ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ವರ್ಗಗಳ ಧ್ವನಿಯಾಗಿದ್ದ ಶ್ರೀನಿವಾಸ್‌: ರೈತ ಹೋರಾಟಗಾರನಿಗೆ ನುಡಿನಮನ

Last Updated 23 ನವೆಂಬರ್ 2020, 17:29 IST
ಅಕ್ಷರ ಗಾತ್ರ

ಹಾಸನ: ಹೋರಾಟಗಾರ ಕೊಟ್ಟೂರು ಶ್ರೀನಿವಾಸ್‌ ಅವರು ರೈತ, ಕಾರ್ಮಿಕ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿದ್ದರು ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ರಾಜ್ಯ ರೈತ ಸಂಘ, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ರೈತ, ದಲಿತ, ಕಾರ್ಮಿಕ ಮತ್ತು ಜನಪರ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಕೊಟ್ಟೂರು ಶ್ರೀನಿವಾಸ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸದಾ ಜೋಳಿಗೆ, ಹಸಿರು ಶಾಲು ಹಾಕಿಕೊಂಡು ಕೈಯಲ್ಲಿ ತಮಟೆ ಹಿಡಿದಿರುತ್ತಿದ್ದ ಅವರು, ಹೋರಾಟದ ವಿಷಯದಲ್ಲಿ ಜ್ಞಾನ ಮತ್ತು ಅನುಭವ ಹೊಂದಿದ್ದರು. ಹೋರಾಟಗಾರ ತನ್ನ ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ದುಡಿಯುವ ವರ್ಗಗಳ ಧ್ವನಿಯಾಗಿದ್ದ ಅವರ ಬದುಕು, ಹೋರಾಟ ಮುಂದಿನ ಹೋರಾಟಗಾರರಿಗೆ ಅಧ್ಯಯನ ವಿಷಯವಾಗಬೇಕು. ಕೇವಲ ಇಂತಹ ಕಾರ್ಯಕ್ರಮಗಳಿಗೆ ಸೀಮಿತವಾಗದೇ ಸಾಹಿತ್ಯಕ್ಕೆ ರೂಪಾಂತರಗೊಳ್ಳಬೇಕು ಎಂದು ಸಲಹೆ ನೀಡಿದರು.

ಹಿಂದೆ ಹೋರಾಟಗಾರರ ರಕ್ಷಣೆಗೆ ಕಾನೂನಿನ ಬೆಂಬಲ ಇತ್ತು. ಆದರೆ ಈಗ ಕಾನೂನುಗಳನ್ನೇ ತಿದ್ದುಪಡಿ ಮಾಡುತ್ತಿದೆ.
ಮುಂದಿನ ಮೂವತ್ತು ವರ್ಷ ದೇಶದಲ್ಲಿ ಕೆಟ್ಟ ಸನ್ನಿವೇಶ ನೋಡಬೇಕಾಗುತ್ತದೆ. ಹಾಗಾಗಿ ಮುಂದೆ ಗಟ್ಟಿಯಾದ ಹೋರಾಟಗಳು ಅಗತ್ಯವಿದೆ ಎಂದು ಕರೆ ನೀಡಿದರು.

ಕೊಟ್ಟೂರು ಶ್ರೀನಿವಾಸ್ ಅವರ ಪತ್ನಿ ಪ್ರಮೀಳಾ ಮಾತನಾಡಿ, ‘ಮಕ್ಕಳಿಗೆ ನಾಟಕ, ನೃತ್ಯ ಕಲಿಸುವಾಗ ವೈಚಾರಿಕತೆ,
ಸದಾಭಿರುಚಿಯ ನೆಲೆಗಟ್ಟಿನಲ್ಲಿ ಕಲಿಸುವಂತೆ ಶ್ರೀನಿವಾಸ್‌ ಪ್ರೇರೇಪಿಸುತ್ತಿದ್ದರು. ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ಉತ್ತಮ, ಸ್ನೇಹಿತನಂತೆ, ಮಾರ್ಗದರ್ಶಕನಂತೆ ಇದ್ದರು. ಶ್ರಿನಿವಾಸ್ ನಿಧನರಾದರೆಂದು ನನ್ನ ಮರೆಯಬೇಡಿ. ರೈತ ಸಂಘದ ಪ್ರತಿ ಹೋರಾಟಕ್ಕೂ ನನ್ನನ್ನು ಕರೆಯಿರಿ. ಮುಂದೆ ನಿಂತು ಹೋರಾಟದಲ್ಲಿ ಭಾಗಿಯಾಗುತ್ತೇನೆ’ ಎಂದು ಕಂಬನಿ ಮಿಡಿದರು.

ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ ಹಾಗೂ ದೆಹಲಿಯಲ್ಲಿ ನಡೆಯುವ ಬೃಹತ್‌ ಪ್ರತಿಭಟನೆ ಬೆಂಬಲಿಸಿ ದೇಶದಾದ್ಯಂತ ಏಕಕಾಲದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ಚರ್ಚಿಸಲಾಯಿತು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.‌ ನವೀನ್ ಕುಮಾರ್, ದಲಿತ ಹಕ್ಕುಗಳ ವೇದಿಕೆ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ಕಲಾವಿದ ಕೆ.ಟಿ. ಶಿವಪ್ರಸಾದ್‌, ದಸಂಸ ಮುಖಂಡ ಎಚ್‌.ಕೆ. ಸಂದೇಶ್‌, ರೈತ ಸಂಘದ ಬಾಬು, ಕಲಾವಿದ ಗ್ಯಾರಂಟಿ ರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT