಗಿ ಅಧಿಕಾರನಡೆಸಿದ್ದಾರೆ. ಹಾಸನ ನಗರ ಸುತ್ತಮುತ್ತಲಿನ ಕೆರೆಗಳಿಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿದ್ದು, ಆ ಕೆರೆಗಳಿಗೆಎಸ್‌ಟಿಪಿ ಘಟಕ ನಿರ್ಮಾಣ ಮಾಡಬೇಕೆಂಬ ಕನಿಷ್ಠ ಜ್ಞಾನ ಅವರಿಗಿಲ್ಲ’ ಎಂದು ಜೆಡಿಎಸ್‌ ನಾಯಕರನ್ನುಟೀಕಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾಸನ ನಗರದ ಯುಜಿಡಿಗಾಗಿ ₹165 ಕೋಟಿ ಅನುದಾನನೀಡಿದ್ದಾರೆ. ನಗರದ 6 ಕೆರೆ ಮತ್ತು 9 ಉದ್ಯಾನ ಅಭಿವೃದ್ಧಿಗೆ ₹144 ಕೋಟಿ ನೀಡಿದ್ದಾರೆ. ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ’ ಎಂದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅಂದಾಜು 1200ಕ್ಕೂ ಹೆಚ್ಚು ಬಿಜೆಪಿಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಕಾನೂನು ಪ್ರಕಾರವೇ ನಿಗದಿಯಾಗಲಿದೆ. ಯಾರ ಹಸ್ತಕ್ಷೇಪವೂ ಇರುವುದಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ತಾಸು ಬಿಜೆಪಿ ಮುಖಂಡರು ಗುಪ್ತ ಸಭೆ ನಡೆಸಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದಾರೆ. ಅವರ ಅಧಿಕಾರವಧಿಯಲ್ಲಿ ಆರೀತಿ ಸಭೆಗಳನ್ನು ಮಾಡಿ ಮೀಸಲಾತಿ ನಿಗದಿ ಮಾಡಿರಬೇಕು’ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT