ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್ ಪಕ್ಷದ ವಾಹನಕ್ಕೆ ಕಲ್ಲು ತೂರಾಟ: ಹೊಳೆನರಸೀಪುರದಲ್ಲಿ ಲಾಠಿ ಪ್ರಹಾರ

Last Updated 18 ಆಗಸ್ಟ್ 2022, 11:29 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪಟ್ಟಣದಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲು ಬಂದಿದ್ದ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರ ವಾಹನದ ಮೇಲೆ ಗುರುವಾರ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿದರು.

ಮಧ್ಯಾಹ್ನ 12.30 ರ ವೇಳೆಗೆ ಪಟ್ಟಣಕ್ಕೆ ಬಂದ 150 ಕ್ಕೂ ಹೆಚ್ಚು ಕೆ.ಆರ್.ಎಸ್. ಪಕ್ಷದ ಸದಸ್ಯರು, ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬಯಲುರಂಗ ಮಂದಿರದ ಆವರಣದಲ್ಲಿ ಪ್ರತಿಭಟನೆ ಪ್ರಾರಂಭಿಸಿದರು.

ಈ ಮಧ್ಯೆ ಕೆಆರ್‌ಎಸ್ ಪಕ್ಷದ ವ್ಯಕ್ತಿಯೊಬ್ಬ ನಮ್ಮ ಯುವಕನ ಮೇಲೆ ಹಲ್ಲೆ ನಡೆಸಿ, ದೂರು ದಾಖಲಿಸಿದ್ದರೂ ಆತನನ್ನು ಬಂಧಿಸಿಲ್ಲ ಎಂದು ಆರೋಪಿಸಿ ಪಟ್ಟಣದ ಸಾವಿರಕ್ಕೂ ಹೆಚ್ಚು ಯುವಕರು, ಪೊಲೀಸರು ಹಾಗೂ ಕೆಆರ್‌ಎಸ್ ಪಕ್ಷದ ವಿರುದ್ದ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ರವಿಕೃಷ್ಣಾರೆಡ್ಡಿ ಮಾತನಾಡುತ್ತಿರುವಾಗ, ಬಯಲುರಂಗ ಮಂದಿರದ ಹೊರಗಡೆ ಜಮಾಯಿಸಿದ ಸಾವಿರಾರು ಜನರು, ಕೆಆರ್‌ಎಸ್ ಪಕ್ಷದ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು.

ಪರಿಸ್ಥಿತಿ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ರವಿಕೃಷ್ಣಾರೆಡ್ಡಿ ಜೊತೆ ಮಾತನಾಡಿ ಕಾರ್ಯಕ್ರಮವನ್ನು ಕೊನೆಗೊಳಿಸಿದರು.

ಕೆಆರ್‌ಎಸ್ ಪಕ್ಷದ ಸದಸ್ಯರನ್ನು ಮೂರು ಪೊಲೀಸ್ ವಾಹನದಲ್ಲಿ ಕೂರಿಸಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಬಯಲು ರಂಗಮಂದಿರದಿಂದ ಹೊರ ತರುವ ವೇಳೆಯಲ್ಲಿ ಕೆಆರ್‌ಎಸ್ ಪಕ್ಷದ ವಾಹನದ ಮೇಲೆ ಯುವಕರು ಕಲ್ಲುಗಳನ್ನು ತೂರಿದರು.


ಹಿನ್ನೆಲೆ: ‘ಕೆ.ಆರ್.ಎಸ್ ಪಕ್ಷದವರು ಎನ್ನಲಾದ ವ್ಯಕ್ತಿಗಳು ಸರ್ಕಾರಿ ಕಚೇರಿಗಳ ವಿಡಿಯೊ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬನಿಗೆ, ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ’ ಎಂದು ಪಟ್ಟಣದ ಕೆಲವು ಯುವಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೆಆರ್‌ಎಸ್ ಪಕ್ಷದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ ಕೇಶವಮೂರ್ತಿ ಅವರು ಪೊಲೀಸ್ ಠಾಣೆಗೆ ಬಂದು ವಿಚಾರಿಸಿ ಹೊರಬರುವಾಗ, ಅವರ ಮೇಲೆ ಕೆಲವು ಯುವಕರು ಹಲ್ಲೆ ನಡೆಸಿದ್ದರು. ಇದಕ್ಕೆ ಪೊಲೀಸರೇ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಕೆಆರ್‌ಎಸ್ ಪಕ್ಷದ ರಾಜ್ಯ ಸಮಿತಿಯ 150 ಕ್ಕೂ ಹೆಚ್ಚು ಜನರು ಗುರುವಾರ ಹೊಳೆನರಸೀಪುರ ಚಲೋ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕೆಆರ್‌ಸ್ ಪಕ್ಷದ ರಮೇಶ್ ಬೂನಹಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ನಿಂಗೇಗೌಡ, ಯುವ ಘಟಕದ ಅಧ್ಯಕ್ಷ ರಘು ಜಾಣೆಗೆರೆ, ಕೇಶವಮೂರ್ತಿ, ಸಿ.ಎನ್. ದೀಪಕ್ ಇದ್ದರು.ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ತಮ್ಮಯ್ಯ ಡಿವೈಎಸ್‌ಪಿ ಮುರಳೀಧರ್, ನಾಲ್ವರು ಇನ್‌ಸ್ಪೆಕ್ಟರ್‌, 11 ಜನ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಮೀಸಲು ಪೊಲೀಸ್ ಪಡೆಯ 4 ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT