ಹಾಸನ: ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಎ ಮತ್ತು ಬಿ ವೃಂದದ 384 ಹುದ್ದೆಗಳಿಗೆ ಆ.27 ರಂದು ನಡೆಯಲಿರುವ ಪೂರ್ವಭಾವಿ ಪರೀಕ್ಷೆಯನ್ನು ಯಾವುದೇ ಲೋಪದೋಷಗಳು ಇಲ್ಲದಂತೆ ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿಯೂ ಶಾಂತಿಯುತವಾಗಿ ನಡೆಸಲು ಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಸತ್ಯಭಾಮಾ, ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರೀಕ್ಷಾ ಪೂರ್ವ ಸಿದ್ಧತೆ ಕುರಿತಾದ ಸಭೆಯಲ್ಲಿ ಅವರು ಮಾತನಾಡಿದರು.
ಪರೀಕ್ಷೆಯ ಹಿಂದಿನ ದಿನವೇ ವ್ಯವಸ್ಥೆಯ ಬಗ್ಗೆ ಮೇಲ್ವಿಚಾರಕರು ಖಾತರಿಪಡಿಸಿಕೊಳ್ಳಬೇಕು. ಆಸನ ವ್ಯವಸ್ಥೆ, ನೋಂದಣಿ ಸಂಖ್ಯೆಗಳನ್ನು ಡೆಸ್ಕ್ ಮೇಲೆ ನಮೂದಿಸುವುದು, ಪರೀಕ್ಷೆಗೆ ಸಂಬಂಧಿಸಿದ ಆಸನ ನಕ್ಷೆಯನ್ನು ಪ್ರತಿ ಕೊಠಡಿ, ಮಹಡಿ ಹಾಗೂ ಅಭ್ಯರ್ಥಿಗಳು ತೆರಳಬೇಕಾದ ಮಾರ್ಗದ ಮಾಹಿತಿಯನ್ನು ಚಿಹ್ನೆಗಳ ಸಹಿತ ಪರೀಕ್ಷೆಯ ದಿನದಂದು ಆವರಣದಲ್ಲಿನ ಪ್ರಮುಖ ಸ್ಥಳದಲ್ಲಿ ಪ್ರಕಟಿಸಬೇಕು. ಸೂಚನಾ ಫಲಕಗಳನ್ನು ಮುಖ್ಯದ್ವಾರದಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳ ಕುರಿತು ಆಯೋಗದಿಂದ ಒದಗಿಸಲಾಗುವ ಭಿತ್ತಿ ಪತ್ರಗಳನ್ನು ಅಭ್ಯರ್ಥಿಗಳು ಓದಿಕೊಳ್ಳಲು ಅನುಕೂಲವಾಗುವಂತೆ ಸೂಚನಾ ಫಲಕದಲ್ಲಿ ಸೂಕ್ತ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಕೊಠಡಿ ವಿಶಾಲವಾಗಿದ್ದಲ್ಲಿ ಪ್ರತಿ 24 ಅಭ್ಯರ್ಥಿಗಳಿಗೆ ಒಂದರಂತೆ ಬ್ಲಾಕ್ ಮಾಡಿ, ಪ್ರತ್ಯೇಕವಾಗಿ ಸಂವೀಕ್ಷಕರನ್ನು ನೇಮಿಸಬೇಕು. ಸಂವೀಕ್ಷಕರು ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳ ಪಕ್ಕದಲ್ಲಾಗಲಿ ಅಥವಾ ಗೈರು ಹಾಜರಾದ ಅಭ್ಯರ್ಥಿಗಳ ಸ್ಥಳದಲ್ಲಾಗಲಿ ಕುಳಿತುಕೊಳ್ಳಬಾರದು ಎಂದು ಸೂಚನೆ ನೀಡಬೇಕು. ಸಂವೀಕ್ಷಕರಿಗೆ ಪ್ರತಿ ಕೊಠಡಿಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು ಎಂದರು.
ಪರೀಕ್ಷಾ ಕಾರ್ಯಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಆಯೋಗದಿಂದ ನಿಯೋಜಿತರಾಗುವ ಅಧಿಕಾರಿ, ಸಿಬ್ಬಂದಿ ಜೊತೆ ಸಮನ್ವಯ ಸಾಧಿಸಿ ಪರೀಕ್ಷಾ ಕಾರ್ಯಗಳ ಸುಲಲಿತ ನಿರ್ವಹಣೆಗೆ ಸಹಕರಿಸುವಂತೆ ಸೂಚಿಸಿದರು.
ಪ್ರವೇಶ ಪತ್ರ ಹಾಗೂ ಮೂಲ ಗುರುತಿನ ಚೀಟಿ ಹಾಜರುಪಡಿಸದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶಿಸಲು ಅನುಮತಿ ನೀಡದಿರಲು ಮೇಲ್ವಿಚಾರಕರಿಗೆ ಸೂಚಿಸಬೇಕು. ಒ.ಎಂ.ಆರ್. ಉತ್ತರ ಹಾಳೆಗಳ ಹಾಗೂ ಪ್ರಶ್ನೆ ಪತ್ರಿಕೆಗಳ ಬಂಡಲ್‍ಗಳನ್ನು ತೆರೆಯುವಾಗ ಹಾಜರಿದ್ದು, ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‍ಗಳ ಮೊಹರು ಕ್ರಮಬದ್ಧವಾಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಂಡು ದೃಢೀಕರಣ ಪತ್ರವನ್ನು ನೀಡುವಂತೆ ತಿಳಿಸಿದರು.
ಪರೀಕ್ಷೆ ಪ್ರಾರಂಭವಾಗುವ ಮುನ್ನ ಒ.ಎಂ.ಆರ್. ಉತ್ತರ ಹಾಳೆಗಳನ್ನು ಕೊಠಡಿವಾರು ಸರಿಯಾಗಿ ಹಂಚಿಕೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಖಜಾನೆ ಉಪ ನಿರ್ದೇಶಕಿ ಕವಿತಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಕೆ. ಪಾಂಡು, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಪರೀಕ್ಷಾ ಮೇಲ್ವಿಚಾರಕರು, ವೀಕ್ಷಕರು ಹಾಜರಿದ್ದರು.
ಎಲೆಕ್ಟ್ರಾನಿಕ್ ವಸ್ತುಗಳು ನಿಷೇಧ
ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ ಸಿಬ್ಬಂದಿ ಅಭ್ಯರ್ಥಿಗಳಿಗೆ ಮೊಬೈಲ್ ಫೋನ್ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಉಪಯೋಗವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ತಿಳಿಸಿದರು. ಪರೀಕ್ಷಾ ಹಿಂದಿನ ದಿನ ಸಿಸಿಟಿವಿ ಕ್ಯಾಮೆರಾ ಬಾಡಿ ಕ್ಯಾಮೆರಾ ಜಾಮರ್‌ಗಳನ್ನು ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸಬೇಕು. ಅವುಗಳು ಕಾರ್ಯನಿರ್ವಹಣೆಯ ಕುರಿತು ಸ್ಥಳೀಯ ನಿರೀಕ್ಷಣಾಧಿಕಾರಿಗಳು ಹಾಗೂ ವೀಕ್ಷಕರಿಂದ ದೃಢೀಕರಣವನ್ನು ಪಡೆಯಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.