ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪ ಜಮೀನಿನಲ್ಲಿ ಅಧಿಕ ಆದಾಯ: ಆಲೂರು ರೈತ ಕುಟುಂಬದ ಯಶಸ್ವಿ ಕೃಷಿ

ಕೃಷಿ ಆದಾಯವೇ ಕುಟುಂಬಕ್ಕೆ ಆಧಾರ
Last Updated 26 ಸೆಪ್ಟೆಂಬರ್ 2020, 2:24 IST
ಅಕ್ಷರ ಗಾತ್ರ

ಆಲೂರು: ಕುಟುಂಬ ಸದಸ್ಯರು ಪರಿಶ್ರಮಪಟ್ಟರೆ ಅಲ್ಪ ಜಮೀನಿನಲ್ಲೇ ಅಧಿಕ ಆದಾಯ ಗಳಿಸಬಹುದು ಎಂಬುದಕ್ಕೆ, ಕೆಂಚಮ್ಮನ ಹೊಸಕೋಟೆ ಹೋಬಳಿ ಕಟ್ಟೆಹೊಳೆಯ ಕೃಷಿಕ ಪ್ರಕಾಶ್ ಕುಟುಂಬ ಸಾಕ್ಷಿಯಾಗಿದೆ.

ಪ್ರಕಾಶ್ ಅವರು ಕೆಂಚಮ್ಮನ ಹೊಸಕೋಟೆ ಹೋಬಳಿ ರೈತ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಒಂದೂವರೆ ಎಕರೆ ಗದ್ದೆ ಕೃಷಿ ಭೂಮಿ ಇದೆ. ಇದರಲ್ಲಿ ಹಲವು ಬೆಳೆಗಳನ್ನು ಬೆಳೆದು ವರ್ಷಕ್ಕೆ ₹ 3 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಹತ್ತು ಗುಂಟೆ ಗದ್ದೆಯಲ್ಲಿ ಭತ್ತ, 28 ಗುಂಟೆಯಲ್ಲಿ ಕಾಫಿ ಗಿಡ, 50 ಅಡಿಕೆ ಗಿಡ, 10 ತೆಂಗು, ಅರ್ಧ ಎಕರೆ ಶುಂಠಿ, ಮೆಣಸು ಬೆಳೆಯುತ್ತಾರೆ. ಶುಂಠಿ ಕಿತ್ತ ನಂತರ ಅದೇ ಜಾಗದಲ್ಲಿ ಹಸಿ ಮೆಣಸಿನಕಾಯಿ ಗಿಡ ಬೆಳೆದು ಒಂದು ವಾರಕ್ಕೆ ಸುಮಾರು ಎಂಟರಿಂದ ಹತ್ತು ಕ್ವಿಂಟಲ್ ಮಾರಾಟ ಮಾಡುತ್ತಾರೆ. ಮನೆ ಬಳಕೆಗೆ ಬೇಕಾದ ತರಕಾರಿ, ಸೊಪ್ಪುಗಳನ್ನೂ ಬೆಳೆದಿದ್ದಾರೆ.

ಒಂದು ವರ್ಷಕ್ಕೆ ಒಂದೂವರೆ ಕ್ವಿಂಟಲ್ ಅಡಿಕೆ, ಒಂದು ಚೀಲ ಬೀಜದ ಶುಂಠಿಗೆ 25-30 ಚೀಲ ಬೆಳೆಯುವ ಇವರು ಕೇವಲ 10 ಗುಂಟೆ ಗದ್ದೆಯಲ್ಲಿ 10 ಕ್ವಿಂಟಲ್ ಭತ್ತ, ಗೆಣಸು ಬೆಳೆಯುತ್ತಾರೆ. ಕೊಟ್ಟಿಗೆ ಮತ್ತು ಕುರಿ ಗೊಬ್ಬರವನ್ನು ಕೃಷಿಗೆ ಬಳಸುತ್ತಾರೆ. ಪತ್ನಿ ಮತ್ತು ಇಬ್ಬರು ಪುತ್ರರಿರುವ ಕುಟುಂಬವೂ ಸದಾ ಕೃಷಿಯಲ್ಲಿ ತೊಡಗಿಕೊಂಡಿರುತ್ತದೆ. ಇಬ್ಬರು ಪುತ್ರರು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಕಾಫಿ ಕೊಯ್ಲು, ಮೆಣಸಿನ ಕಾಯಿ ಬಿಡಿಸುವ ವೇಳೆಯಲ್ಲಿ ಮಾತ್ರ ಅಗತ್ಯವಿರುವಷ್ಟು ಕೂಲಿ ಕಾರ್ಮಿಕರನ್ನು ಪಡೆದು, ಉಳಿದಂತೆ ಇಡೀ ಕುಟುಂಬ ಕೃಷಿಯಲ್ಲಿ ತೊಡಗುತ್ತೇವೆ. ಕಳೆದ ವರ್ಷ ಅತಿಯಾದ ಮಳೆಯಾದ
ಕಾರಣ ಮೆಣಸು ಗಿಡ ಸ್ವಲ್ಪ ನಾಶವಾಗಿದ್ದು ಹೊರತುಪಡಿಸಿದರೆ, ಉಳಿದಂತೆ ಎಲ್ಲ ಬೆಳೆಯೂ ಚೆನ್ನಾಗಿದೆ. ಅಲ್ಪ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ಗಮನಿಸಿರುವ ಕೃಷಿ ಇಲಾಖೆ ಅಧಿಕಾರಿಗಳು ಪ್ರೋತ್ಸಾಹಿಸಿದ್ದಾರೆ ಎನ್ನುತ್ತಾರೆ ಪ್ರಕಾಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT