ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈನವಿರೇಳಿಸಿದ ಡರ್ಟ್ ಟ್ರ್ಯಾಕ್ ಸ್ಪರ್ಧೆ

ರಾಜ್ಯ ಹೊರ ರಾಜ್ಯಗಳಿಂದ ನೂರಾರು ಸ್ಪರ್ಧಿಗಳು ಭಾಗಿ
Last Updated 23 ಡಿಸೆಂಬರ್ 2018, 17:14 IST
ಅಕ್ಷರ ಗಾತ್ರ

ಹಾಸನ: ತಿರುಗು ಮುರುಗಿನ ರಸ್ತೆಯಲ್ಲಿ ಮೋಟರ್‌ ಬೈಕ್‌ಗಳು ರೊಂಯ್‌ ರೊಂಯ್‌ ಸದ್ದು ಮಾಡುತ್ತ ಮುನ್ನುಗ್ಗುತ್ತಿದ್ದರೆ ನೋಡುಗರ ಮೈ ಜುಮ್ಮೆನ್ನುತ್ತಿತ್ತು. ಸುತ್ತಲೂ ಯುವಕರು ಜಮಾಯಿಸಿದ್ದರು, ಶಿಳ್ಳೆ, ಚಪ್ಪಾಳೆ, ಕೇಕೆ ಮುಗಿಲು ಮುಟ್ಟಿತ್ತು. ನೆರೆದಿದ್ದವರು ತಮ್ಮವರು ಗೆಲ್ಲಲಿ ಎಂದು ಹುರಿದುಂಬಿಸುತ್ತ ಕುಣಿಯುತ್ತಿದ್ದರು.

ಇದೆಲ್ಲವೂ ಕಂಡು ಬಂದಿದ್ದು ನಗರದ ಅರಸೀಕೆರೆ ರಸ್ತೆಯಲ್ಲಿರುವ ಸಂಕೇನಹಳ್ಳಿ ಗೇಟ್ ಬಳಿ ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸಿಎಡಬ್ಲ್ಯೂ ರೇಸಿಂಗ್ ಹಾಗೂ ಡರ್ಟ್ ಟ್ರ್ಯಾಕ್ ಸ್ಪರ್ಧೆಯಲ್ಲಿ. ನೂರಾರು ಬೈಕ್ ಸವಾರರು ತಮ್ಮ ಶರವೇಗದ ಚಾಲನಾ ಕೌಶಲ್ಯ ಪ್ರದರ್ಶಿಸಿ ನೋಡುಗರನ್ನು ರೋಮಾಂಚನ ಗೊಳಿಸಿದರು.

ಸ್ಪರ್ಧೆಯಲ್ಲಿ ಒಬ್ಬರನ್ನು ಹಿಂದಿಕ್ಕಿ ಮತ್ತೊಬ್ಬರು ಗೆಲ್ಲಲು ನಡೆಸಿದ ಪೈಪೋಟಿಯಿಂದ ಅಲ್ಲಿ ಬಂದಿದ್ದ ನೂರಾರು ಕ್ರೀಡಾಸಕ್ತರಿಗೆ ಥ್ರಿಲ್ ನೀಡಿತು. ಟ್ರ್ಯಾಕ್ ರೇಸ್ ಕೆಸರು ಮಯವಾಗಿತ್ತು. ಮತ್ತೊಂದೆಡೆ ದೂಳು ತುಂಬಿತ್ತು. ಗುರಿ ಮುಟ್ಟು ಮೊಟಾರ್‌ ಬೈಕ್‌ ಚಾಲಕರು ವೇಗವಾಗಿ ಹೋಗುತ್ತಿದ್ದರೆ ಅನೇಕರು ಆಯ ತಪ್ಪಿ ಕೆಳಕ್ಕೆ ಬೀಳುತ್ತಿದ್ದರು. ಮತ್ತೆ ಕೆಲವು ತಾಂತ್ರಿಕ ದೋಷದಿಂದ ಅಂಕಣದಿಂದ ಹೊರ ನಡೆದರು.

ರಾಜ್ಯ ಹಾಗೂ ಹೊರ ರಾಜ್ಯದವಿವಿಧ ಭಾಗಗಳಿಂದ ಸುಮಾರು 150ಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಒಂದು ಬ್ಯಾಚ್ ನಲ್ಲಿ 10 ರಿಂದ 12 ಮಂದಿಯನ್ನು ಟ್ರ್ಯಾಕ್ ರೇಸ್ ನಲ್ಲಿ ಇಳಿಸಲಾಗಿತ್ತು. 20 ವರ್ಷ ವಯೋಮಿತಿಯಂದ ಹಿಡಿದು 60 ವರ್ಷದ ವರೆಗಿನ ಬೈಕ್ ರೈಡರ್ಸ್ ಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಬೆಂಗಳೂರು, ತುಮಕೂರು, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಅಲ್ಲದೇ, ಕೇರಳ, ಆಂಧ್ರಪ್ರದೇಶದಿಂದಲೂ ಬೈಕ್ ಸವಾರರು ಟ್ರ್ಯಾಕ್ ರೇಸ್ ನಲ್ಲಿ ಪಾಲ್ಗೊಂಡರು.

‘ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ವತಿಯಿಂದ ಇಂಥ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ನಾನಾ ರೀತಿಯ ಬಹುಮಾನ ನಿಗದಿ ಮಾಡಲಾಗಿದೆ. ಬೈಕ್ ಚಾಲಕರು ಟ್ರ್ಯಾಕ್ ನಲ್ಲಿ ಚಾಲನೆ ಮಾಡಿ ತಮ್ಮ ಚಾಲನಾ ಸಾಹಸ ಪ್ರದರ್ಶಿಸಿದ್ದಾರೆ. ಇದೇ ರೀತಿ ಆಸಕ್ತಿ ತೋರಿದರೆ ಮುಂದೆ ಇನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿ ಸಹಸ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತದೆ’ ಎಂದು ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸೋಮಶೇಖರ್ ತಿಳಿಸಿದರು.

ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಗಿರೀಗೌಡ, ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್, ದೇವರಾಜ್‌, ಎ.ಮಂಜು ಇದ್ದರು.

ಮೈಸೂರಿನ ಇಮ್ರಾನ್‌ ಪ್ರಥಮ

ಮೈಸೂರಿನ ಇಮ್ರಾನ್‌ ಪ್ರಥಮ ಸ್ಥಾನ ಗಳಿಸಿ ₹ 15 ಸಾವಿರ ನಗದು ಬಹುಮಾನವಾಗಿ ಪಡೆದರು, ಕನಕಪುರದ ನಟರಾಜ್‌ ದ್ವಿತಿಯ ಸ್ಥಾನ ಪಡೆದು ₹ 10 ತಮ್ಮದಾಗಿಸಿಕೊಂಡರು, ಬೆಂಗಳೂರು, ತುಮಕೂರು, ಕೇರಳ, ಮೈಸೂರು ಸೇರಿದಂತೆ 8 ಜನರಿಗೆ ಮೂರನೇ ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT