ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕಲೆಯಲ್ಲಿ ಛಾಪು ಮೂಡಿಸಿದ ಶಿಕ್ಷಕ

ಕಲೆ, ಸಂಸ್ಕೃತಿಯ ರಕ್ಷಣೆಗೆ ‘ಜೇನುಗೂಡು’
Last Updated 16 ಅಕ್ಟೋಬರ್ 2018, 19:25 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಶಿಕ್ಷಕ ವೃತ್ತಿಯ ಜೊತೆಗೆ ಜಾನಪದ ಕಲೆಯಲ್ಲಿ ಪಟ್ಟಣದ ಕಲಾವಿದ ಶಿವನಗೌಡ ಪಾಟೀಲ ಛಾಪು ಮೂಡಿಸುತ್ತಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನ ಶಿವನಗೌಡ ಪಾಟೀಲರಿಗೆ ಅವರ ತಂದೆಯಿಂದ ಜಾನಪದ ಕಲೆ ಬಳುವಳಿಯಾಗಿ ಬಂದಿದೆ. ಬಯಲಾಟದ ಕಲಾವಿದರಾದ ತಂದೆ ರಾಮನಗೌಡ ಪಾಟೀಲರ ಜೊತೆ ಚಿಕ್ಕಂದಿನಿಂದಲೇ ಭಾಗವಹಿಸಿ ಭಜನೆ, ಬಯಲಾಟದ ಕಲೆಯನ್ನು ಕರಗತ ಮಾಡಿಕೊಂಡರು.

ತಂದೆಯ ಒಡನಾಟದಿಂದ ಕಲಾವಿದರಾಗಿ ರೂಪುಗೊಳ್ಳುವಂತಾಯಿತು. ಮಂಡ್ಯ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕೆಲಸ ಮಾಡಿರುವ ಅವರು, ಸದ್ಯ ಚನ್ನರಾಯಪಟ್ಟಣದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯ ಜೊತೆಗೆ ಕಲಾವಿದರನ್ನು ಒಗ್ಗೂಡಿಸಿ ‘ಜೇನುಗೂಡು’ ಜನಪದ ಗಾಯನ ತಂಡವನ್ನು ಕಟ್ಟಿ 25 ವರ್ಷಗಳಿಂದ ಜಾನಪದ, ಭಾವಗೀತೆ ಭಕ್ತಿಗೀತೆಯ ಗಾನಸುಧೆ ಹರಿಸಿದ್ದಾರೆ.

ಯುವಜನ ಮಹೋತ್ಸವ, ಜಾತ್ರೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಹೊಯ್ಸಳ ಉತ್ಸವ, ಮಡಿಕೇರಿ ದಸರಾ, ಆಕಾಶವಾಣಿ, ಜಾನಪದ ಜಾತ್ರೆ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಮಹೋತ್ಸವ, ವಚನ ಸಾಹಿತ್ಯ ಸಮ್ಮೇಳನ ಸೇರಿ ಹಲವು ಕಡೆ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಶಿವನಗೌಡ ಪಾಟೀಲರ ತಂಡಕ್ಕಿದೆ.

ಜನಪದ ಕಲೆ, ಸಂಸ್ಕೃತಿಯ ರಕ್ಷಣೆಗಾಗಿ ಜೇನುಗೂಡು ಎಂಬ ಕಾರ್ಯಕ್ರಮ ರೂಪಿಸಿ ಶಾಲಾ-ಕಾಲೇಜು, ವಿವಿಧ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಪ್ರತಿ ತಿಂಗಳು ಜಾನಪದ ಗೀತ ಗಾಯನ ನಡೆಸಿಕೊಡುತ್ತಾರೆ. ಇವರಿಗೆ ಉಪನ್ಯಾಸಕ ಟಿ.ಆರ್. ಸ್ವಾಮಿ, ಶಿಕ್ಷಕ ಆರ್.ಸಿ. ರಮೇಶ್, ಪುತ್ರಿ ಪ್ರಿಯಾಂಕ ಪಾಟೀಲ್ ಸಾಥ್ ನೀಡುತ್ತಾರೆ. ಈವರೆಗೂ 250 ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಗೀಗೀ ಪದ, ಲಾವಣಿ, ಕೋಲಾಟದ ಹಾಡು, ಸಾಕ್ಷರ ಗೀತೆ, ಸಂತ ಶಿಶುನಾಳ ಶರೀಫ್ ಅವರ ತತ್ವಪದಗಳು, ಸುಗ್ಗಿಯ ಹಾಡು, ಮಲೆ ಮಹದೇಶ್ವರ ಸ್ವಾಮಿ, ನಂಜನಗೂಡು ನಂಜುಂಡೇಶ್ವರ ಸ್ವಾಮಿ ಕುರಿತ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.

ಗಾನಸುಧೆಯ ಜತೆಗೆ ‘ದಾರಿ ದೀಪ’ ಕವನ ಸಂಕಲನ, ‘ಕೆಟ್ಟ ಮೇಲೆ ಬುದ್ಧಿ ಬಂತು’ ನಾಟಕ ರಚಿಸಿದ್ದಾರೆ.

ಸಂದ ಪ್ರಶಸ್ತಿಗಳು: ಶಿವನಗೌಡ ಪಾಟೀಲರ ಕಲಾ ಸೇವೆ ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಶಸ್ತಿ, ಬಸವ ಜಯಂತಿ ಪುರಸ್ಕಾರ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಳ್ಳಿ ಹಬ್ಬದ ಸನ್ಮಾನ, ಜಾನಪದ ಜಾಣ ಪ್ರಶಸ್ತಿ, ಜನಪದ ರಂಗೋತ್ಸವ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ತಾಲ್ಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಸೇರಿ ವಿವಿಧ ಸಂಘ, ಸಂಸ್ಥೆಗಳು ಸನ್ಮಾನಿಸಿವೆ.

‘ಜನಪದ ಕಲಾ ಪ್ರಕಾರವನ್ನು ಕಲಿಯುವ ಮೂಲಕ ನೆಲ ಮೂಲದ ಪರಂಪರೆಯನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಯುವ ಜನಾಂಗದ ಮೇಲಿದೆ. ಈ ನಿಟ್ಟಿನಲ್ಲಿ ಆಸಕ್ತಿ ರೂಡಿಸಿಕೊಳ್ಳಬೇಕಿದೆ’ ಎನ್ನುತ್ತಾರೆ ಕಲಾವಿದ ಶಿವನಗೌಡ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT